Advertisement
ಮಗಳಿಗೆ ಅಪ್ಪಂನೆಂದರೆ ಎಲ್ಲಿಲ್ಲದ ಅಕ್ಕರೆ, ಪ್ರೀತಿ, ನಂಬಿಕೆ ಹಾಗೆಯೇ ನನಗೂ ಕೂಡ. ನನ್ನಪ್ಪ ನನ್ನೆಲ್ಲಾ ರೀತಿ ನೀತಿಯ ರೂವಾರಿ, ಸಲಹೆಗಾರ. ಅಂತಹ ನನ್ನಪ್ಪನೊಂದಿಗೆ ನಾನಿರುವುದು ಮಲೆನಾಡಿನ ಒಂದು ಪುಟ್ಟ ಊರು.
Related Articles
Advertisement
ಅಪ್ಪ ಹೆಚ್ಚೆನೂ ಓದಿಲ್ಲವಾದರೂ ಅಂದಿನ ಕಾಲದಲ್ಲಿಯೇ ಪಿಯುಸಿ ಓದಿದ್ದರೂ ಮನೆಯಲ್ಲಿನ ಸಮಸ್ಯೆಗಳಿಂದಾಗಿ ಮುಂದೆ ಓದಲಿಲ್ಲವಾದರೂ ಇಂದಿನ ಉನ್ನತ ಪದವಿ ಪಡೆದವರಿಗಿಂತ ಏನೂ ನನ್ನಪ್ಪ ಕಡಿಮೆ ಇಲ್ಲ.
ಮುಂದೆ ಸಾವಿರ ಜನ ಇದ್ದರೂ ಧೈರ್ಯವಾಗಿ, ಸ್ಪಷ್ಟವಾಗಿ, ಸರಳವಾಗಿ ತಮ್ಮ ಮಾತಿನ ಮೂಲಕ ಅವರನ್ನೆಲ್ಲ ಮಂತ್ರಮುಗªವಾಗಿಸಬಲ್ಲರು. ಅಪ್ಪನಲ್ಲಿ ಇರುವ ಹೊಸ ವಿಷಯಗಳನ್ನು ಕಲಿಯುವ ಉತ್ಸಾಹ ಎಲ್ಲವೂ ಒಂದು ರೀತಿಯ ಅದ್ಭುತವೆನಿಸುತ್ತದೆ. ನನ್ನಪ್ಪನನ್ನು ನೋಡಿದಾಗೆಲ್ಲ ನನಗನ್ನಿಸುವುದು ಒಂದೇ, ಛಲವೊಂದಿದ್ದರೆ ವಿದ್ಯೆ ಯಾರಪ್ಪನ ಸ್ವತ್ತು ಅಲ್ಲ ಎಂಬುದು.
ನನ್ನಪ್ಪ ಕ್ರಿಯಾಶೀಲ ವ್ಯಕ್ತಿತ್ವದ ಸರಳ ವ್ಯಕ್ತಿ. ನಾನು ಪದವಿಯಲ್ಲಿ ಕಲಿತಿದ್ದಕ್ಕಿಂತ ನನ್ನಪ್ಪನನ್ನು ನೋಡಿ ಕಲಿತದ್ದೇ ಹೆಚ್ಚು. ಅಪ್ಪ ಒಂದು ದಿನವೂ ಕೂಡ ತನ್ನ ಕಷ್ಟವನ್ನು ನೇರವಾಗಿ ನಮ್ಮೊಂದಿಗೆ ಹೇಳುತ್ತಿರಲಿಲ್ಲ ಆದರೆ ತನ್ನ ಮಕ್ಕಳಿಗೆ ಕಷ್ಟದ ಪರಿಚಯವಿಲ್ಲದೆ ಬೆಳೆಸಬಾರದೆಂಬ ತಿಳುವಳಿಕೆಯಿತ್ತಾದ್ದರಿಂದ ಒತ್ತಡವಾಗದಂತೆ ಅರ್ಥೈಸುತ್ತಿದ್ದರು. ನನ್ನಪ್ಪ ಲತ್ತೆಯ ಏಟನ್ನು ಕೊಟ್ಟದ್ದಕಿಂತ ಬುದ್ಧಿಮಾತಿನ ಏಟನ್ನು ಕೊಟ್ಟದ್ದೇ ಜಾಸ್ತಿ. ಆ ಏಟುಗಳೇ ಇಂದು ನಮಗೆ ಎಲ್ಲವನ್ನು ಎದುರಿಸುವ ಶಕ್ತಿಯನ್ನು ನೀಡಿವೆ ನಮ್ಮೆಲ್ಲ ಹೆಜ್ಜೆಗೆ ಭದ್ರ ಬುನಾದಿಯಾಗಿವೆ. ಇಂದಿಗೂ ಕೂಡ ನನ್ನಪ್ಪ ಹೇಳುವ ಮಾತುಗಳೆ ವೇದವಾಕ್ಯ ಎನಿಸುತ್ತದೆ.
ಅಂದಿನಷ್ಟೇ ಅಕ್ಕರೆ, ಪ್ರೀತಿ, ವಿಶ್ವಾಸ, ನಂಬಿಕೆ, ದೃಢತೆ ಅಪ್ಪನಲ್ಲಿದೆ. ಈ ಎಲ್ಲ ಗುಣಗಳೇ ಇಂದು ಅವಕಾಶಗಳು ಅಪ್ಪನನ್ನು ಹುಡುಕಿಬರುವಂತೆ ಮಾಡಿವೆ. ಇಂದಿಗೂ ಕೂಡ ಅಪ್ಪನ ತತ್ವಗಳು ಬದಲಾಗಿಲ್ಲ. ಬದುಕಿನ ರೀತಿ ಕಾಲಕ್ಕೆ ತಕ್ಕಂತೆ ಬದಲಾದರು ನೀತಿ ಎಂದಿನಂತೆಯೇ ಇದೆ. ಅವೇ ನಮ್ಮ ಜೀವನಕ್ಕೂ ಆದರ್ಶವಾಗಿವೆ. ಅಪ್ಪ ಪದಗಳಿಗೆ ಸಿಗಲಾರದಷ್ಟು ಅನಂತದ ಆನಂದ. ಅಪ್ಪ ವರ್ಣನೆಗೆ ಸಿಗಲಾರದ ಬದುಕಿನ ಕಲಾಕಾರ.
-ದೀಕ್ಷಾ ತಿಮ್ಮಪ್ಪ
ಇಂದಿರಾ ಗಾಂಧಿ ಸರಕಾರಿ
ಕಾಲೇಜು ಸಾಗರ