Advertisement

Contracter Case: ಪ್ರಿಯಾಂಕ್‌ ರಾಜೀನಾಮೆ ಇಲ್ಲ: ಸಚಿವರ ಬೆನ್ನಿಗೆ ನಿಂತ ಸರಕಾರ

03:10 AM Dec 31, 2024 | Team Udayavani |

ಬೆಂಗಳೂರು: ಬೀದರ್‌ ಜಿಲ್ಲೆಯ ಗುತ್ತಿಗೆದಾರ ಸಚಿನ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಪ್ರಿಯಾಂಕ್‌ ಖರ್ಗೆ ಬೆನ್ನಿಗೆ ನಿಂತಿರುವ ರಾಜ್ಯ ಸರಕಾರವು, “ಪ್ರಿಯಾಂಕ್‌ ನಮ್ಮ ಪಕ್ಷದ ಧ್ವನಿಯಾಗಿದ್ದಾರೆ. ಅವರ ಪ್ರಾಮಾಣಿಕತೆ ಪ್ರಶ್ನಾತೀತ. ಗುತ್ತಿಗೆದಾರನ ಸಾವಿಗೂ ಸಚಿವರಿಗೂ ಸಂಬಂಧವಿಲ್ಲ. ಆರೋಪ ಮಾಡಿದಾಕ್ಷಣ ರಾಜೀನಾಮೆ ನೀಡಲು ಬರುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ. ಆ ಮೂಲಕ ವಿಪಕ್ಷಗಳ ಒತ್ತಾಯವನ್ನು ಸಾರಾಸಗಟಾಗಿ ತಳ್ಳಿಹಾಕಿದೆ.

Advertisement

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಗೃಹ ಸಚಿವ ಡಾ| ಪರಮೇಶ್ವರ್‌, ಇಂಧನ ಸಚಿವ ಕೆ.ಜೆ. ಜಾರ್ಜ್‌, ಅರಣ್ಯ ಸಚಿವ ಈಶ್ವರ ಖಂಡ್ರೆ ಸಹಿತ ಕಾಂಗ್ರೆಸ್‌ನ ಹಲವು ನಾಯಕರು ಪ್ರಿಯಾಂಕ್‌ ಖರ್ಗೆ ಪರ ನಿಂತಿದ್ದಾರೆ. ಸ್ವತಃ ಪ್ರಿಯಾಂಕ್‌ ಖರ್ಗೆ, “ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಮೊದಲು ದಾಖಲೆ ತೋರಿಸಿ, ಅನಂತರ ರಾಜೀನಾಮೆ ಕೇಳಿ’ ಎಂದು ಸವಾಲು ಹಾಕಿದ್ದಾರೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಆರೋಪ-ಪ್ರತ್ಯಾರೋಪಗಳು ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿವೆ.

ಡಿಸಿಎಂ ಡಿ.ಕೆ. ಶಿವಕುಮಾರ್‌ ಮಾತನಾಡಿ, “ನಮ್ಮದು ಸ್ವತ್ಛ ಆಡಳಿತದ ಸರಕಾರ. ಈ ಪ್ರಕರಣದಲ್ಲಿ ಪ್ರಿಯಾಂಕ್‌ ಖರ್ಗೆ ಅವರ ಪಾತ್ರವಿಲ್ಲ. ಆತ್ಮಹತ್ಯೆ ಪತ್ರದಲ್ಲಿ ಅವರ ವಿರುದ್ಧ ನೇರ ಆರೋಪವೂ ಇಲ್ಲ. ಬೇರೆಯವರ ಮೇಲೆ ಆರೋಪ ಮಾಡಿದಾಕ್ಷಣ ರಾಜೀನಾಮೆ ನೀಡಲು ಸಾಧ್ಯವಿಲ್ಲ. ಗುತ್ತಿಗೆದಾರನ ಸಾವಿನ ಬಗ್ಗೆ ಕಾನೂನು ಪ್ರಕಾರ ತನಿಖೆ ನಡೆಯುತ್ತದೆ. ಪ್ರಿಯಾಂಕ್‌ ಖರ್ಗೆ ಅವರ ಪ್ರಾಮಾಣಿಕತೆಯ ಬಗ್ಗೆ ನಮಗೆ ಗೊತ್ತಿದೆ. ಅವರು ಪಕ್ಷದ ಧ್ವನಿ’ ಎಂದು ಬಲವಾಗಿ ಸಮರ್ಥಿಸಿಕೊಂಡರು.

ಪ್ರಿಯಾಂಕ್‌ ಖರ್ಗೆ ಅವರ ಮೇಲಿನ ಅಸೂಯೆಯಿಂದ ವಿಪಕ್ಷಗಳು ಈ ರೀತಿ ನಡೆದುಕೊಳ್ಳುತ್ತಿವೆ. ದಲಿತ ಸಮುದಾಯದ ನಾಯಕ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರುವುದನ್ನು ಸಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಪ್ರಿಯಾಂಕ್‌ ಅವರು ಐಟಿ-ಬಿಟಿ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಕೃಷ್ಣ ಅವರ ಸರಕಾರದ ಅನಂತರ ಐಟಿ-ಬಿಟಿ ಕ್ಷೇತ್ರದಲ್ಲಿ ರಾಜ್ಯವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಅವರನ್ನು ಕೆಳಗಿಳಿಸುವ ಸಂಚು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಗೃಹ ಸಚಿವ ಡಾ| ಪರಮೇಶ್ವರ್‌ ಮಾತನಾಡಿ, ಎಲ್ಲ ಪ್ರಕರಣಗಳನ್ನು ಸಿಬಿಐಗೆ ವಹಿಸಲು ಆಗುವುದಿಲ್ಲ. ಸಿಐಡಿ ಸಮರ್ಥವಾಗಿದೆ. ಅನೇಕ ಪ್ರಕರಣಗಳಲ್ಲಿ ಸಿಐಡಿ ತನಿಖೆ ವರದಿ ಬಂದಿದೆಯಲ್ಲವೇ? ಬಿಜೆಪಿಯವರು ಹೇಳಿದ್ದೆಲ್ಲ ಕೇಳಲು ಆಗುವುದಿಲ್ಲ. ಸಕಾರಾತ್ಮಕ ಸಲಹೆ-ಸೂಚನೆಗಳು ಬಂದರೆ ಕೇಳುತ್ತೇವೆ. ಅನವಶ್ಯಕವಾಗಿ ಎಲ್ಲದರಲ್ಲೂ ರಾಜಕೀಯ ಮಾಡಲು ಹೋದರೆ ಕೇಳುವುದಿಲ್ಲ. ಸಿಐಡಿ ತನಿಖೆಯ ವರದಿ ಬಂದ ಅನಂತರ ಏನು ಎಂಬುದನ್ನು ಹೇಳ್ಳೋಣ. ಆದರೆ ಈಗಂತೂ ಸಚಿವ ಪ್ರಿಯಾಂಕ್‌ ಖರ್ಗೆ ಅವರು ರಾಜೀನಾಮೆ ಕೊಡುವ ಅಗತ್ಯ ಇಲ್ಲ ಎಂದರು.

Advertisement

ರಾಜೀನಾಮೆ ಅಗತ್ಯವಿಲ್ಲ: ಜಾರ್ಜ್‌
ಗುತ್ತಿಗೆದಾರ ಸಚಿನ್‌ ಆತ್ಮಹತ್ಯೆಯಲ್ಲಿ ಪ್ರಿಯಾಂಕ್‌ ಖರ್ಗೆ ಪಾತ್ರ ಏನೂ ಇಲ್ಲ. ಹಾಗಾಗಿ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ರವಿ ಮತ್ತು ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಕಾಂಗ್ರೆಸ್‌ ಸರಕಾರವೇ ಸಿಬಿಐಗೆ ಒಪ್ಪಿಸಿತ್ತು. ಅನಂತರ ಏನಾಯಿತು ಎಂದು ಪ್ರಶ್ನಿಸಿದ್ದಾರೆ.

ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಸಿಬಿಐಗೆ ತನಿಖೆ ಹೊಣೆ ವಹಿಸುವ ಅಗತ್ಯವೂ ಇಲ್ಲ. ಮೊದಲು ದಾಖಲೆ ತೋರಿಸಲಿ, ಅನಂತರ ರಾಜೀನಾಮೆ ಕೇಳಲಿ. ನನ್ನ ಮನೆಗೆ ಮುತ್ತಿಗೆ ಹಾಕಲು ಬಿಜೆಪಿಯ ಎಷ್ಟು ಜನ ಬರುತ್ತೀರಿ ಎಂದು ಮೊದಲೇ ಹೇಳಿಬಿಡಿ. ಟೀ- ಕಾಫಿಗೆ ವ್ಯವಸ್ಥೆ ಮಾಡಿಸುತ್ತೇನೆ. ಇಲ್ಲವಾದರೆ ಅದಕ್ಕೂ “ನೀರು ಕೊಡಲಿಲ್ಲ’ ಎಂದು ಆರೋಪ ಮಾಡುತ್ತಾರೆ. – ಪ್ರಿಯಾಂಕ್‌ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ

ಪ್ರಿಯಾಂಕ್‌ಗೆ ದಿಲ್ಲಿಗೆ ಬರಲು ಬುಲಾವ್‌
ಬೆಂಗಳೂರು: ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಪುತ್ರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ದೆಹಲಿಗೆ ಬುಲಾವ್‌ ಬಂದಿದೆ.

ಪಕ್ಷದ ವರಿಷ್ಠರ ಕರೆ ಮೇರೆಗೆ ಸಚಿವ ಪ್ರಿಯಾಂಕ್‌ ಮಂಗಳವಾರ ದೆಹಲಿಗೆ ಹಾರಲಿದ್ದು, 3 ದಿನಗಳ ಕಾಲ ಅಲ್ಲಿಯೇ ಬೀಡುಬಿಡಲಿದ್ದಾರೆ. ಈ ವೇಳೆ ಸಚಿನ್‌ ಪಾಂಚಾಳ ಆತ್ಮಹತ್ಯೆ ಪ್ರಕರಣ ಕುರಿತು ಚರ್ಚೆ ಆಗುವ ಸಾಧ್ಯತೆ ಇದೆ. ಇಡೀ ಪ್ರಕರಣದ ಬಗ್ಗೆ ವರಿಷ್ಠರು ಸಚಿವರಿಂದ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next