ಮಳೆಗಾಲದ ಬಣ್ಣ ಹಸುರು. ಮಳೆಯಿಂದ ವಾತಾವರಣವೆಲ್ಲವೂ ತೇವಾಂಶಸಂಭೂತ. ಮಳೆಗೆ ಪ್ರತಿಕ್ರಿಯಿಸಿ ಸಸ್ಯರಾಶಿಗಳೆಲ್ಲವೂ ನಳನಳಿಸುವ ಕಾಲವಿದು. ಹೂಬಿಡುವ ಮರ ಗಿಡಗಳ ನಡುವೆ ಹಸುರಿನಲ್ಲಿ ಮಿಂದು ಬಿಡುವ ಸಸ್ಯಗಳಲ್ಲಿ ಜರೀಗಿಡಗಳೂ ಮುಖ್ಯವಾದವು. ನೆಲ, ಗೋಡೆ, ಮರ, ಛಾವಣಿ ಹೀಗೆ ಸಿಕ್ಕ ಎಲ್ಲೆಂದರಲ್ಲಿ ಜರೀಗಿಡಗಳು ನಿಂತು ಬೆಳೆದುಬಿಡುತ್ತವೆ. ಹೂಬಿಡಲು ಶಕ್ತವಿಲ್ಲದ ಪ್ರಭೇದವಾಗಿದ್ದರೂ ಜರೀಗಿಡಗಳು ಹಸುರಿನಿಂದ ಎಲ್ಲರನ್ನೂ ಆಕರ್ಷಿಸುತ್ತವೆ.
ಜರೀಗಿಡಗಳು ತಮ್ಮ ಉಳಿಯುವಿಕೆಗಾಗಿ ಪರಿಸರದೊಂದಿಗೆ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತವೆ. ಕೆಲವು ಜರೀಗಿಡಗಳು ವರ್ಷವಿಡೀ ತನ್ನ ಎಲೆಗಳನ್ನು ಉಳಿಸಿಕೊಳ್ಳುತ್ತವೆ. ತದನಂತರ ಬೇಸಗೆಯು ಇವುಗಳಿಗೆ ಸುಪ್ತ ಅವಧಿ. ಅಲ್ಲೂ ಹಸುರನ್ನು ಕಳೆದುಕೊಳ್ಳದಿದ್ದರೆ ಅದನ್ನು ನಿತ್ಯಹರಿದ್ವರ್ಣ ಎಂದು ಪರಿಗಣಿಸಲಾಗುತ್ತದೆ.
ಇವುಗಳ ಇನ್ನೊಂದು ಜಾತಿ ಋತುವಿನ ಕೊನೆಯಲ್ಲಿ ತಮ್ಮ ಎಲೆಗಳನ್ನು ಕಳೆದುಕೊಳ್ಳುತ್ತವೆ ಮತ್ತು ಮುಂದಿನ ವರ್ಷದವರೆಗೆ ಸುಪ್ತವಾಗುತ್ತವೆ. ಕೆಲವು ಜರೀಗಿಡಗಳು ಸ್ಥಿರವಾದ ತಾಪಮಾನ ಮತ್ತು ತೇವಾಂಶದ ಮಟ್ಟವನ್ನು ಹೊಂದಿರುವ ಪರಿಸರದಲ್ಲಿ ಬೆಳೆಯಲು ತಮ್ಮನ್ನು ಬೇಗ ಹೊಂದಿಸಿಕೊಳ್ಳುತ್ತವೆ. ಹೂಗಳ ಜತೆಗೆ ಅಲಂಕಾರಕ್ಕೆ ಇವುಗಳನ್ನು ಬಳಸುವುದುಂಟು.
ಅಡಿಯಂಟಮ್ ಎಂಬ ಜರೀಗಿಡ ಪ್ರಜಾತಿಯು 200ಕ್ಕೂ ಹೆಚ್ಚು ಜಾತಿಯ ನೆರಳು ಪ್ರಿಯ ವೈವಿಧ್ಯಗಳನ್ನು ಒಳಗೊಂಡಿದೆ. ಈ ಗಿಡಗಳನ್ನು ಎÇÉೆಂದರಲ್ಲಿ ನೋಡಬಹುದು. ಒಂದು ತರಹದ ಕಾಸ್ಮೋಪಾಲಿಟನ್ ಜರೀಗಿಡಗಳ ಗುತ್ಛ. ಕಾಡು ನೇರಳೆ ಅಥವಾ ಕಪ್ಪು ಕಾಂಡದ ಇಕ್ಕೆಲಗಳಲ್ಲಿ ಎಲೆಹಸುರ ಎಲೆಗಳಂತಹ ಬ್ಲೇಡ್ -ಫ್ರಾಂಡ್ಗಳು. ನೀರಿಗೆ ತೊನೆಯದೇ ನಿಲ್ಲುವ ಈ ಗಿಡಗಳು ಅದುರಿದರೆ ನೋಡಲು ಚೆಂದ.
ಖಡ್ಗದಂತಹ ಎಲೆಗಳನ್ನು ಹೊಂದಿರುವ ಇನ್ನೊಂದು ಕ್ರೋಟನ್ ಜರೀಗಿಡ ಸೊÌàರ್ಡ್ ಫರ್ನ್. ಅಡಿಗಳಷ್ಟು ಬೆಳೆಯುವ ಇದರ ಗರಿಯಂತಹ ಎಲೆಗಳು ಆಕರ್ಷಕ. ಅಲಂಕಾರಕ್ಕಾಗಿ ಹೂದಾನಿಗಳಲ್ಲಿ ಇವುಗಳನ್ನು ಬೆಳೆಸುವುದಿದೆ. ಮನೆಯ ಒಳಾಂಗಣದಲ್ಲಿ ಬೆಳೆಯುವ ಅಥವಾ ಬೆಳೆಸುವ ಜರೀಗಿಡ- ಆಸ್ಪೆನಿಯಂ ನಿಡಸ್. ಇದು ನೋಡಲು ಪಕ್ಷಿಯ ಗೂಡಿನಂತೆ ಇರುವುದು.
ಅದಕ್ಕೋಸ್ಕರ ಬರ್ಡ್ಸ್ ನೆಸ್ಟ್ ಫರ್ನ್ ಎಂಬ ಉಪನಾಮ. ವ್ಯಾಪಕ ಪ್ರಭೇದದ ಈ ಸಸ್ಯವು ಬಾಳೆ ಎಲೆಗಳನ್ನು ಹೋಲುವ ಉದ್ದವಾದ, ದಪ್ಪವಾದ ಫ್ರಾಂಡ್-ಎಲೆಗಳನ್ನು ಹೊಂದಿದೆ. ಇದು ಸಾಮಾನ್ಯವಾಗಿ ಮರದ ಕಾಂಡಗಳು ಅಥವಾ ಕಟ್ಟಡಗಳ ಮೇಲೂ ಬೆಳೆಯುತ್ತದೆ. ಇದನ್ನು ಕಂಟೇನರ್ನಲ್ಲಿ ನೆಡಬಹುದು, ಹಲಗೆಗಳಿಗೆ ಅಂಟಿಸಬಹುದು ಮತ್ತು ಗೋಡೆಯ ಮೇಲೆ ನೇತುಹಾಕಬಹುದು. ಪಾಚಿ ಎಂದೇ ಪರಿಭಾವಿಸಲಾದ ಆದರೆ ಜರೀಗಿಡವಾಗಿರುವ ಅಜೋಲಾವನ್ನು ಕನಿಷ್ಠ ಒಂದು ಸಾವಿರ ವರ್ಷಗಳಿಂದ ಭತ್ತದ ಗದ್ದೆಗಳಲ್ಲಿ ಸಹವರ್ತಿ ಸಸ್ಯವಾಗಿ ಬಳಸಲಾಗುತ್ತಿದೆ.
ಜರೀಗಿಡಗಳನ್ನು ಆಹಾರ, ಔಷಧ, ಜೈವಿಕ ಗೊಬ್ಬರ, ಅಲಂಕಾರಿಕ ಸಸ್ಯಗಳಾಗಿ ಮತ್ತು ಕಲುಷಿತ ಮಣ್ಣನ್ನು ಸರಿಪಡಿಸಲು ಬಳಸಲಾಗುತ್ತದೆ. ಅಜೋಲಾವನ್ನು ಭತ್ತದ ಗದ್ದೆಗಳಲ್ಲಿ ಮಣ್ಣಿಗೆ ಸಾರಜನಕ ಸ್ಥಿರೀಕರಿಸಲು ಬಳಸಲಾಗುತ್ತದೆ. ಬರ್ಡ್ಸ್ ನೆಸ್ಟ್ ಫರ್ನ್ ಗಳು ಗಾಳಿಯನ್ನು ಶುದ್ಧೀಕರಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿವೆ. ಅಡಿಯಂಟಂ ಜರೀಗಿಡವು ಔಷಧೀಯ ಗುಣಗಳಿಗೂ ಖ್ಯಾತವಾಗಿದೆ. ಜರೀಗಿಡಗಳು ಸ್ವಲ್ಪಮಟ್ಟಿಗೆ ಮಣ್ಣನ್ನು ಹಿಡಿದಿಟ್ಟುಕೊಳ್ಳುವಲ್ಲೂ ಸಮರ್ಥವಾಗಿವೆ. ಪರಿಸರದ ಸಮತೋಲನವನ್ನು ತೂಗಿಸುವಲ್ಲಿ ಜರೀಗಿಡಗಳ ಪಾತ್ರವೂ ಹಿರಿದೇ. ಬಗೆಬಗೆಯ ವಿವಿಧಾಕಾರಗಳ ಜರೀಗಿಡಗಳನ್ನು ಮಳೆ ಗಾಲದಲ್ಲಿ ನೋಡಿ ಕಣ್ತುಂಬಿಕೊಳ್ಳಿ.
-ವಿಶ್ವನಾಥ ಭಟ್
ಧಾರವಾಡ