ಇದೊಂದು ಪುಟ್ಟ ಚಿತ್ರ. ಕಿರು ಚಿತ್ರವೆನ್ನಬಹುದು. ಯಾಕೆಂದರೆ ಇಡೀ ಸಿನಿಮಾದ ಅವಧಿ ಕೇವಲ 34 ನಿಮಿಷಗಳು. ವಿಶೇಷವೆಂದರೆ ಈ ಕೇವಲ ಮೂವತ್ತನಾಲ್ಕು ನಿಮಿಷಗಳ ಸಿನಿಮಾಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು ಎಂದರೆ ಆದು ಎಷ್ಟು ಚೆನ್ನಾಗಿರಬಹುದಲ್ಲವೇ? ಅಷ್ಟೇ ಅಲ್ಲ. ಈ ಸಿನಿಮಾ ಬಿಡುಗಡೆಯಾದ ವರ್ಷ ಕಾನ್ ಸಿನಿಮೋತ್ಸವದಲ್ಲೂ ಪ್ರದರ್ಶನಗೊಂಡು ಅತ್ಯುತ್ತಮ ಚಲನಚಿತ್ರಗಳಿಗೆ ನೀಡಲಾಗುವ ಪಾಮ್‌ದೋರ್ ಪ್ರಶಸ್ತಿಯನ್ನೂ ತನ್ನ ಒಡಲಿಗೆ ಹಾಕಿಕೊಂಡಿತ್ತು.
ಅಲ್ಬರ್ಟ್ ಲಾಮೋರೆಸ್ 1956ರಲ್ಲಿ ರೂಪಿಸಿದ ಸಿನಿಮಾವಿದು. ಫ್ರೆಂಚ್ ಭಾಷೆಯದ್ದು. ಈ ಸಿನಿಮಾದಲ್ಲಿ ಪ್ರಧಾನ ಪಾತ್ರ ಎಂಬುದು ಪಾಸ್ಕಲ್ ಲಾಮೋರೆಸ್. ಕೆಂಪು ಪುಗ್ಗೆ (ಬಲೂನು) ಹಿಡಿದುಕೊಂಡು ಹೋಗುವ ಬಾಲಕ. ಈತ ಆಲ್ಬರ್ಟ್ ಲಾಮೋರೆಸ್‌ರ ಮಗನೂ ಹೌದು. ಇಡೀ ಸಿನಿಮಾವನ್ನು ತನ್ನ ನಟನೆಯ ಮೂಲಕವೇ ಹಿಡಿದಿಟ್ಟುಕೊಳ್ಳುವ ಮುಗ್ಧ ಬಾಲಕ.
ಕಥೆ ಸಿಕ್ಕಾಪಟ್ಟೆ ಸರಳ ಎನಿಸುವಂಥದ್ದು. ಆ ಸಿನಿಮಾದ ಹಿಂದಿನ ಪದರಗಳು ಅನನ್ಯ. ಕಥೆ ಬೆರಳಿಗೆ ಅಂಟಿದ ಜೇನಿನಂತೆ. ಸವಿಯೂ ಇದೆ, ಸವಿಯುವುದೂ ಸುಲಭವಿದೆ. ಚಿಕ್ಕ ಬಾಲಕನೊಬ್ಬನಲ್ಲಿ ಒಂದು ಕೆಂಪು ಬಲೂನು ಇರುತ್ತದೆ. ಅದು ಅವನ ಸಾಥಿ. ಎಲ್ಲಿ ಹೋದರೂ ಅದು ಅವನನ್ನು ಹಿಂಬಾಲಿಸುತ್ತದೆ ಗೆಳೆಯನಂತೆ.
ಇಂಥದೊಂದು ಎಳೆ ಸಾಗುತ್ತಾ ಇರುವಾಗ ಒಂದು ದಿನ ಪಾಸ್ಕಲ್ ತನ್ನ ಅಮ್ಮನೊಂದಿಗೆ ಚರ್ಚ್‌ಗೆ ಹೊರಡುತ್ತಾನೆ. ಆಗ ಒಳಗಿರುವಂತೆ ಬಲೂನಿಗೆ ಹೇಳಿದರೂ ಕೇಳದು. ಕಿಟಕಿಯಿಂದ ಹೊರಬಂದು ಇವನನ್ನು ಹಿಂಬಾಲಿಸುತ್ತದೆ. ಈ ಮಧ್ಯೆ ಬಲೂನನ್ನು ವಶಪಡಿಸಿಕೊಳ್ಳಲು ಒಂದು ಹುಡುಗರ ಗುಂಪು ಸಂಚು ಹಾಕುತ್ತಿರುತ್ತದೆ.
ಅವರ ಕೈಗೆ ಬಲೂನು ಸಿಕ್ಕಿಹಾಕಿಕೊಳ್ಳುತ್ತದೆ. ಅವರಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗುವುದಿಲ್ಲ. ಅಂತಿಮವಾಗಿ ಕಲ್ಲು ಇತ್ಯಾದಿಗಳನ್ನು ಬಳಸಿ ಹಾರುತ್ತಿದ್ದ ಬಲೂನ್ ಅನ್ನು ಕೆಳಗಿಳಿಸುತ್ತಾರೆ. ಈ ಘಟನೆಯನ್ನು ಕಂಡ ಪಾಸ್ಕಲ್‌ಗೆ ದುಃಖ ಒತ್ತರಿಸಿ ಬರುತ್ತದೆ. ಹೇಗೋ ಬಲೂನನ್ನು ಕೊಂಡೊಯ್ಯುವ ಕನಸು ಈಡೇರುವುದಿಲ್ಲ. ಅಂತಿಮವಾಗಿ ಈ ಹುಡುಗರ ಹೊಡೆತವನ್ನು ತಾಳಲಾರದೇ ಸುಸ್ತಾಗಿ ಕೆಳಗೆ ಉದುರುತ್ತದೆ.
ಇದನ್ನು ಕಂಡ ಪಾಸ್ಕಲ್‌ಗೆ, ಒಳ್ಳೆಯ ಗೆಳೆಯನನ್ನು ಕಳೆದುಕೊಂಡೆನೆಂಬ ದುಃಖ ಆವರಿಸುತ್ತದೆ. ಆಗ ಅಚ್ಚರಿ ಎನ್ನುವಂತೆ ಇಡೀ ಊರಿನಲ್ಲಿರುವ ಬಲೂನುಗಳೆಲ್ಲ ಮೇಲಕ್ಕೆ ಹಾರತೊಡಗುತ್ತವೆ. ಅಂಗಡಿಗಳಲ್ಲಿದ್ದ ಬಲೂನುಗಳು, ಯಾರದೋ ಕೈಯಲ್ಲಿದ್ದ ಬಲೂನುಗಳು, ಮತಾöರೋ ಮಕ್ಕಳು ಕೊಂಡೊಯ್ಯುತ್ತಿದ್ದ ಬಲೂ ನುಗಳು ಎಲ್ಲ ಪ್ರತಿಭಟನೆ ಎಂಬಂತೆ ಮೇಲಕ್ಕೆ ಹೊರಟು ಈ ಕೆಂಪು ಬಾಲಕನಿದ್ದಲ್ಲಿಗೆ ಬರುತ್ತವೆ. ಬಾಲಕ ಅವುಗಳನ್ನು ಹಿಡಿದುಕೊಳ್ಳುತ್ತಾನೆ. ಅವು ಈ ದ್ವೇಷವೇ ಇಲ್ಲದ ಬೇರೆ ನಾಡಿಗೆ ಕರೆದೊಯ್ಯುತ್ತವೆ.
ಬಹಳ ಸರಳವಾಗಿ ಅರ್ಥವಾಗುವ ಸಿನಿಮಾದ ಹಿಂದೆ ಮತ್ತಷ್ಟು ಪದರಗಳಿವೆ. ಸ್ವಾತಂತ್ರ್ಯದ ಕನಸಿನ ಬಣ್ಣವೂ ಈ ಬಲೂನುಗಳಿಗಿವೆ. ರಾಜಕೀಯದ ಬಣ್ಣವೂ ಇದೆ. ಹೀಗೆ ನಾನಾ ಬಣ್ಣಗಳ ಪದರಗಳನ್ನು ಒಳಗೊಂಡಿದ್ದ ಪುಟ್ಟ ಸಿನಿಮಾ ದಿ ರೆಡ್ ಬಲೂನ್. ಎರಡನೇ ವಿಶ್ವ ಯುದ್ಧ ಮುಗಿದು ಹೊಸ ಬೆಳಗು ಆರಂಭವಾಗಿದ್ದ ಹೊತ್ತದು. ಭರವಸೆ ಎನ್ನುವಂತೆ ಬಂದ ಸಿನಿಮಾದಲ್ಲಿ ಅಧ್ಯಾತ್ಮದ ಸೆಲೆಯೂ ಇದ್ದಿತಂತೆ. ವಿಶಿಷ್ಟವಾದ ಸಿನಿಮಾ ಯೂ ಟ್ಯೂಬ್ ನಲ್ಲೂ ಲಭ್ಯವಿದೆ.
ಅಮೋರ್
ಇದು ಮತ್ತೂಂದು ಸಿನಿಮಾ. ಪ್ರೀತಿಯ ಅನನ್ಯತೆಯನ್ನು, ಬದುಕಿನ ಅನಿವಾರ್ಯತೆಯನ್ನು ಒಟ್ಟಿಗೆ ಹೆಣೆದು ಇಡುವಂಥ ಚಿತ್ರ. ಮನಸ್ಸಿಗೆ ಅಗಾಧವಾಗಿ ತಟ್ಟಿ ಒಮ್ಮೆ ನಮ್ಮನ್ನು ಅಲುಗಾಡಿಸುವಂಥ ಚಿತ್ರವೂ ಹೌದು.
ಆಸ್ಟ್ರಿಯಾದ ಚಲನಚಿತ್ರ ನಿರ್ದೇಶಕರಾದ ಮೈಕೆಲ್ ಹನಕೆ ನಿರ್ದೇಶಿಸಿದ ಚಿತ್ರ. 2012ರಲ್ಲಿ ರೂಪುಗೊಂಡಿದ್ದ ಫ್ರೆಂಚ್ ಚಲನಚಿತ್ರ. ಜೀವನ ಪ್ರೀತಿಯನ್ನು ಹೇಳುತ್ತಲೇ, ಬದುಕಿನಲ್ಲಿ ಎದುರಾಗುವ ಅನಿಶ್ಚಿತ ಸಂದರ್ಭಗಳನ್ನು ಎದುರಿಸುವುದಕ್ಕೆ ಮಾಡುವ ಆಯ್ಕೆಗಳು ದಿಗ್ಭ್ರಮೆಗೊಳಿಸುವುದುಂಟು. ಚಿತ್ರದಲ್ಲಿ ನಟಿಸಿದ್ದ ಜೀನ್ ಲೂಯಿಸ್, ಇಮ್ಯಾನ್ಯುಯೆಲ್ ರಿವ ಹಾಗೂ ಇಸಾಬೆಲ್ ಹುಪರ್ಟ್ ಅಮೋಘ ಎನ್ನುವಂತೆ ನಟಿಸಿದ್ದಾರೆ. ಅದರಲ್ಲೂ ಜೀನ್ ಮತ್ತು ಇಮ್ಯಾನ್ಯುಯೆಲ್‌ರ ನಟನೆ ಮನ ತಟ್ಟುತ್ತದೆ.
ಇಬ್ಬರು ವಯೋವೃದ್ಧ ದಂಪತಿ ತಮ್ಮ 80ನೇ ವಯಸ್ಸಿನಲ್ಲಿ ಒಟ್ಟಾಗಿ ಬದುಕನ್ನು ಎದುರಿಸುತ್ತಿರುತ್ತಾರೆ. ಇಬ್ಬರೂ ಬದುಕನ್ನು ಪ್ರೀತಿಸುವವರೇ. ಇಬ್ಬರೂ ಸಂಗೀತ ಶಿಕ್ಷಕರು. ತಮ್ಮ ವೃತ್ತಿ ಬದುಕಿನಲ್ಲಿ ವಿಶ್ರಾಂತಿಯ ರಾಗವನ್ನು ಹಾಡುತ್ತಿದ್ದ ಸಮಯ.
ಹೀಗೇ ಬದುಕು ಸಾಗುವಾಗ ಒಮ್ಮೆ ಪತ್ನಿ ಪಾರ್ಶ್ವವಾಯುವಿಗೆ ಗುರಿಯಾಗುತ್ತಾರೆ. ಏನು ಮಾಡಬೇಕೋ ತಿಳಿಯದ ಪತಿ ಹೇಗೋ ಅದನ್ನು ಸಾವರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬರುತ್ತಾರೆ. ಆದರೆ ದುರದೃಷÌವಶಾತ್ ಪತ್ನಿಗೆ ಮತ್ತೂಮ್ಮೆ ಪಾರ್ಶ್ವವಾಯು ಬಡಿಯುತ್ತದೆ. ಆಗ ಪತ್ನಿ ತನ್ನ ಪತಿಯ ಕೈ ಹಿಡಿದು, “ನನ್ನನ್ನು ಇನ್ನು ಆಸ್ಪತ್ರೆಗೆ ಕೊಂಡೊಯ್ಯಬೇಡಿ. ಯಾವುದೇ ಚಿಕಿತ್ಸಾ ಕೇಂದ್ರ (ಕೇರ್ ಸೆಂಟರ್)ಕ್ಕೂ ಸೇರಿಸಬೇಡಿ’ ಎಂದು ಪ್ರಮಾಣ ಮಾಡಿಸಿಕೊಳ್ಳುತ್ತಾಳೆ.
ದಿನೇ ದಿನೇ ಪತ್ನಿಯ ನಿರ್ವಹಣೆ ಕಷ್ಟವೆನಿಸುವ ಪತಿ ಕೆಲವೊಮ್ಮೆ ಸಿಟ್ಟು ಸಿಟ್ಟಾಗಿ ನಡೆದುಕೊಳ್ಳುತ್ತಾನೆ. ಕೊನೆಗೆ ಅನಿವಾರ್ಯವಾಗಿ ನರ್ಸ್ ಅನ್ನು ನೇಮಿಸಲಾಗುತ್ತದೆ. ಆದರೆ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳದ ಕಾರಣಕ್ಕೆ ಅವಳನ್ನು ತೆಗೆದು ಬೇರೊಬ್ಬರನ್ನು ನೇಮಿಸುತ್ತಾನೆ. ಮತ್ತೆ ಆದೇ ಸಮಸ್ಯೆ. ಮತ್ತೂಬ್ಬ ಬದಲಾದರೂ ಪರಿಸ್ಥಿತಿ ಬದಲಾಗದು.
ಇವರ ಮಗಳು “ಅಮ್ಮನನ್ನು ಯಾವುದಾದರೂ ಕೇರ್ ಸೆಂಟರ್‌ಗೆ ಸೇರಿಸೋಣ’ ಎನ್ನುತ್ತಾಳೆ. ಇದಕ್ಕೆ ಒಪ್ಪದ ಪತಿ, ತನ್ನ ಪತ್ನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಠಿಣವಾದ ನಿರ್ಧಾರ ತೆಗೆದುಕೊಳ್ಳುತ್ತಾನೆ.
ಸಿನಿಮಾ ನಮ್ಮನ್ನು ಭಾವುಕವಾಗಿ ಬಹಳ ತಟ್ಟುತ್ತದೆ. ಬದುಕಿನ ಕೆಲವು ಸಂದರ್ಭಗಳಲ್ಲಿ ನಿರ್ಧಾರ ಯಾರು ತೆಗೆದುಕೊಳ್ಳುತ್ತಾರೆ? ನಾವೋ ಅಥವಾ ಸಂದರ್ಭವೋ ಎಂಬ ತಾತ್ವಿಕ ಪ್ರಶ್ನೆಯನ್ನು ನಮ್ಮ ಎದುರು ಇಡುತ್ತದೆ. ಬದುಕಿನ ಬಹುತೇಕ ಸಂದರ್ಭಗಳಲ್ಲಿ ನಮ್ಮ ನಿರ್ಧಾರಗಳನ್ನು ನಾವೇ ತೆಗೆದುಕೊಳ್ಳುತ್ತಿರುವಾಗ, ಯಾವುದೋ ಒಂದು ಸಂದರ್ಭ, ಕ್ಷಣ ನಮ್ಮ ಕೈ ಬಿಟ್ಟು ಹೋಗಿರುತ್ತದೆ. ಆ ಸಂದರ್ಭದಲ್ಲಿ ವಿಧಿ ಅಥವಾ ಕಾಲವೇ ನಿರ್ಧರಿಸಿಬಿಡುತ್ತದೋ ಏನೋ ಎಂಬ ಭಾವ ಈ ಸಿನಿಮಾ ನೋಡಿದಾಗ ಎನ್ನಿಸದಿರದು.
ಈ ಸಿನಿಮಾವೂ ಆಸ್ಕರ್ ಪ್ರಶಸ್ತಿಗೆ ಸುಮಾರು ಐದು ವಿಭಾಗಗಳಲ್ಲಿ ಸೆಣಸಿತ್ತು. ಅತ್ಯುತ್ತಮ ನಟ, ನಟಿ ಸೇರಿದಂತೆ ಐದು ಪುರಸ್ಕಾರಗಳಿಗೆ ಪ್ರಯತ್ನಿಸಿತ್ತು. ಅತ್ಯುತ್ತಮ ವಿದೇಶಿ ಚಿತ್ರದ ಪುರಸ್ಕಾರಕ್ಕೆ ಭಾಜನವಾಯಿತು.
ಹಾಗೆಯೇ ಕಾನ್ ಚಿತ್ರೋತ್ಸವದಲ್ಲಿ ಸುಮಾರು 7 ವಿಭಾಗಗಳಲ್ಲಿ ಪುರಸ್ಕಾರಕ್ಕೆ ಸ್ಪರ್ಧಿಸಿತ್ತು. ಇದರಲ್ಲಿ ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟಿ, ನಟ ಸೇರಿದಂತೆ ವಿವಿಧ ಪುರಸ್ಕಾರಗಳನ್ನು ಪಡೆದಿತ್ತು. ಇದಲ್ಲದೇ ಈ ಚಿತ್ರ ಹಲವಾರು ಪುರಸ್ಕಾರಗಳನ್ನು ಗಳಿಸಿರುವುದು ವಿಶೇಷ.
ಸುಮಾರು 127 ನಿಮಿಷಗಳ ಸಿನಿಮಾದಲ್ಲಿ ಸಿನಿಮಾ ವಿಮರ್ಶಕರ ಪ್ರಶಂಸೆ ವ್ಯಕ್ತವಾಗಿತ್ತು.
-ಅಪ್ರಮೇಯ