Advertisement

ಉತ್ತರ ಪ್ರದೇಶ: ಮೈತ್ರಿ ಖಾತ್ರಿ ಎಸ್ಪಿಗೆ 298, ಕೈಗೆ 105 ಸ್ಥಾನ

09:43 AM Jan 23, 2017 | Team Udayavani |

ಲಕ್ನೋ/ಹೊಸದಿಲ್ಲಿ: ಕಡೆಗೂ ಅಳೆದು ತೂಗಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿವೆ.

Advertisement

ಇನ್ನೇನು ಮೈತ್ರಿ ಬಿದ್ದು ಹೋಗಲಿದೆ, ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಲು ಸಿದ್ಧವಾಗಿವೆ ಎಂಬ ಕ್ಷಣದಲ್ಲಿ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅವರು ಮಧ್ಯಪ್ರವೇಶಿಸಿ ಶನಿವಾರ ರಾತ್ರಿಯೇ ಪಕ್ಷದ ನಾಯಕರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ಮೈತ್ರಿ ಮುರಿದು ಬೀಳಬಾರದು ಎಂದು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರವಿವಾರ ಬೆಳಗ್ಗಿನ ಜಾವದ ವರೆಗೂ ಮಾತುಕತೆ ನಡೆದು ಮೈತ್ರಿಯನ್ನು ಅಂತಿಮಗೊಳಿಸಲಾಗಿದೆ.

ಆರಂಭದಲ್ಲಿ ಕಾಂಗ್ರೆಸ್‌ 110 ಸ್ಥಾನಕ್ಕೆ ಪಟ್ಟು ಹಿಡಿದಿದ್ದರೆ, ಎಸ್ಪಿ ಕೇವಲ 100 ಸ್ಥಾನ ನೀಡುವುದಾಗಿ ಹೇಳಿತ್ತು. ಅಲ್ಲದೆ ರಾಯ್‌ಬರೇಲಿ ಮತ್ತು ಅಮೇಠಿಯಲ್ಲಿ ಗರಿಷ್ಠ ಸ್ಥಾನಗಳು ತನಗೇ ಬೇಕು ಎಂದೂ ಕಾಂಗ್ರೆಸ್‌ ಪಟ್ಟು ಹಿಡಿದಿತ್ತು. ಇದಕ್ಕೆ ಎಸ್ಪಿ ಖಡಾ ಖಂಡಿತವಾಗಿ ಸಾಧ್ಯವೇ ಇಲ್ಲ ಎಂದು ಹೇಳಿತ್ತು. ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ ಕಾಂಗ್ರೆಸ್‌ ಸಾಧನೆ ಅಷ್ಟಕ್ಕಷ್ಟೇ. ಅಲ್ಲದೆ ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸಾಧನೆ ಅಷ್ಟಾಗಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚು ಸ್ಥಾನ ನೀಡಲು ಸಾಧ್ಯವಿಲ್ಲ ಎಂದಿತ್ತು.

ಕೊನೆಗೆ 110 ಸೀಟುಗಳ ಬೇಡಿಕೆಯನ್ನು ಕೊಂಚ ತಗ್ಗಿಸಿಕೊಂಡ ಕಾಂಗ್ರೆಸ್‌ 105ಕ್ಕೆ ಒಪ್ಪಿಕೊಂಡಿದೆ. ಉಳಿದ 298 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ  ಸ್ಪರ್ಧಿಸಲಿದೆ.

ರವಿವಾರ ಸಂಜೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಎಸ್ಪಿ ಮತ್ತು ಕಾಂಗ್ರೆಸ್‌ ಮುಖಂಡರು “ಕೋಮುವಾದಿ ಬಿಜೆಪಿಯನ್ನು ದೂರ ಇಡುವ ಸಲುವಾಗಿ ಈ ಹೊಂದಾಣಿಕೆ ಮಾಡಿಕೊಂಡಿ ದ್ದೇವೆ. ಅಖೀಲೇಶ್‌ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ’ ಎಂದು ಹೇಳಿದ್ದಾರೆ.

Advertisement

ಈ ಮೈತ್ರಿ ಅಂತಿಮವಾಗುತ್ತಿದ್ದಂತೆ, ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿತ ವಾಗಿದ್ದ  ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದಿಕ್ಷೀತ್‌ ನೇಪಥ್ಯಕ್ಕೆ ಸರಿದಿದ್ದಾರೆ.

ಪ್ರಿಯಾಂಕಾ-ಡಿಂಪಲ್‌ ಮಾತು: ಶನಿವಾರ ಸಂಜೆ ಕಾಂಗ್ರೆಸ್‌-ಎಸ್ಪಿ ಮೈತ್ರಿ ಅಕ್ಷರಶಃ ಮುರಿದುಬೀಳುವ ಹಂತಕ್ಕೆ ಬಂದಿತ್ತು. ತಡರಾತ್ರಿ ಸೋನಿಯಾ ಗಾಂಧಿ ಮಧ್ಯಪ್ರವೇಶಿಸಿದ ರಾದರೂ ನಿಜವಾಗಿ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿದ್ದು ಪ್ರಿಯಾಂಕಾ ವಾದ್ರಾ. ಸ್ವತಃ ಅಖೀಲೇಶ್‌ ಯಾದವ್‌ ಮತ್ತು ಅವರ ಪತ್ನಿ ಡಿಂಪಲ್‌ ಯಾದವ್‌ ಜತೆ ಶನಿವಾರ ರಾತ್ರಿ ಶುರುವಾದ ಮಾತು, ಮುಗಿದದ್ದು ಬೆಳಗ್ಗಿನ ಜಾವ 4.30ಕ್ಕೆ. ಈ ವೇಳೆಯೇ ಪ್ರಿಯಾಂಕಾ ವಾದ್ರಾ ಅವರು ಎಸ್‌ಪಿಯೊಂದಿಗೆ ಫೈನಲ್‌ ಆಗಿ ಮಾತು ಕುದುರಿಸಿದರು.

ಈ ವಿಚಾರವನ್ನು ಸ್ವತಃ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ, ಸೋನಿಯಾ ಗಾಂಧಿ ಆಪ್ತ ವಲಯದ ಅಹ್ಮದ್‌ ಪಟೇಲ್‌ ಟ್ವೀಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next