Advertisement

CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!

12:51 PM Jan 09, 2025 | Team Udayavani |

ಲಕ್ನೋ: ತನ್ನ ಅಪಹರಣವಾಗಿದೆ ಎಂದು ಅಣ್ಣನನ್ನು ನಂಬಿಸಿ ಹಣ ದೋಚಲು ಯತ್ನಿಸಿದ್ದ ಭೂಪನೊಬ್ಬ ಬೆದರಿಕೆ ಪತ್ರದಲ್ಲಿ “ಡೆತ್”‌ ಪದದಲ್ಲಿನ ಕಾಗುಣಿತ ದೋಷದಿಂದಾಗಿ ಸಿಕ್ಕಿಬಿದ್ದ‌ ಘಟನೆ ಉತ್ತರಪ್ರದೇಶದ ಬಂದರಹಾ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಏನಿದು ಅಪಹರಣದ ನಾಟಕ?

ತನ್ನ ಸಹೋದರ ಸಂದೀಪ್‌ ಕುಮಾರ್‌ (27ವರ್ಷ) ಎಂಬಾತನನ್ನು ಅಪಹರಿಸಿರುವುದಾಗಿ ಹೇಳಿ ಅಪರಿಚಿತ ಮೊಬೈಲ್‌ ನಂಬರ್‌ ನಿಂದ Ransom Note (ಹಣದ ಬೇಡಿಕೆ ಪತ್ರ) ಅನ್ನು ಕಳುಹಿಸಿರುವುದಾಗಿ ಬಂದರಹಾ ಗ್ರಾಮದ ಗುತ್ತಿಗೆದಾರ ಸಂಜಯ್‌ ಕುಮಾರ್‌ ಎಂಬವರು ಸ್ಥಳೀಯ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನಿಮ್ಮ ತಮ್ಮ ಸಂದೀಪ್‌ ನನ್ನು ಅಪಹರಿಸಿದ್ದೇವೆ, ಆತನ ಬಿಡುಗಡೆಗೆ 5,000 ರೂಪಾಯಿ ಕೊಡಬೇಕು ಎಂದು ಆರೋಪಿ ಬೇಡಿಕೆ ಇಟ್ಟಿರುವುದಾಗಿ ದೂರಿನಲ್ಲಿ ತಿಳಿಸಿದ್ದರು. ಅಷ್ಟೇ ಅಲ್ಲ ಅಪಹರಣದ ಪತ್ರದಲ್ಲಿ ಒಂದು ವೇಳೆ ಹಣ ನೀಡದಿದ್ದರೆ, ಸಂದೀಪ್‌ ನನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಲಾಗಿತ್ತು.

ಸಂದೀಪ್‌ ನನ್ನು ಹಗ್ಗದಿಂದ ಕಟ್ಟಿಹಾಕಿರುವ ವಿಡಿಯೋ ಕ್ಲಿಪ್‌ ಅನ್ನು ಗುತ್ತಿಗೆದಾರರ ವಾಟ್ಸಪ್‌ ಗೆ ಕಳುಹಿಸಲಾಗಿತ್ತು. ಆದರೆ ಆ ವ್ಯಕ್ತಿ ಯಾರ ಬಗ್ಗೆಯೂ ದ್ವೇಷ ಹೊಂದಿರುವ ಬಗ್ಗೆ ಯಾವ ಮಾಹಿತಿಯನ್ನೂ ಹಂಚಿಕೊಂಡಿರಲಿಲ್ಲವಾಗಿತ್ತು ಎಂದು ಕುಮಾರ್‌ ಪೊಲೀಸರಿಗೆ ಮಾಹಿತಿ ನೀಡಿದ್ದರು.

Advertisement

ಸ್ಪೆಲ್ಲಿಂಗ್‌ ತಪ್ಪಿನಿಂದ ಸಿಕ್ಕಿಬಿದ್ದ ಆರೋಪಿ ಸಹೋದರ!

ಪೊಲೀಸ್‌ ವರಿಷ್ಠಾಧಿಕಾರಿ(SP) ನೀರಜ್‌ ಕುಮಾರ್‌ ಜಡೌನ್‌ ಪಿಟಿಐ ಜತೆ ಮಾತನಾಡಿ, ಅಪಹರಣದ ನಾಟಕವಾಡಿದ್ದ ವ್ಯಕ್ತಿ “ಡೆತ್”‌ (deth) ಪದವನ್ನು ತಪ್ಪಾಗಿ ಬರೆದಿರುವುದು ಆರೋಪಿಯನ್ನು ಸೆರೆಹಿಡಿಯಲು ನೆರವಾಗಿತ್ತು. ಆತ ಕಳುಹಿಸಿದ್ದ ಬೆದರಿಕೆ ನೋಟ್‌ ನಲ್ಲಿ ಬಳಸಿದ ತಪ್ಪು ಪದದಿಂದಾಗಿ ಆತ ಹೆಚ್ಚು ವಿದ್ಯಾವಂತನಲ್ಲ ಎಂಬುದು ಸ್ಪಷ್ಟವಾಗಿತ್ತು ಎಂದು ತಿಳಿಸಿದ್ದಾರೆ.

ಅಲ್ಲದೇ ಬಿಡುಗಡೆಗಾಗಿ ಕೇಳಿರುವ ಹಣ ಕೇವಲ 5,000 ರೂಪಾಯಿ ಮೊತ್ತ ಪೊಲೀಸರಿಗೆ ಇನ್ನಷ್ಟು ಸಂಶಯ ಮೂಡಿಸಲು ಕಾರಣವಾಗಿತ್ತು. ಪ್ರಕರಣದ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಸಂದೀಪ್‌ ಇರುವ ರೂಪಾಪುರ್‌ ಸ್ಥಳವನ್ನು ಪತ್ತೆಹಚ್ಚಿ, ಆತನನ್ನು ವಶಕ್ಕೆ ತೆಗೆದುಕೊಂಡು ಮತ್ತೊಮ್ಮೆ ಬೆದರಿಕೆ ಪತ್ರವನ್ನು ಬರೆಯಲು ಹೇಳಿದಾಗ …Death ಪದವನ್ನು deth ಎಂಬುದಾಗಿ ಬರೆದಿದ್ದ!

ತನಿಖೆಯಲ್ಲಿ ತನ್ನ ಅಣ್ಣನಿಂದ ಹಣ ವಸೂಲಿ ಮಾಡುವ ನಿಟ್ಟಿನಲ್ಲಿ ತಾನೇ ಅಪಹರಣದ ನಾಟಕವಾಡಿರುವುದಾಗಿ ಪೊಲೀಸರಲ್ಲಿ ಸಂದೀಪ್‌ ತಪ್ಪೊಪ್ಪಿಕೊಂಡಿದ್ದು, ತಾನು ಸಿಐಡಿ ಕ್ರೈಮ್‌ ಸೀರಿಯಲ್‌ ನಿಂದ ಪ್ರಭಾವಿತಗೊಂಡು ಈ ನಾಟಕವಾಡಿರುವುದಾಗಿ ತಿಳಿಸಿದ್ದಾನೆ!

ಸಂದೀಪ್‌ ಮಿರ್ಜಾಪುರ್‌ ನ ಕಬ್ಬು ಖರೀದಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಡಿಸೆಂಬರ್‌ 30ರಂದು ಸಂದೀಪ್‌ ಬೈಕ್‌ ವೃದ್ಧರೊಬ್ಬರಿಗೆ ಡಿಕ್ಕಿ ಹೊಡೆದಿದ್ದು, ಅವರ ಔಷಧದ ಖರ್ಚಿಗಾಗಿ ನೀಡಬೇಕಾಗಿದ್ದ 5,000 ರೂಪಾಯಿ ಹಣಕ್ಕಾಗಿ ಈ ಅಪಹರಣದ ನಾಟಕವಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next