ಚಿಂಚೋಳಿ: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಾಲೂಕಿನ ಎಲ್ಲ ಹಳ್ಳಿ ಮತ್ತು ತಾಂಡಾದಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು ಮತ್ತು ಪಿಡಿಒ ಮತ್ತು ಅಧ್ಯಕ್ಷ, ಉಪಾಧ್ಯಕ್ಷರು, ಗ್ರಾಪಂ ಸದಸ್ಯರು ಹೆಚ್ಚಿನ ಜವಾಬ್ದಾರಿಯಿಂದ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಂಸದೀಯ ಕಾರ್ಯದರ್ಶಿ ಡಾ| ಉಮೆಶ ಜಾಧವ ಹೇಳಿದರು.
ಪಟ್ಟಣದ ಚಂದಾಪುರ ಸಿ.ಬಿ. ಪಾಟೀಲ ಪದವಿ ಮಹಾವಿದ್ಯಾಲಯದಲ್ಲಿ ತಾಲೂಕಿನ 17 ಗ್ರಾಪಂ ಅಭಿವೃದ್ದಿ ಅಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಗ್ರಾಪಂ ಸದಸ್ಯರಿಗಾಗಿ ಏರ್ಪಡಿಸಲಾಗಿದ್ದ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನ ಚಂದನಕೇರಾ, ಗಡಿಲಿಂಗದಳ್ಳಿ ಹಾಗೂ ಹೂವಿನಬಾವಿ ಬಹುಗ್ರಾಮ ಯೋಜನೆ ಬೇಗನೆ ಪೂರ್ಣಗೊಳಿಸಿ ಗ್ರಾಮ ಮತ್ತು ತಾಂಡಾದ ಜನರಿಗೆ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಆಗಬೇಕು.
ಕೆಟ್ಟಿರುವ ಕೊಳವೆಬಾವಿ ದುರಸ್ತಿಗೊಳಿಸಬೇಕು ಮತ್ತು ಸೋರಿಕೆಯಾಗುತ್ತಿರುವ ನೀರಿನ ಪೈಪ್ ಬದಲಾಯಿಸಬೇಕು. ಇಲ್ಲವೇ ದುರಸ್ತಿಗೊಳಿಸಬೇಕು ಎಂದು ಸೂಚಿಸಿದರು. ತಾಲೂಕಿನಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ನೀರಿನ ತಳವåಟ್ಟ ಕುಸಿಯುತ್ತಿದೆ. ನೀರು ಸಿಗುವ ಸ್ಥಳಗಳಲ್ಲಿ ಕೊಳವೆಬಾವಿ ಕೊರೆಯಿಸಬೇಕು. ಅದಕ್ಕೆ ಬೇಕಾಗುವ ಹಣ ಸರಕಾರದಿಂದ ಕೊಡಿಸಲಾಗುವುದು ಎಂದು ಹೇಳಿದರು.
ತಾಲೂಕಿನ ಖಾನಾಪುರ, ಗೌಡಪ್ಪ ಗುಡಿತಾಂಡಾ, ಚಂದನಕೇರಾ, ಹೇಮಲಾ ನಾಯಕ ತಾಂಡಾ, ಪತ್ತು ನಾಯಕ ತಾಂಡಾಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಡೋಣಿ ತಾಂಡಾ ಮತ್ತು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಕೊಳ್ಳಬೇಕು ಎಂದು ಎಇಇ ಶಿವಾಜಿ ಅವರಿಗೆ ಸೂಚಿಸಿದರು. ತಾಪಂ ಅಧಿಕಾರಿ ಅನೀಲಕುಮಾರ ರಾಠೊಡ ಮಾತನಾಡಿ, ಪಿಡಿಒ ಮತ್ತು ಪಂಪ್ ಆಪರೇಟರ್ ಗಳು ಕೇಂದ್ರ ಸ್ಥಾನದಲ್ಲಿದ್ದು ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಬೇಕು.
ಕರ್ತವ್ಯ ನಿರ್ಲಕ್ಷé ಮಾಡಿದರೆ ಜಿಪಂ ಸಿಇಒ ಅವರಿಗೆ ವರದಿ ಸಲ್ಲಿಸಿ ಸೂಕ್ತ ಕ್ರಮ ಕೈಕೊಳ್ಳಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಒಟ್ಟು 17 ಗ್ರಾಪಂ ವ್ಯಾಪ್ತಿಯ ತಾಂಡಾ ಮತ್ತು ಗ್ರಾಮಗಳ ಕುಡಿಯುವ ನೀರಿನ ಕುರಿತು ಚರ್ಚೆ ನಡೆಸಲಾಯಿತು. ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹ್ಮದ್ ಹುಸೇನ್ ನಾಯಕೋಡಿ, ತಾಪಂ ಸದಸ್ಯ ರಾಮರಾವ ರಾಠೊಡ ಇದ್ದರು.