Advertisement

ಹಫೀಜ್‌ನ MML ಉಗ್ರ ಸಂಘಟನೆ ಎಂದು ಅಮೆರಿಕ ಘೋಷಣೆ

08:10 AM Apr 04, 2018 | Karthik A |

ವಾಷಿಂಗ್ಟನ್‌: ವಿಧ್ವಂಸಕ ಕೃತ್ಯಗಳ ಮೂಲಕ ರಕ್ತ ದೋಕುಳಿ ಆಡುತ್ತಾ ಬಂದಿರುವ ಲಷ್ಕರ್‌ ಉಗ್ರ, ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಹಫೀಜ್‌ ಸಯೀದ್‌ ನ ರಾಜಕೀಯ ಮಹತ್ವಾಕಾಂಕ್ಷೆಗೆ ಅಮೆರಿಕ ಸರಿಯಾಗಿಯೇ ಕೊಡಲಿಯೇಟು ನೀಡಿದೆ. ಜಮಾತ್‌-ಉದ್‌-ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಸಯೀದ್‌ನ ರಾಜಕೀಯ ಪಕ್ಷವಾದ ಮಿಲ್ಲಿ ಮುಸ್ಲಿಂ ಲೀಗ್‌ (ಎಂಎಂಎಲ್‌) ಅನ್ನು ಅಮೆರಿಕವು ಮಂಗಳವಾರ ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಈ ಮೂಲಕ ಪಾಕ್‌ ನೆಲದಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಸಜ್ಜಾಗುತ್ತಿದ್ದ ಉಗ್ರನಿಗೆ ಸರಿಯಾದ ಪಾಠ ಕಲಿಸಿದೆ. ಜತೆಗೆ, ಪಾಕಿಸ್ತಾನದಲ್ಲಿ ಮುಕ್ತವಾಗಿ ಕಾರ್ಯನಿರ್ವಹಿಸುತ್ತಿರುವ ಲಷ್ಕರ್‌ ಸಂಘಟನೆಗೆ ಅಂಗಸಂಸ್ಥೆಯಾದ ತೆಹ್ರೀಕ್‌-ಇ-ಆಜಾದಿ-ಇ-ಕಾಶ್ಮೀರ್‌ (ಟಿಎಜೆಕೆ) ಅನ್ನೂ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸಲಾಗಿದೆ. ಅಮೆರಿಕದ ಈ ನಿರ್ಧಾರವನ್ನು ಭಾರತ ಸರ್ಕಾರ ಸ್ವಾಗತಿಸಿದ್ದು, ಉಗ್ರರು ಮತ್ತು ಅವರ ಸಂಘಟನೆಗಳನ್ನು ಮುಖ್ಯವಾಹಿನಿಗೆ ತರುವಂಥ ಪಾಕಿಸ್ತಾನದ ಯತ್ನವನ್ನು ಇದು ತಡೆದಿದೆ ಎಂದು ಹೇಳಿದೆ.

Advertisement

ಎಂ.ಎಂ.ಎಲ್‌.ಗ‌ೂ ಉಗ್ರ ಪಟ್ಟ: ಮಿಲ್ಲಿ ಮುಸ್ಲಿಂ ಲೀಗ್‌ ಮತ್ತು ಟಿಎಜೆಕೆ ಸಂಘಟನೆಗಳು ಲಷ್ಕರ್‌ನ ಅಂಗಸಂಸ್ಥೆಗಳಾಗಿವೆ. ಲಷ್ಕರ್‌ಗೆ ನಿರ್ಬಂಧ ಹೇರಿರುವ ಕಾರಣ ಈ ಎರಡು ಸಂಘಟನೆಗಳ ಮೂಲಕ ಸಂಪನ್ಮೂಲಗಳ ಕ್ರೋಡೀಕರಣ, ಹಣಕಾಸು ಸಂಗ್ರಹ ಹಾಗೂ ವಿಧ್ವಂಸಕ ಕೃತ್ಯಗಳನ್ನು ಎಸಗಲು ಲಷ್ಕರ್‌ ಯೋಜನೆ ಹಾಕಿಕೊಂಡಿದೆ. ಹಾಗಾಗಿ ಈ ಎರಡೂ ಸಂಘಟನೆಗಳನ್ನೂ ಭಯೋತ್ಪಾದಕ ಸಂಘಟನೆಗಳು ಎಂದು ಘೋಷಿಸುತ್ತಿದ್ದೇವೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ. ಜತೆಗೆ, ನಾವು ತಪ್ಪು ಮಾಡಲ್ಲ ಎಂದು ಲಷ್ಕರ್‌ ಎಷ್ಟೇ ಹೇಳಿ ಕೊಂಡರೂ, ಅದೊಂದು ಹಿಂಸಾ ತ್ಮಕ ಸಂಘಟನೆಯೇ ಆಗಿದೆ. ಅಂಥವರು ರಾಜಕೀಯ ಪ್ರವೇ ಶಿಸುವುದು ಸಲ್ಲ ಎಂದಿದೆ. ಇದೇ ವೇಳೆ, ಎಂ.ಎಂ.ಎಲ್‌. ಹೈಕಮಾಂಡ್‌ನ‌ 7 ಮಂದಿ ಸದಸ್ಯರನ್ನೂ ವಿದೇಶಿ ಭಯೋತ್ಪಾದಕರು ಎಂದು ಘೋಷಿಸಲಾಗಿದೆ. ರಾಜಕೀಯ ಪಕ್ಷವಾಗಿ ನೋಂದಣಿಯಾಗಬೇಕೆಂದರೆ ಆಂತರಿಕ ಸಚಿವಾಲಯದ ಅನುಮತಿ ಪತ್ರ ಬೇಕೇ ಎಂದು ಪಾಕ್‌ ಚುನಾವಣಾ ಆಯೋಗವು ಎಂಎಂಎಲ್‌ಗೆ ಸೂಚಿಸಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.

ಸ್ವಾಗತಾರ್ಹ ಬೆಳವಣಿಗೆ ಎಂದ ಭಾರತ: ಅಮೆರಿಕದ ನಿರ್ಧಾರವನ್ನು ಸ್ವಾಗತಿಸಿರುವ ಭಾರತದ ವಿದೇಶಾಂಗ ಇಲಾಖೆ, ಇದೊಂದು ಉತ್ತಮ ನಿರ್ಧಾರ ಎಂದಿದೆ. ಜತೆಗೆ, ಪಾಕಿಸ್ತಾನವು ಉಗ್ರ ಸಂಘಟನೆಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಭಾರತದ ವಾದಕ್ಕೆ ಇದೇ ಸಾಕ್ಷಿ ಎಂದೂ ಹೇಳಿದೆ. ಪಾಕ್‌ನ ನಿಯಂತ್ರಣದಲ್ಲಿ ಉಗ್ರ ಸಂಘಟನೆಗಳು ತಮ್ಮ ಹೆಸರು ಬದಲಿಸಿಕೊಂಡು ಸರಾಗವಾಗಿ ಕಾರ್ಯಚಟುವಟಿಕೆ ಮುಂದುವರಿಸಿರುವುದು ಕೂಡ ಸತ್ಯ ಎಂದೂ ಇಲಾಖೆ ತಿಳಿಸಿದೆ.

ಐಸಿಸ್‌ ನಂಟು: 81 ಮಂದಿ ಸೆರೆ
ಭಾರತದಲ್ಲಿ ಐಸಿಸ್‌ ಉಗ್ರ ಸಂಘಟನೆಗೆ ಸಂಬಂಧಿಸಿದ 23 ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ತನಿಖೆ ಮಾಡುತ್ತಿದ್ದು, 81 ಮಂದಿಯನ್ನು ಬಂಧಿಸಿದೆ. ಆರೋಪಿಗಳ ಪೈಕಿ 39 ಮಂದಿ ತಲೆಮರೆಸಿಕೊಂಡಿದ್ದಾರೆ ಎಂದೂ ಲೋಕಸಭೆಗೆ ಸಚಿವ ಅಹಿರ್‌ ತಿಳಿಸಿದ್ದಾರೆ. ಇದೇ ವೇಳೆ, ಕಣಿವೆ ರಾಜ್ಯದ ಬೆಳವಣಿಗೆಗಳ ಕುರಿತು ವಿಶ್ವಸಂಸ್ಥೆ ಮುಖ್ಯಸ್ಥ ಆ್ಯಂಟೋನಿಯೋ ಗುಟೆರೆಸ್‌ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಸದಸ್ಯ ರಾಷ್ಟ್ರಗಳು ತಮ್ಮ ನಾಗರಿಕರ ರಕ್ಷಣೆಗೆ ಬದ್ಧವಾಗಿರಬೇಕು ಎಂದು ತಿಳಿಸಿರುವುದಾಗಿ ಅವರ ವಕ್ತಾರರು ಮಾಹಿತಿ ನೀಡಿದ್ದಾರೆ.

ಪ್ರತ್ಯೇಕತಾವಾದಿಗಳಿಗೆ ಪಾಕ್‌ನಿಂದ ಹಣ
ಕಣಿವೆ ರಾಜ್ಯದ ಕೆಲವು ಪ್ರತ್ಯೇಕತಾವಾದಿಗಳು ಪಾಕಿಸ್ತಾನದಿಂದ ಹಣಕಾಸು ನೆರವು ಪಡೆಯುವುದಲ್ಲದೆ, ನೆರೆರಾಷ್ಟ್ರದ ಸೂಚನೆ ಮೇರೆಗೆ ಜಮ್ಮು-ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಾರೆ ಎಂದು ಲೋಕಸಭೆಗೆ ಕೇಂದ್ರ ಸಚಿವ ಹನ್ಸರಾಜ್‌ ಅಹಿರ್‌ ಮಾಹಿತಿ ನೀಡಿದ್ದಾರೆ. ಇದರಲ್ಲಿ ಪ್ರತ್ಯೇಕತಾವಾದಿಗಳ ಕೈವಾಡವೂ ಇದೆ ಎಂದು ಅವರು ತಿಳಿಸಿದ್ದಾರೆ. 

Advertisement

ಪಾಕ್‌ ಶೆಲ್‌ ದಾಳಿ: ಯೋಧ ಹುತಾತ್ಮ
ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿನ ಮುಂಚೂಣಿ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕ್‌ ಸೇನೆ ಮಂಗಳವಾರ ಶೆಲ್‌ ದಾಳಿ ನಡೆಸಿದ್ದು, ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಲೆಫ್ಟಿನೆಂಟ್‌ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಸುಮಾರು 2 ಗಂಟೆಗಳ ಕಾಲ ದಾಳಿ ನಡೆದಿದ್ದು, ಸೇನೆಯೂ ಪ್ರತ್ಯುತ್ತಕ ನೀಡಿದೆ. 

ಪಾಕಿಸ್ತಾನ ಈಗಲೂ 1971ರ ಸೋಲಿನ ಸುತ್ತಲೇ ಗಿರಕಿ ಹೊಡೆಯುತ್ತಿದೆ. ನುಸುಳುವಿಕೆ,  ಅಪ್ರಚೋದಿತ ಗುಂಡಿನ ದಾಳಿ ಎದುರಿಸಲು ಬಿಎಸ್‌ಎಫ್ ರಕ್ಷಣಾತ್ಮಕವಾಗಿ, ಆಕ್ರಮಣಕಾರಿಯಾಗಿ ಸಜ್ಜಾಗಿದೆ.
– ಕೆ.ಕೆ.ಶರ್ಮಾ, ಬಿಎಸ್‌ಎಫ್ ಡಿಜಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next