ಬೆಂಗಳೂರು: ಮಹಿಳೆಯರನ್ನು ರಾಜಕೀಯ ಮತ್ತು ಆರ್ಥಿಕವಾಗಿ ಸಶಕ್ತಗೊಳಿಸಲು ಕಾಂಗ್ರೆಸ್ ಬದ್ಧವಾಗಿದ್ದು, ವರ್ಷಾಂತ್ಯ ದೊಳಗಾಗಿ 10 ಲಕ್ಷ ಮಹಿಳೆಯರನ್ನು ಕಾಂಗ್ರೆಸ್ ಸಂಘಟನೆಯಲ್ಲಿ ತೊಡಗಿಸುವ ಗುರಿಯಿದೆ ಎಂದು ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ಹೇಳಿದರು.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಅವರು ಮಾತನಾಡಿ, ದೇಶಾದ್ಯಂತ ಮಹಿಳಾ ಕಾಂಗ್ರೆಸ್ ಸಂಘಟನೆ ಬಲವಾ ಗಿದ್ದು, ಮಹಿಳಾ ಕಾಂಗ್ರೆಸ್‌ನ ಸ್ಥಾಪನಾ ದಿನವಾದ ಸೆ. 15ರಿಂದ ಸದಸ್ಯತ್ವ ನೋಂದಣಿ ಆರಂಭಿಸಲಾಗಿದೆ. ಒಂದೇ ತಿಂಗಳಲ್ಲಿ 2.05 ಲಕ್ಷ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದು, ವರ್ಷಾಂತ್ಯದೊಳಗೆ 10 ಲಕ್ಷ ಮಹಿಳೆ ಯರನ್ನು ನೋಂದಾಯಿಸುವ ಗುರಿ ಇದೆ ಎಂದರು.
ದೇಶದಲ್ಲಿ 50 ಸಾವಿರ ಮಹಿಳೆಯರ ನೋಂದಣಿ ಮೂಲಕ ತೆಲಂಗಾಣ ಮೊದಲ ಸ್ಥಾನದಲ್ಲಿದ್ದರೆ, 30 ಸಾವಿರ ಮಹಿಳೆಯರ ನೋಂದಣಿ ಮುಖಾಂತರ ಕರ್ನಾಟಕ 2ನೇ ಸ್ಥಾನದಲ್ಲಿದೆ ಎಂದರು.
ಸ್ಥಾನಮಾನಕ್ಕೆ ಕಾಂಗ್ರೆಸ್ ಬದ್ಧ
ಮಹಿಳೆಯರಿಗೆ ರಾಜಕೀಯ ಸ್ಥಾನಮಾನ ನೀಡಲು ಕಾಂಗ್ರೆಸ್ ಬದ್ಧವಾಗಿದ್ದು, ಹರಿಯಾಣದಲ್ಲಿ ವಿನೇಶ್ ಫೋಗಾಟ್ ಅವರಿಗೆ ಟಿಕೆಟ್ ಕೊಟ್ಟಿದ್ದೇವೆ. ಚುನಾವಣೆಯಲ್ಲೂ ಗೆದ್ದಿದ್ದಾರೆ. ಕರ್ನಾಟಕದಲ್ಲಿ ಸದಸ್ಯತ್ವ ಅಭಿಯಾನದ ಬಳಿಕ ಮಹಿಳಾ ಸಮಾವೇಶ ನಡೆಸಲಾಗುತ್ತದೆ.
ಈ ವೇಳೆ ಬೂತ್, ಬ್ಲಾಕ್ ಮತ್ತು ಜಿಲ್ಲಾ ಕಾಂಗ್ರೆಸ್‌ನಲ್ಲಿ ಮಹಿಳಾ ಸದಸ್ಯರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗುತ್ತದೆ. 3 ದಿನಗಳ ಕಾಲ ಮಹಿಳಾ ನಾಯಕತ್ವ ತರಬೇತಿಯನ್ನೂ ಕೊಡಲಾಗುತ್ತದೆ ಎಂದ ಅಲ್ಕಾ ಲಂಬಾ, ಪ್ರಜ್ವಲ್ ರೇವಣ್ಣ ಪ್ರಕರಣ ಸೇರಿ ಹಲವು ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಸದ್ದು ಮಾಡಿವೆ. ಮಹಿಳೆಯರ ರಕ್ಷಣೆ ಆಗಬೇಕು. ಮಹಿಳಾ ಆಯೋಗವು ನಾರಿ ನ್ಯಾಯಕ್ಕೆ ಬದ್ಧವಾಗಿರಲಿದೆ ಎಂದರು.