ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಬುಧವಾರ (ಅ.09) ಬೆಳಗ್ಗೆ ಉಗ್ರರು ಅಪಹರಿಸಿದ್ದ ಸೇನಾ ಯೋಧನ ಶವ ಪತ್ತೆಯಾಗಿದ್ದು, ದೇಹದಲ್ಲಿ ಗುಂಡಿನ ದಾಳಿಯ ಗುರುತುಗಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಅಕ್ಟೋಬರ್ 8ರಂದು ಜಮ್ಮು-ಕಾಶ್ಮೀರ ಪೊಲೀಸರು ಮತ್ತು ಸೇನೆ ಭಯೋತ್ಪಾದಕರ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಅನಂತ್ ನಾಗ್ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಇಬ್ಬರು ಯೋಧರನ್ನು ಉಗ್ರರು ಅಪಹರಿಸಿದ್ದರು. ಆದರೆ ಇದರಲ್ಲಿ ಓರ್ವ ಯೋಧ ಎರಡು ಗುಂಡಿನ ದಾಳಿಯ ನಂತರವೂ ತಪ್ಪಿಸಿಕೊಂಡು ಬಂದಿರುವುದಾಗಿ ವರದಿ ವಿವರಿಸಿದೆ.
ಗಾಯಗೊಂಡ ಸೈನಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿರುವುದಾಗಿ ಮೂಲಗಳು ತಿಳಿಸಿವೆ. ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ಈ ಘಟನೆ ನಡೆದಿದೆ.
ಅಪಹರಣಕ್ಕೊಳಗಾದ ಯೋಧ ಹಿಲಾಲ್ ಅಹ್ಮದ್ ಭಟ್ ಅವರ ಮೃತದೇಹವನ್ನು ಅನಂತ್ ನಾಗ್ ನ ಪತ್ರಿಬಾಲ್ ಅರಣ್ಯಪ್ರದೇಶದಲ್ಲಿ ಪತ್ತೆಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಯೋತ್ಪಾದಕರ ವಿರುದ್ಧ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.