Advertisement

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

12:28 AM Nov 09, 2024 | Team Udayavani |

ಬೆಂಗಳೂರು: ದೇಶಾದ್ಯಂತ ಭಾರೀ ಆತಂಕ ಹುಟ್ಟಿಸಿದ್ದ ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣದ 6ನೇ ಆರೋಪಿ ಮೊಹಮ್ಮದ್‌ ಶಾಹಿದ್‌ ಫೈಸಲ್‌ ಪಾಕಿಸ್ಥಾನದಲ್ಲಿದ್ದಾನೆ ಎನ್ನಲಾಗಿದ್ದು, ಈ ಮೂಲಕ ಪ್ರಕರಣದಲ್ಲಿ ಪಾಕ್‌ ನಂಟು ಇರುವ ಶಂಕೆ ವ್ಯಕ್ತವಾಗಿದೆ.

Advertisement

ಸ್ಫೋಟ ಪ್ರಕರಣದಲ್ಲಿ ಐಎನ್‌ಎ ತನಿಖೆ ನಡೆಸಿ ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದೆ. ಪ್ರಕರಣದ 6ನೇ ಆರೋಪಿಯಾಗಿರುವ ಫೈಸಲ್‌ ಪಾಕಿಸ್ಥಾನದಲ್ಲಿರುವ ಬಗ್ಗೆ ಎನ್‌ಐಎ ತನಿಖಾ ತಂಡಕ್ಕೆ ಸುಳಿವು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಪಾಕ್‌ ನಂಟಿರುವ ಶಂಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಎಲ್ಲ ಆಯಾಮಗಳಲ್ಲೂ ಎನ್‌ಐಎ ತನಿಖೆ ನಡೆಸುತ್ತಿದೆ. ಫೈಸಲ್‌ ಪಾಕ್‌ಗೆ ಹೋಗಿರುವುದು, ಆತನ ಜತೆ ಒಡನಾಟ ಹೊಂದಿರುವವರ ಮೇಲೆ ಎನ್‌ಐಎ ಹದ್ದಿನ ಕಣ್ಣಿಟ್ಟಿದೆ ಎಂದು ತಿಳಿದು ಬಂದಿದೆ.

ಫೈಸಲ್‌ ಸುಳಿವು ಸಿಕ್ಕಿದ್ದು ಹೇಗೆ?
ದೇಶದಲ್ಲಿ ಈ ಹಿಂದೆ ನಡೆದಿದ್ದ ವಿವಿಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಿಕ್ಕಿಬಿದ್ದ ಶಂಕಿತರ ವಿಚಾರಣೆ ವೇಳೆ “ಕರ್ನಲ್‌’ ಹೆಸರಿನ ಹ್ಯಾಂಡ್ಲರ್‌ ಒಬ್ಬ ಬಾಂಬ್‌ ಇರಿಸಲು ಸೂಚನೆ ಕೊಡುತ್ತಿದ್ದ ಎನ್ನುವುದು ತಿಳಿದುಬಂದಿತ್ತು. ಎನ್‌ಐಎ ಅಧಿಕಾರಿಗಳು ಈ “ಕರ್ನಲ್‌’ ಯಾರು ಎಂಬ ಜಾಡು ಹಿಡಿಯುತ್ತಿದ್ದರು. ಅಷ್ಟರಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇರಿಸಿದ ಅಬ್ದುಲ್‌ ಮತೀನ್‌ ತಾಹ ಹಾಗೂ ಮುಸಾಬಿರ್‌ ಹುಸೇನ್‌ ಶಾಜಿಬ್‌ ವಿಚಾರಣೆ ವೇಳೆ ಮೊಹಮ್ಮದ್‌ ಶಾಹಿದ್‌ ಫೈಸಲ್‌ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ತನಿಖೆ ವೇಳೆ ಈತನೇ “ಕರ್ನಲ್‌’ ಎಂಬುದು ಗೊತ್ತಾಗಿದೆ.

2023ರಲ್ಲೂ ವಿಫ‌ಲ ಯತ್ನ
ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟದ ಆರೋಪಿಗಳು 2023ರ ಡಿಸೆಂಬರ್‌ನಲ್ಲಿಯೇ ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟ ನಡೆಸಲು ಸಂಚು ಮಾಡಿದ್ದರು. ಆನ್‌ಲೈನ್‌ ಹ್ಯಾಂಡ್ಲರ್‌ ಮೂಲಕ ಈ ಸೂಚನೆ ಬಂದಿತ್ತು. 2024ರ ಜ. 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಇದೆ, ಅಂದೇ ಸ್ಫೋಟ ನಡೆಸಿ ಎಂಬ ಸೂಚನೆ ಇತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಂಕಿತ ಶಾಜಿಬ್‌ ಮಲ್ಲೇಶ್ವರದ ಬಿಜೆಪಿ ಕಚೇರಿಯನ್ನು ಗುರಿ ಮಾಡಿದ್ದ. ಹೀಗಾಗಿ ಆತ ಬೆಂಗಳೂರಿನಿಂದ ಚೆನ್ನೈಗೆ ಸ್ಥಳಾಂತರಗೊಂಡಿದ್ದ. ಟ್ರಿಪ್ಲಿಕೇನ್‌ ಎಂಬಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡೇ ಐಇಡಿ ಬಾಂಬ್‌ ತಯಾರಿಸಿದ್ದ. ಜ. 22ರಂದು ಬೆಳಗ್ಗೆ ಐಇಡಿ ಬಾಂಬ್‌ ಜತೆಗೆ ಬೆಂಗಳೂರಿಗೆ ಬಂದಿದ್ದ ಎನ್ನಲಾಗಿದೆ.

ಬಳಿಕ ಬಿಜೆಪಿ ಕಚೇರಿ ಮುಂಭಾಗದಲ್ಲಿ ಬಾಂಬ್‌ ಇಡಲು ಸಂಚು ರೂಪಿಸಿದ್ದ. ಹೆಚ್ಚಿನ ಭದ್ರತೆ ಇದ್ದ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿ ಹಿಂಭಾಗದಲ್ಲಿ ಬಾಂಬ್‌ ಇಟ್ಟಿದ್ದ. 90 ನಿಮಿಷಕ್ಕೆ ಟೈಮರ್‌ ಸೆಟ್‌ ಮಾಡಿದ್ದ. ಆದರೆ ಬಾಂಬ್‌ ಸ್ಫೋಟಗೊಂಡಿರಲಿಲ್ಲ. ಅನಂತರ ಆತ ಚೆನ್ನೈಗೆ ಪರಾರಿಯಾಗಿದ್ದ. ಬಳಿಕ ಮತ್ತೆ ಜನನಿಬಿಡ ಪ್ರದೇಶದಲ್ಲಿ ಬಾಂಬ್‌ ಸ್ಫೋಟಕ್ಕೆ ಸಂಚು ರೂಪಿಸಿದ್ದ. ಅಂತಿಮವಾಗಿ ಫೆಬ್ರವರಿಯಲ್ಲಿ ಐಇಡಿ ಬಾಂಬ್‌ ತಯಾರಿಸಿ, ಫೆ. 29ರಂದು ಚೆನ್ನೈಯಿಂದ ಬೆಂಗಳೂರಿಗೆ ಬಂದು ಕೆ.ಆರ್‌. ಪುರ ಟಿನ್‌ ಫ್ಯಾಕ್ಟರಿ ಬಳಿ ಇಳಿದು, ಕುಂದಲಹಳ್ಳಿಗೆ ಬಂದು ರಾಮೇಶ್ವರಂ ಕೆಫೆಯಲ್ಲಿ ಐಇಡಿ ಬಾಂಬ್‌ ಇಟ್ಟಿರುವ ಅಂಶಗಳನ್ನು ಎನ್‌ಐಎ ಎಳೆಎಳೆಯಾಗಿ ದೋಷಾರೋಪ ಪಟ್ಟಿಯಲ್ಲಿ ಬಿಚ್ಚಿಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next