ವಾಷಿಂಗ್ಟನ್:ಇತ್ತೀಚೆಗಷ್ಟೇ ಕಪ್ಪು ಜನಾಂಗದ ಜಾರ್ಜ್ ಫ್ಲಾಯ್ಡ್ ಹತ್ಯೆಯ ಆಕ್ರೋಶ, ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ಅಮೆರಿಕದ ಅಟ್ಲಾಂಟಾ ಪೊಲೀಸ್ ಗುಂಡಿಗೆ ಮತ್ತೊಬ್ಬ ಕಪ್ಪು ವರ್ಣದ ವ್ಯಕ್ತಿ ಸಾವನ್ನಪ್ಪಿದ್ದು, ಆಕ್ರೋಶ ಭುಗಿಲೆದ್ದಿರುವುದಾಗಿ ವರದಿ ತಿಳಿಸಿದೆ.
ಸ್ಥಳೀಯ ಮಾಧ್ಯಮದ ವರದಿ ಪ್ರಕಾರ, ಶನಿವಾರ ತಡರಾತ್ರಿ 27 ವರ್ಷದ ರೇಶಾರ್ಡ್ ಬ್ರೂಕ್ಸ್ ಎಂಬ ಕಪ್ಪು ವರ್ಣೀಯನನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಈ ಪ್ರಕರಣದ ಬೆನ್ನಲ್ಲೇ ಅಟ್ಲಾಂಟಾ ಪೊಲೀಸ್ ವರಿಷ್ಠ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಮೇಯರ್ ತಿಳಿಸಿದ್ದಾರೆ.
ರೇಶಾರ್ಡ್ ಹತ್ಯೆಗೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನಾಕಾರರು ಇಂಟರ್ ಸ್ಟೇಟ್ ಹೈವೇಯನ್ನು ಬಂದ್ ಮಾಡಿದ್ದಾರೆ. ಅಲ್ಲದೇ ಬ್ರೂಕ್ಸ್ ಹತ್ಯೆ ನಡೆದ ವೆಂಡಿ ರೆಸ್ಟೋರೆಂಟ್ ಗೆ ಪ್ರತಿಭಟನಾಕಾರರ ಬೆಂಕಿ ಹಚ್ಚಿರುವುದಾಗಿ ವರದಿ ವಿವರಿಸಿದೆ.
ಶುಕ್ರವಾರ ತಡರಾತ್ರಿ ವೆಂಡಿ ಫಾಸ್ಟ್ ಫುಡ್ ರೆಸ್ಟೋರೆಂಟ್ ಪಾರ್ಕಿಂಗ್ ಸ್ಥಳದ ಪ್ರವೇಶ ದ್ವಾರದಲ್ಲಿ ತನ್ನ ಕಾರಿನಲ್ಲಿ ಬ್ರೂಕ್ಸ್ ಮಲಗಿದ್ದ. ಇದನ್ನು ಗಮನಿಸಿದ ರೆಸ್ಟೋರೆಂಟ್ ಸಿಬ್ಬಂದಿ, ಕಾರನ್ನು ಮಧ್ಯೆ ನಿಲ್ಲಿಸಿ ಇತರ ಗ್ರಾಹಕರಿಗೆ ತೊಂದರೆ ಕೊಡುತ್ತಿದ್ದಾನೆ ಎಂದು ಬ್ರೂಕ್ಸ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಸ್ಥಳಕ್ಕೆ ಆಗಮಿಸಿ ಮದ್ಯಪಾನ ಮಾಡಿರುವ ಶಂಕೆ ವ್ಯಕ್ತಪಡಿಸಿ ಪರೀಕ್ಷೆಗೆ ಒಳಗಾಗಲು ಸೂಚನೆ ನೀಡಿದ್ದರು. ಆದರೆ ಬ್ರೂಕ್ಸ್ ನಿರಾಕರಿಸಿದ್ದ.ಈ ವೇಳೆ ಬ್ರೂಕ್ಸ್ ನನ್ನು ಬಂಧಿಸಲು ಯತ್ನಿಸಿದ್ದರು. ಅಲ್ಲದೇ ಆತ ಅಲ್ಲಿಂದ ಓಡಲು ಆರಂಭಿಸಿದಾಗ ಪೊಲೀಸರು ಗುಂಡು ಹಾರಿಸಿರುವುದಾಗಿ ವರದಿ ತಿಳಿಸಿದೆ.
ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಸರ್ಜರಿ ನಡೆಸಿದ ನಂತರ ಆತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು. ಘರ್ಷಣೆ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿರುವುದಾಗಿ ವರದಿ ಹೇಳಿದೆ.