ರೋಮ್: ಇಟಲಿಯ ಮೇರಿ ಮಿಯನ್‌ಗೆ ಈಗ 90 ವರ್ಷ. ಈಕೆ 1945, ಎ. 28ರಂದು ಕಳೆದುಕೊಂಡಿದ್ದ ಹುಟ್ಟುಹಬ್ಬದ ಕೇಕನ್ನು ಅಮೆರಿಕ ಸೇನೆ ಮೊನ್ನೆ ಗುರುವಾರ ಮರಳಿಸಿದೆ!
ಜತೆಗೆ ಇಟಲಿ, ಇಂಗ್ಲಿಷ್ ಭಾಷೆಯಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದೆ. ಅಮೆರಿಕ ಸೇನೆಯ ಈ ನಡೆಯಿಂದ ಭಾವುಕರಾದ ಮಿಯನ್ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ನನ್ನ ಜೀವನದಲ್ಲೇ ಈ ದಿನವನ್ನು ಮರೆಯಲಾರೆ ಎಂದಿದ್ದಾರೆ. ಅರ್ಥವಾಗ ಲಿಲ್ಲವೇ? ಮುಂದೆ ಓದಿ…
ಆಗಿದ್ದೇನು?: 1945ರಲ್ಲಿ ಎರಡನೆಯ ವಿಶ್ವಯುದ್ಧ ನಡೆಯುತ್ತಿತ್ತು. ಆಗ ಅಮೆರಿಕದ 88ನೇ ಇನ್‌ಫ್ಯಾಂಟ್ರಿ ಡಿವಿಷನ್ ಸೇನಾ ತುಕಡಿಯೊಂದು ಇಟಲಿಯ ವೆನಿಸ್ ನಗರದ ವಾಯವ್ಯ ಭಾಗದಲ್ಲಿರುವ ವಿಸೆನಾl ನಗರದಲ್ಲಿತ್ತು. ಜರ್ಮನಿ ಸೈನಿಕರೆದುರು ಕಾದಾಡಿ ವಿಪರೀತ ಹಸಿವಿನಿಂದ ಬಳಲಿತ್ತು. ಇದೇ ವೇಳೆ ಆಗ ಕೇವಲ 13 ವರ್ಷದ ಪುಟ್ಟ ಬಾಲಕಿಯಾಗಿದ್ದ ಮಿಯನ್, ಜರ್ಮನ್ ಯೋಧರ ಭೀತಿಯಿಂದ ಸನಿಹದ ಹಳ್ಳಿಯೊಂದರಲ್ಲಿ ರಾತ್ರಿ ಕಳೆದಿದ್ದರು. ಅದು ಅವರ 13ನೇ ಜನ್ಮದಿನದ ಹಿಂದಿನದಿನ. ಆ ರಾತ್ರಿ ಮಿಯನ್ ತಾಯಿ, ಮಗಳ ಜನ್ಮದಿನಕ್ಕಾಗಿ ಕೇಕ್ ಒಂದನ್ನು ಸಿದ್ಧಪಡಿಸಿ, ಕಿಟಕಿ ಬಳಿ ತಣ್ಣಗಾಗಲು ಇಟ್ಟಿದ್ದರು. ಮಿಯನ್ ಬೆಳಗ್ಗೆ ಎದ್ದು ಕೇಕ್‌ಗಾಗಿ ಹುಡುಕಿದರೆ, ಅದು ನಾಪತ್ತೆ! ವಿಪರೀತ ಹಸಿದಿದ್ದ ಅಮೆರಿಕ ಸೇನಾಪಡೆ ಅದನ್ನು ತಿಂದಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೇ?
ಈ ಘಟನೆ ನಡೆದು 77 ವರ್ಷವೇ ಕಳೆದಿದೆ. ಇಷ್ಟು ದೀರ್ಘಕಾಲ ಸಂದರೂ ಮಿಯನ್ ನೋವು, ನೆರವನ್ನು ನೆನಪಿಸಿ ಕೊಂಡಿರುವ ಅಮೆರಿಕದ 88ನೇ ಇನ್‌ಫ್ಯಾಂಟ್ರಿ ಡಿವಿಷನ್ ಸೇನಾಪಡೆ ವಿಸೆನಾl ನಗರಕ್ಕೆ ತೆರಳಿ 90 ವರ್ಷದ ವೃದ್ಧೆ ಮಿಯನ್‌ಗೆ ಕೇಕೊಂದನ್ನು ಉಡುಗೊರೆಯಾಗಿ ನೀಡಿದೆ. ಗುರುವಾರ ಕೇಕ್ ಸಿಕ್ಕಿದೆ, ಶುಕ್ರವಾರ ಕುಟುಂಬ ಸದಸ್ಯ ರೆಲ್ಲರೊಂದಿಗೆ ಆಕೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.