ಹೈಪ್ರೊಫೈಲ್ ನ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಜಯಭೇರಿ ಗಳಿಸುವ ಮೂಲಕ ಎರಡನೇ ಬಾರಿಗೆ ಅಧ್ಯಕ್ಷಗಾದಿ ಏರುವ ಸಿದ್ಧತೆಯಲ್ಲಿದ್ದಾರೆ. ಐಶಾರಾಮಿ, ಬಿಗಿ ಬಂದೋಬಸ್ತಿನ ಶ್ವೇತಭವನದಲ್ಲಿ ವಾಸ್ತವ್ಯ ಹೂಡಿ ಅಧಿಕಾರ ಚಲಾಯಿಸುವ ಅಮೆರಿಕ ಅಧ್ಯಕ್ಷರು ವಾರ್ಷಿಕ ಪಡೆಯುವ ಸಂಬಳ ಎಷ್ಟು? ಅವರಿಗೆ ಇರುವ ಸೌಲಭ್ಯಗಳೇನು ಎಂಬ ಮಾಹಿತಿಯ ವಿವರ ಇಲ್ಲಿದೆ…
ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷರು ವಾರ್ಷಿಕ ಪಡೆಯುವ ಸಂಬಳ 400,000 ಲಕ್ಷ ಡಾಲರ್! (3,37,43,940.84 ಕೋಟಿ ರೂಪಾಯಿ). 2001ರಲ್ಲಿ ಅಮೆರಿಕ ಕಾಂಗ್ರೆಸ್ ಈ ಸಂಬಳವನ್ನು ನಿಗದಿಪಡಿಸಿದ್ದು, ಅಂದಿನಿಂದ ಈವರೆಗೂ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಜಗತ್ತಿನಲ್ಲಿ ಅತೀ ಹೆಚ್ಚು ಸಂಬಳ ಪಡೆಯುವುದು ಸಿಂಗಾಪುರ ಪ್ರಧಾನಿ(ಲೀ ಸಿಯೆನ್ ಲೂಂಗ್)..ಅವರು ವಾರ್ಷಿಕವಾಗಿ ಅಂದಾಜು 1.6 ಮಿಲಿಯನ್ ಡಾಲರ್(13,50,14,400.00).
ಸಂಬಳ ಹೊರತುಪಡಿಸಿ ಅಧ್ಯಕ್ಷರಾದವರು ಗಮನಾರ್ಹ ಪ್ರಯೋಜನ ಪಡೆಯುತ್ತಾರೆ. ಅದರಲ್ಲಿ ಶ್ವೇತಭವನದ ವಾಸ, ಏರ್ ಫೋರ್ಸ್ ಒನ್ ಮತ್ತು ಮರೈನ್ ಒನ್ ಬಳಕೆಗೆ ಅವಕಾಶ, ಐಶಾರಾಮಿ ಲಿಮೊಸಿನ್ ಬುಲೆಟ್ ಪ್ರೂಪ್ ಕಾರು, ದಿನದ 24 ಗಂಟೆಗಳ ಕಾಲ ಸಿಐಎ ರಕ್ಷಣೆ…ಒಳಗೊಂಡಿದ್ದು, ಇವೆಲ್ಲವೂ ಸೇರಿ ವಾರ್ಷಿಕವಾಗಿ ಸಿಗುವ ಭತ್ಯೆ 5,69,000 ಡಾಲರ್!
ಅಮೆರಿಕ ಅಧ್ಯಕ್ಷರ ವೇತನದಲ್ಲಿ ಹಲವು ಭತ್ಯೆಗಳು ಮತ್ತು ಸಂಬಳಯೇತರ ಲಾಭಾಂಶ ಸೇರಿದೆ. ಆದರೂ ಜಾಗತಿಕವಾಗಿ ಹೋಲಿಸಿದಲ್ಲಿ ಅಮೆರಿಕದ ಅಧ್ಯಕ್ಷರ ವೇತನ ದೊಡ್ಡ ಮಟ್ಟ ತಲುಪಿಲ್ಲ ಎಂದು ವರದಿ ತಿಳಿಸಿದೆ.
ಖರ್ಚಿನ ಭತ್ಯೆ( Expense Allowance): ಅಮೆರಿಕ ಅಧ್ಯಕ್ಷರು ಅಧಿಕೃತ ಹಾಗೂ ವೈಯಕ್ತಿಕ ಖರ್ಚಿಗಾಗಿ ವಾರ್ಷಿಕ 50,000 ಡಾಲರ್ (42,18, 400 ರೂಪಾಯಿ ) ತೆರಿಗೆ ರಹಿತ ಭತ್ಯೆ ಪಡೆಯುತ್ತಾರೆ.
ಪ್ರಯಾಣ ಮತ್ತು ಮನರಂಜನೆ ಭತ್ಯೆ(Travel and Entertainment): ಅಧ್ಯಕ್ಷರ ಪ್ರಯಾಣಕ್ಕಾಗಿ 1,00,000 ಡಾಲರ್(84,36,447.82 ರೂಪಾಯಿ) ಭತ್ಯೆ ಹಾಗೂ 19,000 ಡಾಲರ್(16,02,992) ಮನರಂಜನಾ ಭತ್ಯೆ ಪಡೆಯುತ್ತಾರೆ.
ಶ್ವೇತಭವನ ಪುನರ್ ಅಲಂಕಾರ(White House Redecoration): ಅಧ್ಯಕ್ಷರಾಗಿ ಪ್ರಮಾನವಚನ ಸ್ವೀಕರಿಸಿದ ನಂತರ ಅಧ್ಯಕ್ಷರಿಗೆ ಶ್ವೇತಭವನದ ಪುನರ್ ಅಲಂಕಾರಕ್ಕಾಗಿ 100,000 ಡಾಲರ್ ನೀಡಲಾಗುತ್ತದೆ.
ಮಾಜಿ ಅಧ್ಯಕ್ಷರಿಗೆ ಸಿಗುವ ಪಿಂಚಣಿ ಮತ್ತು ಸಾರಿಗೆ ಸೌಲಭ್ಯ ಏನು?:
ಹಾಲಿ ಅಧ್ಯಕ್ಷರು ಮಾಜಿಯಾದ ನಂತರವೂ ಕೂಡಾ ಪಿಂಚಣಿ ಸೇರಿದಂತೆ ಹಲವಾರು ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಮಾಜಿ ಅಧ್ಯಕ್ಷರು ವಾರ್ಷಿಕವಾಗಿ 2,30,000 ಡಾಲರ್(1,94,03,122.00 ರೂಪಾಯಿ) ಪಿಂಚಣಿ ಪಡೆಯುತ್ತಾರೆ. ಅದೇ ರೀತಿ ಆರೋಗ್ಯ ಸೌಲಭ್ಯ, ಕಚೇರಿ ತೆರೆಯಲು ಹಣಕಾಸಿನ ನೆರವು, ಅಷ್ಟೇ ಅಲ್ಲ ಮಾಜಿ ಅಧ್ಯಕ್ಷರು ಪ್ರಯಾಣಕ್ಕಾಗಿ ಅಧಿಕೃತವಾಗಿ ಭತ್ಯೆಯನ್ನು ಪಡೆಯುವ ಸೌಲಭ್ಯ ಇದೆ.