ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ(US Presidential Elections) ಮತ ಎಣಿಕೆ ಬುಧವಾರ (ನ.06) ಮುಂದುವರಿದಿದ್ದು, ಪ್ರಸ್ತುತ ಫಲಿತಾಂಶದಲ್ಲಿ ರಿಪಬ್ಲಿಕನ್ ಪಕ್ಷ ಅಮೆರಿಕದ ಸೆನೆಟ್(US Senate) ನಲ್ಲಿ ಬಹುಮತ ಪಡೆದಿರುವುದಾಗಿ ಮಾಧ್ಯಮಗಳ ವರದಿ ತಿಳಿಸಿದೆ.
ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ 266 ಎಲೆಕ್ಟ್ರೊರಲ್ ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದು, ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ 188 ಎಲೆಕ್ಟ್ರೊರಲ್ ಮತ ಪಡೆದಿದ್ದಾರೆ. ವರದಿ ಪ್ರಕಾರ, ಅಮೆರಿಕ ಕಾಂಗ್ರೆಸ್ ನ ಮೇಲ್ಮನೆಯ 100 ಸದಸ್ಯರಲ್ಲಿ ರಿಪಬ್ಲಿಕನ್ ಪಕ್ಷದ 51 ಸದಸ್ಯರು ಗೆಲುವು ಸಾಧಿಸಿದ್ದು, ಡೆಮಾಕ್ರಟಿಕ್ ಪಕ್ಷದ 42 ಸದಸ್ಯರು ಜಯ ಸಾಧಿಸಿದ್ದಾರೆ.
ಡೊನಾಲ್ಡ್ ಟ್ರಂಪ್ 26 ರಾಜ್ಯಗಳಲ್ಲಿ ಭರ್ಜರಿ ಮತಬೇಟೆ ಮೂಲಕ 266 ಎಲೆಕ್ಟ್ರೊರಲ್ ಮತ ಪಡೆದಿದ್ದು, ಹ್ಯಾರಿಸ್ 188 ಎಲೆಕ್ಟ್ರೊರಲ್ ಮತ ಗಳಿಸದ್ದಾರೆ. ಏತನ್ಮಧ್ಯೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಯುಸ್ ಕಾಲೇಜ್ ನ ಒಟ್ಟು 538 ಎಲೆಕ್ಟ್ರೊರಲ್ ಮತಗಳಲ್ಲಿ 435 ಹೌಸ್ ಆಫ್ ರೆಪ್ರೆಸೆನ್ ಟೇಟೀವ್ಸ್, 100 ಸೆನೆಟ್ ಸೀಟ್ಸ್ ಹಾಗೂ ವಾಷಿಂಗ್ಟನ್ ಡಿಸಿಯ 3 ಸ್ಥಾನಗಳು ಇದರಲ್ಲಿ ಸೇರಿವೆ ಎಂದು ವರದಿ ವಿವರಿಸಿದೆ.
ಅಮೆರಿಕ ಕೆಳ ಮನೆಯ (Lower House) 435 ಸ್ಥಾನಗಳು ಸೇರಿದಂತೆ ಅಮೆರಿಕ ಸೆನೆಟ್ ನ 34 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಹೌಸ್ ಆಫ್ ರೆಪ್ರೆಸೆನ್ ಟೆಟೀವ್ಸ್ ನ ಎಲ್ಲಾ ಪ್ರತಿನಿಧಿಗಳು ಪುನರಾಯ್ಕೆಯಾಗಬೇಕಾಗಿದೆ.
ಅಮೆರಿಕದ ಇತಿಹಾಸದಲ್ಲಿ ಇತ್ತೀಚೆಗೆ ನಡೆದ ಬಹು ನಿರೀಕ್ಷೆಯ ಈ ಚುನಾವಣೆಯಲ್ಲಿ ಟ್ರಂಪ್ ಆಗಲಿ ಹ್ಯಾರಿಸ್ ಅಧ್ಯಕ್ಷಗಾದಿಗೆ ಏರಲು ಕನಿಷ್ಠ 270 ಎಲೆಕ್ಟ್ರೊರಲ್ ಮತಗಳ ಅಗತ್ಯವಿದೆ. ಡೊನಾಲ್ಡ್ ಟ್ರಂಪ್ 2017ರಿಂದ 2021ರವರೆಗೆ ಅಮೆರಿಕದ 45ನೇ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಮತ್ತೊಮ್ಮೆ ಶ್ವೇತಭವನ ಪ್ರವೇಶಿಸುವ ಸಿದ್ಧತೆಯಲ್ಲಿದ್ದಾರೆ. ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜಯಗಳಿಸುವ ಮೂಲಕ ದೇಶದ ಮೊದಲ ಮಹಿಳಾ ಅಧ್ಯಕ್ಷೆಯಾಗಬೇಕೆಂಬ ಗುರಿ ಹೊಂದಿದ್ದಾರೆ.