Advertisement

Editorial; ಶೈಕ್ಷಣಿಕ ಗೊಂದಲಗಳಿಗೆ ಬೇಕಿದೆ ತುರ್ತು ಪರಿಹಾರ

12:10 AM May 22, 2024 | Team Udayavani |

ದಶಕದ ಹಿಂದೆ ಕರ್ನಾಟಕ ಶೈಕ್ಷಣಿಕವಾಗಿ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, ಉಳಿದ ರಾಜ್ಯಗಳಿಗೆ ಮಾದರಿ ಎಂಬಂತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಶೈಕ್ಷಣಿಕ ವ್ಯವಸ್ಥೆ ಸಂಪೂರ್ಣ ಗೊಂದಲಮಯವಾಗಿದ್ದು, ಪ್ರತೀ ಶೈಕ್ಷಣಿಕ ವರ್ಷದುದ್ದಕ್ಕೂ ನಿತ್ಯ ನಿರಂತರ ಎಂಬಂತೆ ಪ್ರಯೋಗಗಳು ನಡೆಯುತ್ತಲೇ ಬಂದಿವೆ. ಇದರ ಪರಿಣಾಮ ವಿದ್ಯಾರ್ಥಿಗಳು ಗುಣಮಟ್ಟದಿಂದ ಕೂಡಿದ ಕೌಶಲಭರಿತ ಶಿಕ್ಷಣದಿಂದ ವಂಚಿತರಾಗುತ್ತಿದ್ದರೆ, ಈ ಗೋಜಲುಮಯ ವ್ಯವಸ್ಥೆಗೆ ಹೊಂದಿಕೊಳ್ಳಲು ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೆ ಶಿಕ್ಷಕರು, ಮಕ್ಕಳ ಹೆತ್ತವರು ಕೂಡ ಹರಸಾಹಸ ಪಡುವಂತಾಗಿದೆ.

Advertisement

ರಾಜ್ಯದಲ್ಲಿ ಅಧಿಕಾರ ಸೂತ್ರ ಹಿಡಿಯುವ ಪಕ್ಷಗಳು ತಮ್ಮ ಸಿದ್ಧಾಂತಗಳನ್ನು ಶಿಕ್ಷಣ ಕ್ಷೇತ್ರದ ಮೇಲೆ ಹೇರತೊಡಗಿದಾಗಿನಿಂದ ರಾಜ್ಯದ ಶಿಕ್ಷಣ ವ್ಯವಸ್ಥೆ ಸದಾ ಒಂದಲ್ಲ ಒಂದು ಚರ್ಚೆಗೆ ಗ್ರಾಸವಾಗುತ್ತಲೇ ಬಂದಿದೆ. ಪ್ರತಿಯೊಂದು ಸರಕಾರ ಕೂಡ ವಿದ್ಯಾರ್ಥಿಗಳ ಹಿತಕ್ಕಿಂತ ತನ್ನ ಸೈದ್ಧಾಂತಿಕ ನಿಲುವುಗಳಿಗೇ ಜೋತು ಬಿದ್ದ ಪರಿಣಾಮವೋ ಏನೋ ಪೂರ್ವ ಪ್ರಾಥಮಿಕ ತರಗತಿಯಿಂದ ಹಿಡಿದು ಪದವಿ ತರಗತಿಯ ವರೆಗೂ ಶಿಕ್ಷಣ ಎನ್ನುವುದು ಸಂಪೂರ್ಣ ಕಲಸುಮೇಲೋಗರವಾಗಿದೆ. ಬದಲಾದ ಕಾಲ, ತಂತ್ರಜ್ಞಾನ, ಔದ್ಯೋಗಿಕ ಕ್ಷೇತ್ರಕ್ಕನುಗುಣವಾಗಿ ಶಿಕ್ಷಣದಲ್ಲಿ ಮಾರ್ಪಾಡುಗಳಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ತಂತ್ರಜ್ಞಾನ, ಕೌಶಲ, ವೃತ್ತಿ ಪೂರಕ ಮತ್ತು ಗುಣಮಟ್ಟದ ಶಿಕ್ಷಣ ಕೊಡುವ ನೆಪದಲ್ಲಿ ವಿದ್ಯಾರ್ಥಿಗಳನ್ನು ಪ್ರಯೋಗದ ಕೂಸುಗಳನ್ನಾಗಿಸಿರುವುದು ವಿಪರ್ಯಾಸವೇ ಸರಿ. ರಾಜ್ಯದಲ್ಲಿ ಎಲ್‌ಕೆಜಿಗೆ ಮಕ್ಕಳ ದಾಖಲಾತಿಯಿಂದ ಹಿಡಿದು ಎಷ್ಟು ವರ್ಷಗಳ ಪದವಿ ಕೋರ್ಸ್‌ ಇರಬೇಕು ಎಂಬಲ್ಲಿಯವರೆಗೆ ಪ್ರತೀ ಹಂತದಲ್ಲಿ ಗೊಂದಲಗಳೇ ತುಂಬಿವೆ. ಎಲ್‌ಕೆಜಿ ಸೇರ್ಪಡೆಗೊಳಿಸಲು ಮಗುವಿಗೆ ಕಡ್ಡಾಯವಾಗಿ 4 ವರ್ಷ ತುಂಬಿರಬೇಕು, ಶಾಲಾ ಪಠ್ಯಕ್ರಮ, 5, 8, 9ನೇ ತರಗತಿ ವಾರ್ಷಿಕ ಪರೀಕ್ಷೆ, ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ, ಮೂರು ವಾರ್ಷಿಕ ಪರೀಕ್ಷೆ, ಗ್ರೇಸ್‌ ಮಾರ್ಕ್ಸ್, ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮುಂದುವರಿಸುವುದೋ ರಾಜ್ಯ ಶಿಕ್ಷಣ ನೀತಿಯನ್ನು ಆರಂಭಿಸುವುದೋ?, ಸರಕಾರ ಅಥವಾ ಮಂಡಳಿಯ ನಿರ್ಧಾರವನ್ನು ಪ್ರಶ್ನಿಸಿ ಶಾಲಾಡಳಿತ ಮಂಡಳಿಗಳು ನ್ಯಾಯಾಲಯದ ಮೆಟ್ಟಿಲೇರಿರುವುದು… ಹೀಗೆ ರಾಜ್ಯದ ಶೈಕ್ಷಣಿಕ ಸಮಸ್ಯೆಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಇವೆಲ್ಲದರಿಂದಾಗಿ ವಿದ್ಯಾರ್ಥಿಗಳು, ಹೆತ್ತವರು ಮತ್ತು ಶಿಕ್ಷಕರು ಹೈರಾಣಾಗಿದ್ದಾರೆ. ಈ ಮೂರು ವರ್ಗಗಳನ್ನು ನಾಳೆ ಏನು ಎಂಬ ಪ್ರಶ್ನೆ ಕಾಡುತ್ತಲೇ ಇದೆ.

ಪ್ರತಿಯೊಂದಕ್ಕೂ ತಜ್ಞರ ಸಮಿತಿಯನ್ನು ನೇಮಿಸಿ ಅದು ನೀಡುವ ಶಿಫಾರಸುಗಳನ್ನು ತಮಗೆ ಬೇಕಾದಂತೆ ಅನುಷ್ಠಾನಗೊಳಿಸುವ ಸರಕಾರದ ಧೋರಣೆ, ಶಿಕ್ಷಣಕ್ಕೆ ಸಂಬಂಧಿಸಿದವರ ನಡುವೆ ಸಮನ್ವಯದ ಕೊರತೆ, ಮಿತಿಮೀರಿದ ರಾಜಕೀಯ ಹಸ್ತಕ್ಷೇಪ, ತಮ್ಮ ಸೈದ್ಧಾಂತಿಕ ನಿಲುವುಗಳನ್ನು ಮಕ್ಕಳ ಮೇಲೆ ಹೇರುವ ಮನಃಸ್ಥಿತಿ… ಇವೆಲ್ಲ ಕಾರಣಗಳಿಂದಾಗಿಯೇ ಈ ಎಲ್ಲ ಅವಾಂತರ, ಗೊಂದಲಗಳು ಸೃಷ್ಟಿಯಾಗಿವೆ. ಶಿಕ್ಷಣಕ್ಕೆ ಸಂಬಂಧಿಸಿದ ಪ್ರತಿಯೊಂದು ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ವಿದ್ಯಾರ್ಥಿ, ಶಿಕ್ಷಕ ಸಂಘಟನೆಗಳು, ಮಕ್ಕಳ ಪೋಷಕರ ಪ್ರತಿನಿಧಿಗಳು, ಶಿಕ್ಷಣ ತಜ್ಞರು, ಇಲಾಖೆಯ ಉನ್ನತ ಅಧಿಕಾರಿಗಳು, ಶಾಲಾಡಳಿತ ಮಂಡಳಿಗಳ ಪ್ರತಿನಿಧಿಗಳು… ಹೀಗೆ ಸಂಬಂಧಿತರೆಲ್ಲರೂ ಒಂದೆಡೆ ಕುಳಿತು ಸಮಗ್ರ ವಿಚಾರ ವಿಮರ್ಶೆ ನಡೆಸಿ ದೃಢ ತೀರ್ಮಾನ ಕೈಗೊಂಡಲ್ಲಿ ಇಂತಹ ವಿರೋಧಾಭಾಸಗಳು, ರಾದ್ಧಾಂತಗಳು ಸೃಷ್ಟಿಯಾಗಲಾರವು. ಈ ದಿಸೆಯಲ್ಲಿ ರಾಜ್ಯ ಸರಕಾರ ತತ್‌ಕ್ಷಣ ಕಾರ್ಯಪ್ರವೃತ್ತವಾಗಿ ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಅಂಟಿರುವ ಕಳಂಕವನ್ನು ತೊಡೆದು ಹಾಕಬೇಕು. ಮಕ್ಕಳ ಶಿಕ್ಷಣದ ಬುನಾದಿಯೇ ಭದ್ರವಾಗಿರದಿದ್ದರೆ ಅವರ ಭವಿಷ್ಯ ಮಂಕಾಗಲಿದೆ ಎಂಬ ಪ್ರಾಥಮಿಕ ಅರಿವು ನಮ್ಮೆಲ್ಲರಲ್ಲಿರಲಿ.

Advertisement

Udayavani is now on Telegram. Click here to join our channel and stay updated with the latest news.

Next