ಕರ್ನಾಟಕಕ್ಕೆ ವಿಶಿಷ್ಟವಾಗಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಸೀಟ್ ಬ್ಲಾಕಿಂಗ್ ಹಗರಣವನ್ನು ಪೊಲೀಸರು ಬಯಲಿಗೆಳೆದಿದ್ದು, ಇದು ವರೆಗೆ ಹತ್ತು ಮಂದಿಯನ್ನು ಬಂಧಿಸಿದ್ದಾರೆ. ಸಾಮಾನ್ಯ ಪ್ರವೇಶ ಪರೀಕ್ಷೆಯ ಬಳಿಕ ಕೌನ್ಸೆಲಿಂಗ್ ವೇಳೆ ವಿವಿಧ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್‌ಗಳನ್ನು ಪಡೆದುಕೊಂಡ ಹಲವಾರು ಮಂದಿ ಕಾಲೇಜುಗಳಿಗೆ ಹಾಜರಾ ಗುತ್ತಿಲ್ಲವೇಕೆ ಎಂಬುದರ ಜಾಡು ಹಿಡಿದು ಹೊರಟಾಗ ಈ ದಂಧೆ ಪತ್ತೆಯಾಗಿದೆ. ಅರ್ಹ ವಿದ್ಯಾರ್ಥಿಗಳಿಗೆ ಸೀಟುಗಳು ಸಿಗದಂತೆ ಮಾಡುವ ಮತ್ತು ಖಾಸಗಿ ಕಾಲೇಜುಗಳಿಗೆ ಅಕ್ರಮವಾಗಿ ಲಾಭ ಮಾಡಿಕೊಳ್ಳಲು ಮಾರ್ಗ ವಾಗಿರುವ ಈ ದಂಧೆ ಮಟ್ಟಹಾಕಿ, ಅಪರಾಧಿಗಳಿಗೆ ಕಠಿನ ಶಿಕ್ಷೆ ವಿಧಿಸಬೇಕು. ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯ ಉಂಟು ಮಾಡುವ ಇಂತಹ ದಂಧೆಗಳು ಇಲ್ಲಿಗೇ ಕೊನೆಯಾಗಬೇಕು.
ಸಿಇಟಿಯಲ್ಲಿ ಸೀಟ್ ಬ್ಲಾಕಿಂಗ್ ಹಗರಣದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಅಧಿಕಾರಿಗಳು ಮತ್ತು ಸಿಬಂದಿಯೇ ಭಾಗಿಯಾಗಿರುವುದು ಆಘಾತಕಾರಿ. ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ಈ ಹಗರಣ ನಡೆದಿರುವುದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಬಂಧಿತರ ಪೈಕಿ ಕೆಲವರು ಹಲವಾರು ವರ್ಷಗಳಿಂದ ಕೆಇಎಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಎಂಬುದು ತಿಳಿದುಬಂದಿದ್ದು, ಈ ಹಿಂದಿನ ವರ್ಷ ಗಳಲ್ಲಿ ಕೂಡ ಇಂತಹುದೇ ದಂಧೆ ನಡೆದಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಬಂಧಿತರನ್ನು ಕೂಲಂಕಷ ವಿಚಾರಣೆಗೆ ಒಳಪಡಿಸಿ ಎಷ್ಟು ವರ್ಷಗಳಿಂದ ಇದು ನಡೆಯುತ್ತಿದೆ ಎಂಬುದರ ಆಮೂಲಾಗ್ರ ಪರಿಶೀಲನೆಯಾಗಬೇಕಾಗಿದೆ. ಈ ಹಗರಣದಲ್ಲಿ ಭಾಗಿಯಾಗಿರುವ ಖಾಸಗಿ ಕಾಲೇಜು ಗಳನ್ನು ಅಥವಾ ಭಾಗಿಯಾಗಿರುವವರನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡುವಂತಹ ಕಠಿನ ಕ್ರಮವನ್ನೂ ಸರಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ಪರಿಶೀಲಿಸಬಹುದಾಗಿದೆ.
ಕೆಲವು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಮಂದಿ ಸೀಟು ಅಗತ್ಯ ವಿಲ್ಲದ ಅಭ್ಯರ್ಥಿಗಳೊಂದಿಗೆ ಸೇರಿಕೊಂಡು ಕೊನೆಯ ಸುತ್ತಿನಲ್ಲಿ ಸೀಟು ಹಂಚಿಕೆ ಪಡೆಯುತ್ತಾರೆ. ಬಳಿಕ ಕಾಲೇಜಿಗೆ ಸೇರ್ಪಡೆಯಾಗದಂತೆ ನೋಡಿ ಕೊಳ್ಳುತ್ತಾರೆ. ಒಂದೇ ಐಪಿ ವಿಳಾಸ ಬಳಸಿ ಸೀಟ್ ಬ್ಲಾಕಿಂಗ್ ಮಾಡಲಾಗುತ್ತದೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಮುಖ್ಯವಾಗಿ ಅಭ್ಯರ್ಥಿಗಳ ಲಾಗಿನ್ ಪಾಸ್‌ವರ್ಡ್, ಸೀಕ್ರೆಟ್ ಕೀಯನ್ನು ದುರುಳರು ಅನಧಿಕೃತವಾಗಿ ಪಡೆದುಕೊಂಡು ಅವರ ಪರವಾಗಿ ಆಪ್ಶನ್ ಎಂಟ್ರಿ ನಡೆಸುತ್ತಾರೆ. ಈ ಮೂಲಕ ಕಾಲೇಜುಗಳಿಗೆ ಲಾಭ ಮಾಡಿಕೊಡುತ್ತಿದ್ದಾರೆ. ಈ ಒಟ್ಟೂ ದಂಧೆಯಲ್ಲಿ ಖಾಸಗಿ ಕಾಲೇಜುಗಳಿಗೆ ಲಾಭವಾಗುವುದು ಒಂದೆಡೆಯಾದರೆ ಅರ್ಹ ಅಭ್ಯರ್ಥಿಗಳು ಎಂಜಿನಿಯರಿಂಗ್ ಸೀಟ್‌ಗಳಿಂದ ವಂಚಿತರಾಗುತ್ತಿದ್ದಾರೆ.
ಸಿಇಟಿಯಲ್ಲಿ ಸೀಟು ಹಂಚಿಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಯುವಂಥದ್ದು. ಇದಕ್ಕೆ ಲಾಗಿನ್ ಪಾಸ್‌ವರ್ಡ್, ಸೀಕ್ರೆಟ್ ಕೀ ಇತ್ಯಾದಿ ಭದ್ರತಾ ಕ್ರಮಗಳು ಇದ್ದೇ ಇವೆ. ಪರೀಕ್ಷಾ ಪ್ರಾಧಿಕಾರದ ಒಳಗಿ ನವರು ಭಾಗಿ ಯಾಗದೆ ಇದರಲ್ಲಿ ಅಕ್ರಮ ವ್ಯವಹಾರ ನಡೆಸುವುದು ಅಸಾಧ್ಯ. ಹೀಗಾಗಿ ಈ ಅಕ್ರಮ ದಂಧೆಯ ಬಾಹುಗಳು ಎಷ್ಟು ಆಳಕ್ಕೆ ಚಾಚಿವೆ ಎಂಬುದನ್ನು ಪೊಲೀಸರು ಆಮೂಲಾಗ್ರ ತನಿಖೆಗೆ ಒಳಪಡಿಸಬೇಕು. ಶಿಕ್ಷಣವು ಕೂಡ ಒಂದು ವ್ಯವಹಾರವಾಗಿ ಮಾರ್ಪಾಟಾದಾಗ ಇಂತಹ ದಂಧೆಗಳು ಹುಟ್ಟಿಕೊಳ್ಳುತ್ತವೆ. ಅಂತಿಮವಾಗಿ ಇದರಿಂದ ಅನ್ಯಾಯಕ್ಕೆ ಒಳಗಾಗುವವರು ವಿದ್ಯಾರ್ಥಿಗಳು ಎಂಬುದನ್ನು ಮರೆಯಬಾರದು. ಇದು ಆಗಬಾರದು ಎಂದಾದರೆ ಸರಕಾರ, ಶಿಕ್ಷಣ ಇಲಾಖೆ ಮತ್ತು ಪೊಲೀಸರು ಇಂಥವುಗಳ ನಿಗ್ರಹಕ್ಕಾಗಿ ಕಠಿನ ಕ್ರಮಗಳನ್ನು, ನಿಲುವುಗಳನ್ನು ತೆಗೆದುಕೊಳ್ಳಬೇಕು.