Advertisement

Editorial: ಗಡಿನಾಡ ಕನ್ನಡಿಗರ ರಕ್ಷಣೆ ಕರ್ನಾಟಕ ಸರಕಾರದ ಕರ್ತವ್ಯ

01:25 PM Dec 02, 2024 | Team Udayavani |

ನಮ್ಮ ನೆರೆಯ ಕೇರಳ ಸರಕಾರ ಗಡಿನಾಡಾಗಿರುವ ಕಾಸರಗೋಡಿನ ಕನ್ನಡಿಗರ ಬಗೆಗೆ ತನ್ನ ಮಲತಾಯಿ ಧೋರಣೆಯನ್ನು ಅನುಸರಿಸುತ್ತ ಬಂದಿರುವುದು ಇಂದು-ನಿನ್ನೆಯ ಬೆಳವಣಿಗೆಯೇನಲ್ಲ. ಒಂದೊಮ್ಮೆ ಕರ್ನಾಟಕದ ಅವಿಭಾಜ್ಯ ಭಾಗವಾಗಿದ್ದ ಕಾಸರಗೋಡು ಪ್ರದೇಶ, ನಮ್ಮ ನೆರೆಯ ಕೇರಳ ರಾಜ್ಯದ ಪಾಲಾದಾಗಿನಿಂದ ಅಲ್ಲಿನ ಸರಕಾರ ಕನ್ನಡ ಮತ್ತು ಕನ್ನಡಿಗರನ್ನು ನಿರ್ಲಕ್ಷಿಸುತ್ತಲೇ ಬಂದಿದೆ. ಅಷ್ಟು ಮಾತ್ರವಲ್ಲದೆ ಕಾಸರಗೋಡು ಪ್ರದೇಶವನ್ನು ಸಂಪೂರ್ಣ ಮಲಯಾಳಮಯವಾಗಿಸಲು ಹತ್ತು ಹಲವು ಕಾರ್ಯತಂತ್ರಗಳನ್ನು ಹೆಣೆದು, ತನ್ನ ಷಡ್ಯಂತ್ರದಲ್ಲಿ ಭಾಗಶಃ ಯಶಸ್ವಿಯೂ ಆಗಿದೆ. ಕಾಸರಗೋಡು ಭಾಗದ ಕನ್ನಡಿಗರು ತಮ್ಮ ಮಾತೃಭಾಷೆಯ ಶಿಕ್ಷಣವನ್ನು ಪಡೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿಯಲ್ಲಿಯೂ ಆ ಭಾಗದಲ್ಲಿ ಅಳಿದುಳಿದಿರುವ ಕನ್ನಡ ಶಾಲೆಗಳಲ್ಲಿ ಕಲಿತು ತಮ್ಮ ಭಾಷಾ ಪ್ರೇಮವನ್ನು ಮೆರೆಯುತ್ತಲೇ ಬಂದಿದ್ದಾರೆ. ಆದರೆ ಕೇರಳ ಸರಕಾರ ಮತ್ತು ಅಧಿಕಾರಿ ವರ್ಗ ಕನ್ನಡಿಗರ ಬಗೆಗೆ ತಾತ್ಸಾರ ಧೋರಣೆಯನ್ನು ಇಂದಿಗೂ ಅನುಸರಿಸುತ್ತ ಬಂದಿದ್ದು, ಮಲಯಾಳವನ್ನು ಬಲವಂತವಾಗಿ ಹೇರುವ ಕಾಯಕವನ್ನು ಮುಂದುವರಿಸಿರುವುದು ತೀರಾ ದುರದೃಷ್ಟಕರ.

Advertisement

ಕನ್ನಡ ಶಾಲೆಗಳ ಬಗೆಗಿನ ನಿರ್ಲಕ್ಷ್ಯ, ಮಲತಾಯಿ ಧೋರಣೆ, ಕನ್ನಡ ಶಾಲೆಗಳಿಗೆ ಮಲಯಾಳಿ ಶಿಕ್ಷಕರ ನೇಮಕ, ಅನುದಾನ ವಿತರಣೆಯಲ್ಲಿ ತಾರತಮ್ಯ… ಹೀಗೆ ಸತತವಾಗಿ ಒಂದರ ಮೇಲೊಂದರಂತೆ ಹೊಡೆತವನ್ನು ನೀಡುತ್ತಲೇ ಬಂದಿರುವ ಕೇರಳ ಸರಕಾರದ ಕನ್ನಡ ವಿರೋಧಿ ಧೋರಣೆ ಇಂದು ಅಂಗನವಾಡಿ ಹಂತಕ್ಕೆ ಬಂದು ತಲುಪಿದೆ ಎಂದರೆ ಅದು ಕಾಸರಗೋಡು ಪ್ರದೇಶದಿಂದ ಕನ್ನಡವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪಣತೊಟ್ಟಂತೆ ಭಾಸವಾಗುತ್ತಿದೆ. ಅಂಗನವಾಡಿಗಳಿಗೆ ಮಲಯಾಳಿ ಶಿಕ್ಷಕಿಯರನ್ನು ನೇಮಿಸುವ ಮೂಲಕ ಕನ್ನಡಿಗರ ಮಕ್ಕಳಿಗೆ ಬಾಲ್ಯದಿಂದಲೇ ಮಲಯಾಳ ಕಲಿಸಲು ಷಡ್ಯಂತ್ರವನ್ನು ರೂಪಿಸಿದೆ. ಶಾಲಾ ಪಠ್ಯಗಳಲ್ಲಂತೂ ಕನ್ನಡ ಪಾಠಗಳು ನಿಧಾನವಾಗಿ ಮಾಯವಾಗುತ್ತಿದ್ದರೆ ಈಗ ಪಠ್ಯೇತರ ಚಟುವಟಿಕೆಗಳಲ್ಲೂ ಮಲಯಾಳವನ್ನು ಹೇರುವ ಕಾರ್ಯದಲ್ಲಿ ಕೇರಳ ಸರಕಾರ ನಿರತವಾಗಿದೆ.

ಇತ್ತೀಚಿನ ವರ್ಷಗಳಲ್ಲಂತೂ ಕಾಸರಗೋಡು ಜಿಲ್ಲೆಯ ಆಡಳಿತದ ಪ್ರತಿಯೊಂದು ಹಂತದಲ್ಲಿಯೂ ಕನ್ನಡ ಭಾಷೆ ಕಣ್ಮರೆಯಾಗುತ್ತ ಬಂದಿದ್ದು, ಸ್ಥಳೀಯ ಕನ್ನಡಿಗರು ತಮ್ಮ ಕೆಲಸಕಾರ್ಯಗಳಿಗಾಗಿ ಮಲಯಾಳವನ್ನು ಅವಲಂಬಿಸಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲಾಗಿದೆ. ಈ ಮೂಲಕ ಗಡಿನಾಡಿನಲ್ಲಿ ಕನ್ನಡ ಭಾಷೆ ಯನ್ನು ಹತ್ತಿಕ್ಕುವ ಪ್ರಯತ್ನವನ್ನು ಅಲ್ಲಿನ ಸರಕಾರ ನಿರಂತರವಾಗಿ ನಡೆಸುತ್ತ ಬಂದಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಗಡಿಭಾಗದಲ್ಲಿರುವ ನೆರೆಯ ಭಾಷಿಕರ ಬಗೆಗೆ ಯಾವುದೇ ತಾರತಮ್ಯ, ದ್ವೇಷವನ್ನು ಯಾವ ಸರಕಾರವೂ ಹೊಂದುವಂತಿಲ್ಲ. ಆದರೆ ಕೇರಳ ಸರಕಾರ ಈ ನಿಯಮಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿ ಕಾರ್ಯಾಚರಿಸುತ್ತಿದೆ. ಕೇರಳ ಸರಕಾರದ ಈ ನಡೆ ಖಂಡನಾರ್ಹ ಮಾತ್ರವಲ್ಲದೆ ದೇಶದಲ್ಲಿ ಜಾರಿಯಲ್ಲಿರುವ ಒಕ್ಕೂಟ ವ್ಯವಸ್ಥೆಯ ಬುನಾದಿಯನ್ನೇ ಅಲುಗಾಡಿಸುವಂತಹ ಕೃತ್ಯ.

ಕಾಸರಗೋಡು ಭಾಗದಲ್ಲಿ ಸಕ್ರಿಯವಾಗಿರುವ ಒಂದಿಷ್ಟು ಕನ್ನಡ ಸಂಘಟನೆಗಳು ಕೇರಳ ಸರಕಾರದ ಈ ಎಲ್ಲ ಕನ್ನಡ ವಿರೋಧಿ ಧೋರಣೆಯನ್ನು ಪ್ರತಿಭಟಿಸುತ್ತಲೇ ಬಂದಿವೆ. ಆದರೆ ಕರ್ನಾಟಕ ಸರಕಾರ ಮತ್ತು ಕರ್ನಾಟಕದ ಕನ್ನಡ ಪರ ಸಂಘಸಂಸ್ಥೆಗಳಿಂದ ಪ್ರಬಲ ಬೆಂಬಲ ವ್ಯಕ್ತವಾಗದಿರುವುದರಿಂದ ಕೇರಳ ಸರಕಾರ ತನ್ನ ದಾಷ್ಟéìವನ್ನು ಮುಂದುವರಿಸಿದೆ. ಇನ್ನಾದರೂ ಕರ್ನಾಟಕ ಸರಕಾರ ಮತ್ತು ಕರ್ನಾಟಕದ ಕನ್ನಡಪರ ಸಂಘಟನೆಗಳು ಗಡಿನಾಡ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆ, ಅವರ ಬೇಡಿಕೆಗಳಿಗೆ ಒಕ್ಕೊರೊಲಿನಿಂದ ದನಿಗೂಡಿಸಲೇಬೇಕು. ಗಡಿನಾಡ ಕನ್ನಡಿಗರ ರಕ್ಷಣೆ ಕರ್ನಾಟಕ ಸರಕಾರದ ಕರ್ತವ್ಯ ಕೂಡ. ಹೀಗಾಗಿ ಕರ್ನಾಟಕ ಸರಕಾರ ಗಡಿನಾಡು ಕಾಸರಗೋಡು ಭಾಗದಲ್ಲಿನ ಕನ್ನಡವಿರೋಧಿ ಬೆಳವಣಿಗೆಗಳ ಬಗೆಗೆ ಕೇರಳ ಸರಕಾರದ ಗಮನ ಸೆಳೆದು ಕಿವಿಮಾತು ಹೇಳಿ ಕನ್ನಡಿಗರ ಅಳಲಿಗೆ ಸ್ಪಂದಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next