Advertisement

ಅಲ್ಲೊಂದು-ಇಲ್ಲೊಂದು: ಜಿಲ್ಲಾ ಕಾಂಗ್ರೆಸ್‌ ನಿಲುವೇನು ?

06:01 PM Nov 23, 2021 | Team Udayavani |

ಬಾಗಲಕೋಟೆ: ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ದ್ವಿ ಸದಸ್ಯ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಏಕೈಕ ಅಭ್ಯರ್ಥಿ ಘೋಷಣೆ ಮಾಡಿದ್ದು, ಕಾಂಗ್ರೆಸ್‌ ನಿಂದಲೂ ಅದೇ ತಂತ್ರ ಪ್ರಯೋಗಿಸಲಾಗಿದೆ.

Advertisement

ಆದರೆ, ಕಳೆದ ನಾಲ್ಕು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿರುವ, ಕಾಂಗ್ರೆಸ್‌ನ ಹಿರಿಯ ಮುಖಂಡ, ಪರಿಷತ್‌ನ ವಿರೋಧ ಪಕ್ಷದ ನಾಯಕರೂ ಆಗಿರುವ ಎಸ್‌.ಆರ್‌. ಪಾಟೀಲರ ಹೆಸರು ಅಭ್ಯರ್ಥಿ ಆಯ್ಕೆಯ ಪಟ್ಟಿಯಲ್ಲಿ ಇಲ್ಲದೇ ಇರುವುದು ಪಕ್ಷದಲ್ಲಿ ಅಷ್ಟೇ ಅಲ್ಲ, ಜಿಲ್ಲೆಯಲ್ಲೂ ಅಚ್ಚರಿ ಮೂಡಿಸಿದೆ.

ಎಸ್‌.ಆರ್‌. ಪಾಟೀಲರು, ಸಧ್ಯ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕರಾಗಿದ್ದು, ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಒಂದು ಸ್ಥಾನಕ್ಕೆ ನಾಲ್ಕು ಬಾರಿ ನಿರಂತರವಾಗಿ ಆಯ್ಕೆಯಾಗುತ್ತ ಬಂದಿದ್ದಾರೆ. ನಾಲ್ಕು ಬಾರಿ ಚುನಾವಣೆ ನಡೆದಾಗಲೂ ಅವರು ಪ್ರಥಮ ಪ್ರಾಶಸ್ತ್ಯದ ಮತಗಳಿಂದಲೇ ಆಯ್ಕೆಯಾಗುತ್ತ ಬಂದಿದ್ದು, ಈ ಕ್ಷೇತ್ರದಲ್ಲಿ ಪ್ರಬಲ ಹಿಡಿತ ಕೂಡ ಹೊಂದಿದ್ದರು.

ಅಲ್ಲದೇ ಪಕ್ಷದ ಹೈಕಮಾಂಡ್‌ ಕೂಡ, ದ್ವಿ ಸದಸ್ಯ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಳೆದ ಎರಡು ಅವಧಿಗೆ ಒಂದು ಸ್ಥಾನಕ್ಕೆ ಮಾತ್ರ ಅಭ್ಯರ್ಥಿ ಹಾಕುತ್ತ ಬಂದಿತ್ತು. ಇದು ಅವರ ಗೆಲುವಿಗೂ ಹೆಚ್ಚು ಅನುಕೂಲವಾಗಿತ್ತು ಎಂಬ ಮಾತು ಕೇಳಿ ಬಂದಿತ್ತು.

ಅಲ್ಲೊಂದು-ಇಲ್ಲೊಂದು: ಬಿಜೆಪಿಯಿಂದಲೂ ಒಂದು ಸ್ಥಾನಕ್ಕೆ ಮಾತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಪಕ್ಷದ ಹಿರಿಯ ಮುಖಂಡ, ಮಾಜಿ ಶಾಸಕ ಪಿ.ಎಚ್‌. ಪೂಜಾರ, ಒಮ್ಮತದ ಅಭ್ಯರ್ಥಿಯಾಗಿದ್ದಾರೆ. ಜಿಲ್ಲಾ ಪ್ರಾತಿನಿಧ್ಯ ಪರಿಗಣಿಸುವುದಾದರೆ, ಬಿಜೆಪಿಯಿಂದ ಬಾಗಲಕೋಟೆ ಜಿಲ್ಲೆಗೆ ಅವಕಾಶ ದೊರೆತಿದೆ. ಬಿಜೆಪಿ ಅಭ್ಯರ್ಥಿ ಘೋಷಣೆಯನ್ನೇ ಕಾದು ನೋಡುವ ತಂತ್ರ ಅನುಸರಿಸಿದ ಕಾಂಗ್ರೆಸ್‌, ಇದೀಗ ವಿಜಯಪುರ ಜಿಲ್ಲೆಗೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಈ ಕ್ಷೇತ್ರದ ಹಾಲಿ ಸದಸ್ಯ ಸುನೀಲಗೌಡ ಪಾಟೀಲ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ಎರಡೂ ಪ್ರಮುಖ ರಾಜಕೀಯ ಪಕ್ಷಗಳಿಂದ ತಲಾ ಓರ್ವ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು, ಅಲ್ಲೊಂದು (ವಿಜಯಪುರ ಜಿಲ್ಲೆ), ಇಲ್ಲೊಂದು (ಬಾಗಲಕೋಟೆ ಜಿಲ್ಲೆ) ಘೋಷಣೆ ಮಾಡಲಾಗಿದೆ. ಹೀಗಾಗಿ ಚುನಾವಣೆ ನಡೆಯದೇ ಅವಿರೋಧ ಆಯ್ಕೆ ನಡೆಸಿದರೆ, ಇದೊಂದು ರಾಜ್ಯದಲ್ಲಿ ದಾಖಲೆಯೂ ಆಗಲಿದೆ ಎಂಬುದು ಹಲವರ ಮಾತು. ಆದರೆ, ರಾಜಕೀಯ ತಂತ್ರಗಾರಿಕೆ, ಹೊಂದಾಣಿಕೆ ರಾಜಕಾರಣದಿಂದ ಅವಿರೋಧ ಕಷ್ಟಸಾಧ್ಯ ಎನ್ನಲಾಗಿದೆ.

Advertisement

ಕಾಂಗ್ರೆಸ್‌ ನಿಲುವೇನು?: ಜಿಲ್ಲೆಯ ಕಾಂಗ್ರೆಸ್‌ನ ಹಿರಿಯ ಮುಖಂಡ, ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿ ಎನಿಸಿಕೊಂಡ ಎಸ್‌.ಆರ್‌. ಪಾಟೀಲರಿಗೆ ಟಿಕೆಟ್‌ ಘೋಷಣೆ ಆಗದೇ ಇರುವುದು ಜಿಲ್ಲಾ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. 24 ವರ್ಷಗಳ ಕಾಲ ಈ ಕ್ಷೇತ್ರವನ್ನು ನಿರಂತರವಾಗಿ ಪ್ರತಿನಿಧಿಸುತ್ತಿದ್ದ ಹಿರಿಯ ನಾಯಕರಿಗೆ ಟಿಕೆಟ್‌ ತಪ್ಪಿಸಿದ್ದು ಏಕೆ ? ಅವರಿಗೆ ಟಿಕೆಟ್‌ ತಪ್ಪಿಸಿ, ಕೇವಲ ಎಸ್‌. ಆರ್‌. ಪಾಟೀಲರ ರಾಜಕೀಯ ನಿರ್ನಾಮ ಮಾಡಲು ಮುಂದಾಗಿಲ್ಲ. ಬದಲಾಗಿ, ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನೇ ನಿರ್ನಾಮ ಮಾಡುವ ಸಂಕೇತ ಇದಾಗಿದೆ ಎಂದು ಹಲವು ಪ್ರಮುಖರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೀಳಗಿ ತಾಲೂಕಿನ ಬಾಡಗಂಡಿಯ ಬಾಪೂಜಿ ಶಿಕ್ಷಣ ಸಂಸ್ಥೆಯ ಆಡಳಿತ ಕಚೇರಿಯಲ್ಲಿ ಸೇರಿದ್ದ ಎಸ್‌.ಆರ್‌. ಪಾಟೀಲ ಬೆಂಬಲಿಗರು, ಬೀಳಗಿ ತಾಲೂಕಿನ ಅಸಂಖ್ಯಾತ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡುವ ಇಂಗಿತ ಕೂಡ ವ್ಯಕ್ತಪಡಿಸಿದ್ದಾರೆ. ಆಕ್ರೋಶಗೊಂಡ ಕಾಂಗ್ರೆಸ್‌ ಕಾರ್ಯಕರ್ತರನ್ನು ಮಾಜಿ ಸಚಿವ ಎಚ್‌.ವೈ. ಮೇಟಿ, ಕೆಪಿಸಿಸಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ ಮುಂತಾದವರ ಭೇಟಿ ನೀಡಿ ಸಮಾಧಾನಪಡಿಸುವ ಪ್ರಯತ್ನ ಮಾಡಿದರಾದರೂ, ಅದಕ್ಕೆ ಕಾರ್ಯಕರ್ತರು ಒಪ್ಪಲಿಲ್ಲ,

ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೆ ಎಸ್‌.ಆರ್‌. ಪಾಟೀಲರೇ ಸಮರ್ಥ ಅಭ್ಯರ್ಥಿ. ಜಿಲ್ಲೆಯ ಹಿರಿಯ ನಾಯಕರಾಗಿದ್ದಾರೆ. ಅವರು ಪಕ್ಷದಿಂದ ಒಂದೇ ಸ್ಥಾನಕ್ಕೆ ಅಭ್ಯರ್ಥಿ ಕಣಕ್ಕಿಳಿಸಬೇಕು. ಆಗ ಮಾತ್ರ ಸ್ಪರ್ಧೆ ಮಾಡುವೆ ಎಂದು ಹೇಳಿದ್ದರು. ಆದರೆ, ಪಕ್ಷದ ಹೈಕಮಾಂಡ್‌ ಎರಡೂ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಹಾಕುತ್ತೇವೆ. ಇನ್ನೊಂದು ಸ್ಥಾನಕ್ಕೆ ನೀವು ಸ್ಪರ್ಧೆ ಮಾಡಿ ಎಂದು ಹೇಳಿದ್ದರು. ಒಂದೇ ಸ್ಥಾನಕ್ಕೆ ಅಭ್ಯರ್ಥಿ ಹಾಕಬೇಕು ಎಂಬುದು ಪಾಟೀಲರ ನಿಲುವಾಗಿತ್ತು. ಈಗಲೂ ಕಾಲ
ಮಿಂಚಿಲ್ಲ. ಸ್ಪರ್ಧೆ ಮಾಡಲು ಮನವೊಲಿಸುವ ಪ್ರಯತ್ನವನ್ನು ಪಕ್ಷದ ಹಿರಿಯರ ನೇತೃತ್ವದಲ್ಲಿ ನಡೆಯುತ್ತಿದೆ.
ಎಸ್‌.ಜಿ. ನಂಜಯ್ಯನಮಠ, ಜಿಲ್ಲಾ ಅಧ್ಯಕ್ಷ

ರಾಜ್ಯದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ, ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಪ್ರತಿಯೊಬ್ಬ ಮುಖಂಡರನ್ನು ಮುನ್ನೆಡೆಸಿಕೊಂಡು ಹೋಗುವ ಎಸ್‌.ಆರ್‌. ಪಾಟೀಲ ಅವರಿಗೆ ಟಿಕೆಟ್‌ ನೀಡದೇ ಇರುವುದು ನಮಗೆಲ್ಲ ದೊಡ್ಡ ಶಾಕ್‌ ನೀಡಿದೆ. ಹಿರಿಯ, ಮುತ್ಸದ್ಧಿ ನಾಯಕನಿಗೆ ಏಕೆ ಟಿಕೆಟ್‌ ತಪ್ಪಿತು ಎಂದು ನಮಗೆಲ್ಲ ದಿಗ್ಭ್ರಮೆಯಾಗಿದೆ. ಟಿಕೆಟ್‌ ನೀಡುವುದಾದರೆ ಇಬ್ಬರಿಗೂ ನೀಡಬೇಕಿತ್ತು. ನಮಗೆ ಪಕ್ಷದ ಹೈಕಮಾಂಡ್‌ ಬಗ್ಗೆ ಯಾವುದೇ ಬೇಸರ-ಅಸಮಾಧಾನವಿಲ್ಲ. ಆದರೆ, ಹಿರಿಯ ನಾಯಕನಿಗೆ ಟಿಕೆಟ್‌ ತಪ್ಪಿದ್ದೇಕೆ ಎಂಬುದೇ ಕಾರ್ಯಕರ್ತರ ಪ್ರಶ್ನೆ.
ಬಸವಪ್ರಭು ಸರನಾಡಗೌಡ
ಕೆಪಿಸಿಸಿ ಕಾರ್ಯದರ್ಶಿ

*ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next