ನಿರ್ದೇಶಕ ಆರ್.ಚಂದ್ರು “ಐ ಲವ್ ಯು’ ಸಿನಿಮಾದ ಯಶಸ್ಸಿನ ಬಳಿಕ “ಕಬ್ಜ’ ಚಿತ್ರ ಮಾಡಲು ಹೊರಟಿರೋದು ನಿಮಗೆ ಗೊತ್ತೇ ಇದೆ. ಈ ಹಿಂದೆ ಸೆಂಟಿಮೆಂಟ್, ಲವ್ ಸ್ಟೋರಿ ಚಿತ್ರಗಳ ಮೂಲಕ ಗಮನ ಸೆಳೆದಿರುವ ಚಂದ್ರು, ಈ ಬಾರಿ ಔಟ್ ಅಂಡ್ ಔಟ್ ಆ್ಯಕ್ಷನ್ ಸಿನಿಮಾ ಮಾಡಲು ಹೊರಟಿದ್ದಾರೆ. ಚಂದ್ರು ಈಗಾಗಲೇ ಚಿತ್ರದ ಫೋಟೋಶೂಟ್ ಮಾಡಿಸಿದ್ದು, ಉಪೇಂದ್ರ ಅವರು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಯಾರಧ್ದೋ ಜಾಗ ಅಥವಾ ವಸ್ತುವನ್ನು ಅತಿಕ್ರಮಣ ಮಾಡಿಕೊಳ್ಳುವುದಕ್ಕೆ ಕಬ್ಜ ಎಂಬ ಪದವೂ ಬಳಕೆಯಲ್ಲಿದೆ. ಚಂದ್ರು ಈಗ “ಕಬ್ಜ’ ಇಟ್ಟುಕೊಂಡು ರೌಡಿಸಂ ಹಿನ್ನೆಲೆಯಲ್ಲಿ ಕಥೆ ಹೇಳಲು ಹೊರಟಿದ್ದಾರೆ. ಚಿತ್ರದ ಮುಹೂರ್ತ ನಾಳೆ (ನ.18) ಅದ್ಧೂರಿಯಾಗಿ ನಡೆಯಲಿದೆ. ನಟ ಶಿವರಾಜಕುಮಾರ್, ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಈ ಚಿತ್ರ ಏಳು ಭಾಷೆಗಳಲ್ಲಿ ತಯಾರಾಗುತ್ತಿದ್ದು, ಏಳು ಭಾಷೆಗಳ ಪ್ರೊಡಕ್ಷನ್ ಹೌಸ್‌ಗಳು ಮುಹೂರ್ತಕ್ಕೆ ಸಾಕ್ಷಿಯಾಗಲಿದೆ.
ಚಿತ್ರದಲ್ಲಿ ಉಪೇಂದ್ರ 80ರ ದಶಕದ ಡಾನ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಇಡೀ ಸಿನಿಮಾ ರೆಟ್ರೋ ಶೈಲಿಯಲ್ಲೇ ಮೂಡಿಬರಲಿದೆ. ಬಹುತೇಕ ಸಿನಿಮಾ ಸೆಟ್‌ನಲ್ಲೇ ನಡೆಯುವ ಸಾಧ್ಯತೆ ಇದ್ದು, ಅದ್ಧೂರಿ ಬಜೆಟ್‌ನ ಸಿನಿಮಾ ಎಂದು ಈಗಾಗಲೇ ಗಾಂಧಿನಗರದಲ್ಲಿ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ “ಐ ಲವ್ ಯು’ ಚಿತ್ರವನ್ನು ಕನ್ನಡ ಹಾಗೂ ತೆಲುಗಿನಲ್ಲಷ್ಟೇ ಬಿಡುಗಡೆ ಮಾಡಿದ್ದ ಚಂದ್ರು, ಈ ಬಾರಿ ಬರೋಬ್ಬರಿ ಏಳು ಭಾಷೆಗಳಲ್ಲಿ ತಮ್ಮ ಹೊಸ ಸಿನಿಮಾವನ್ನು ಬಿಡುಗಡೆ ಮಾಡಲಿದ್ದಾರೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ, ಮರಾಠಿ ಭಾಷೆಗಳಲ್ಲಿ ಈ ಚಿತ್ರವನ್ನು ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಈ ಮೂಲಕ ಚಂದ್ರು ಪ್ಯಾನ್ ಇಂಡಿಯಾದತ್ತ ಮುಖ ಮಾಡಿದ್ದಾರೆ. ಈ ವರ್ಷದ ಹಿಟ್ ಸಿನಿಮಾಗಳ ಸಾಲಿನಲ್ಲಿ ಉಪೇಂದ್ರ ನಾಯಕರಾಗಿರುವ “ಐ ಲವ್ ಯು’ ಚಿತ್ರ ಕೂಡಾ ಸೇರುತ್ತದೆ. ಆರ್.ಚಂದ್ರು, ನಿರ್ಮಿಸಿ, ನಿರ್ದೇಶಿಸಿದ ಈ ಚಿತ್ರ ಉಪೇಂದ್ರ ಅಭಿಮಾನಿಗಳಿಗೆ ಇಷ್ಟವಾಗುವ ಮೂಲಕ ಹಿಟ್‌ಲಿಸ್ಟ್ ಸೇರಿತ್ತು. ಈಗ “ಕಬ್ಜ’ ಮೇಲೆ ನಿರೀಕ್ಷೆ ಇದ್ದು, ಈ ಚಿತ್ರದ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡಾ ಚಂದ್ರು ಅವರದ್ದೇ.