ಕಲಬುರಗಿ: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಸಿಬಿಐಗೆ ವಹಿಸುವಂತೆ, ಸಚಿವ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮುಖಂಡರು ಸಚಿವರ ಮನೆಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ನೂರಕ್ಕೂ ಹೆಚ್ಚು ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.
ನಗರದ ಜಗತ್ ವೃತ್ತದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿ, ಅಲ್ಲಿಂದ ಪಾದಯಾತ್ರೆ ಮೂಲಕ ಸಚಿವರ ಮನೆಗೆ ಮುತ್ತಿಗೆ ಹಾಕಲು ಬರುತ್ತಿರುವಾಗ ಜಿಲ್ಲಾಧಿಕಾರಿ ಕಚೇರಿ ಎದುರುಗಡೆಯೇ ಮುಖಂಡರನ್ನು ತಡೆದು ವಶಕ್ಕೆ ಪಡೆದು ಬಸ್ ನ ಮೂಲಕ ಪೊಲೀಸ್ ಮೈದಾನಕ್ಕೆ ಕರೆದುಕೊಂಡು ಹೋಗಲಾಯಿತು.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರುಗಳಾದ ಸಿ.ಟಿ.ರವಿ, ಎನ್ ರವಿಕುಮಾರ, ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ್, ಬಿ.ಜಿ.ಪಾಟೀಲ್, ಶಶೀಲ್ ನಮೋಶಿ, ಸುನೀಲ್ ವಲ್ಲಾಪುರೆ, ಶರಣು ಸಲಗರ, ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಸಂಸದ ಡಾ.ಉಮೇಶ ಜಾಧವ್, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್, ರಾಜಕುಮಾರ ಪಾಟೀಲ್ ತೇಲ್ಕೂರ, ಮುಖಂಡರಾದ ನಿತೀನ ವಿ. ಗುತ್ತೇದಾರ, ಶಿವರಾಜ ಪಾಟೀಲ್ ರದ್ದೇವಾಡಗಿ, ಚಂದು ಪಾಟೀಲ್ ಸೇರಿದಂತೆ ಮುಂತಾದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಪ್ರತಿಭಟನೆ ಹಾಗೂ ಸಚಿವರ ಮನೆ ಮುತ್ತಿಗೆ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ನಾಲ್ವರು ಐಪಿಎಸ್, 13 ಡಿವೈಎಸ್ಪಿ, 23 ಇನ್ಸ್ಪೆಕ್ಟರ್ ಸೇರಿ ಕೆಎಸ್ ಆರ್ಪಿ, ಡಿಎಆರ್ ತುಕಡಿ ಸೇರಿ 12000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅತ್ತ ಸಚಿವರ ಮನೆ ಮುಂದೆ ಟೀ, ಎಳೆನೀರು ವ್ಯವಸ್ಥೆ ಮಾಡಲಾಗಿತ್ತು.