ಲಕ್ನೋ: ಉತ್ತರಪ್ರದೇಶದಂತಹ ರಾಜ್ಯಕ್ಕೆ ಯೋಗಿ ಆದಿತ್ಯನಾಥ್ ಅವರಂತಹ ದೃಢ ನಾಯಕರು ಬೇಕೆ ವಿನಃ, ನಕಲಿ ಸಮಾಜವಾದಿಗಳಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ (ಫೆ.04) ಪಶ್ಚಿಮ ಉತ್ತರಪ್ರದೇಶದಲ್ಲಿ ಜನ್ ಚೌಪಾಲ್ ಅನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.
ಇದನ್ನೂ ಓದಿ:ಗಣರಾಜ್ಯೋತ್ಸವ ಪರೇಡ್: ರಾಜ್ಯದ ಕರಕುಶಲ ವಸ್ತುಗಳ ಆಧಾರಿತ ಸ್ತಬ್ಧಚಿತ್ರಕ್ಕೆ ಎರಡನೇ ಸ್ಥಾನ
ಕೇಂದ್ರ ಮತ್ತು ರಾಜ್ಯಗಳಲ್ಲಿ ಇರುವ ಬಿಜೆಪಿ ಸರ್ಕಾರ ಏನು ಭರವಸೆ ನೀಡಿದೆಯೋ ಅದನ್ನು ಈಡೇರಿಸುತ್ತಿದೆ. ದೆಹಲಿ-ಮೀರತ್ ಎಕ್ಸ್ ಪ್ರೆಸ್ ಹೆದ್ದಾರಿಗೆ ಅಡಿಗಲ್ಲು ಹಾಕುವ ಭಾಗ್ಯವನ್ನು ಜನರು ನನಗೆ ಒದಗಿಸಿಕೊಟ್ಟಿದ್ದಾರೆ. ಬಿಜೆಪಿ ಸರ್ಕಾರ ಹೇಳಿದ್ದನ್ನು ಮಾಡುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಮತದಾರರು ಮತ್ತು ಬಿಜೆಪಿ ಬೆಂಬಲಿಗರನ್ನು ಉದ್ದೇಶಿಸಿ ನಡೆಸಿದ ಡಿಜಿಟಲ್ ಸಂವಹನದಲ್ಲಿ ಮಾತನಾಡಿದ ಅವರು, ಈ ವರ್ಷದ ಆರಂಭದಲ್ಲಿ ನಾನು ಮೊದಲು ಭೇಟಿ ಕೊಟ್ಟಿದ್ದು ಮೀರತ್ ಗೆ. ಆ ದಿನ ಹವಾಮಾನ ವೈಪರೀತ್ಯ ಇತ್ತು. ನಾನು ಅಂದು ರಸ್ತೆ ಮೂಲಕ ತಲುಪಿದ್ದೆ. ದೆಹಲಿ-ಮೀರತ್ ಎಕ್ಸ್ ಪ್ರೆಸ್ ಹೆದ್ದಾರಿಯಿಂದಾಗಿ ನಾನು ಒಂದು ಗಂಟೆಯೊಳಗೆ ಸ್ಥಳವನ್ನು ತಲುಪಿದ್ದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ನಂತರ ಉತ್ತರಪ್ರದೇಶ ಹಲವಾರು ಚುನಾವಣೆಗಳನ್ನು ಎದುರಿಸಿದೆ. ಆಗ ಸರ್ಕಾರಗಳು ಬಂದು ಅಧಿಕಾರ ನಡೆಸಿ ಹೋಗುತ್ತಿದ್ದವು. ಆದರೆ ಈ ಚುನಾವಣೆಗಳು ವಿಶಿಷ್ಟವಾಗಿದೆ. ಇವು ಉತ್ತರಪ್ರದೇಶದ ಶಾಂತಿಗಾಗಿ, ಅಭಿವೃದ್ಧಿಯ ಮುಂದುವರಿಕೆಗಾಗಿ, ಉತ್ತಮ ಆಡಳಿತಕ್ಕಾಗಿ ಮತ್ತು ರಾಜ್ಯದ ಜನರ ತ್ವರಿತ ಅಭಿವೃದ್ಧಿಗಾಗಿ ಎಂದು ಪ್ರಧಾನಿ ಮೋದಿ ಹೇಳಿದರು.