ನವದೆಹಲಿ: ಶ್ರೀ ಲಕ್ಷ್ಮೀನಾರಾಯಣ ದೇವ್ ದ್ವಿಶತಾಬ್ದಿ ಮಹೋತ್ಸವದ 200ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಕೇಂದ್ರ ಸರ್ಕಾರವು ವಡ್ತಾಲ್ ದೇವಾಲಯದ ಚಿತ್ರವನ್ನೊಳಗೊಂಡ ಶುದ್ಧ ಬೆಳ್ಳಿಯ 200 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಿದೆ.
ಸ್ವಾಮಿನಾರಾಯಣ ಸಂಪ್ರದಾಯ್ ಆಧ್ಯಾತ್ಮಿಕ ಕೇಂದ್ರ ಎಂದು ಕರೆಯಲ್ಪಡುವ ಪೂಜ್ಯ ವಡ್ತಾಲ್ ಧಾಮ್ ನಲ್ಲಿ ನಾಣ್ಯ ಬಿಡುಗಡೆ ಸಮಾರಂಭ ನಡೆಯಿತು. ಪೂಜ್ಯ ಆಚಾರ್ಯ ಶ್ರೀರಾಕೇಶಪ್ರಸಾದಜೀ ಮಹಾರಾಜ್ ಅವರು 200 ರೂ. ಮುಖಬೆಲೆಯ ನಾಣ್ಯವನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ರಾಜಕೀಯ ಮುಖಂಡರು, ಸಾಧು, ಸಂತರು ಉಪಸ್ಥಿತರಿದ್ದರು.
200 ರೂಪಾಯಿ ನಾಣ್ಯದ ಒಂದು ಕಡೆ ಭಾರತ ಸರ್ಕಾರದ ರಾಜಮುದ್ರೆ ಹಾಗೂ ಇನ್ನೊಂದು ಬದಿಯಲ್ಲಿ ವಡ್ತಾಲ್ ದೇವಾಲಯದ ಚಿತ್ರವನ್ನೊಳಗೊಂಡಿದೆ. ಇದು ಭಗವಾನ್ ಸ್ವಾಮಿ ನಾರಾಯಣ ಪರಂಪರೆ ಮತ್ತು ವಡ್ತಾಲ್ ಧಾಮ್ ನ ಸಾಂಸ್ಕೃತಿಕ ಪರಂಪರೆಯ ಗೌರವದ ಸಂಕೇತವಾಗಿದೆ ಎಂದು ವರದಿ ವಿವರಿಸಿದೆ.
ಮುಖ್ಯ ಕೊಠಾರಿ ಪೂಜ್ಯ ಸಾಂತ್ವಲ್ಲಭ ಸ್ವಾಮಿ ಈ ನಾಣ್ಯದ ಮಹತ್ವದ ಬಗ್ಗೆ ಮಾತನಾಡುತ್ತಾ, ಮೊದಲ ಬಾರಿಗೆ ಸ್ವಾಮಿ ನಾರಾಯಣ ದೇವಾಲಯವನ್ನು ಅಧಿಕೃತ ನಾಣ್ಯದಲ್ಲಿ ಮುದ್ರಿಸಿರುವುದು ಜಗತ್ತಿನಾದ್ಯಂತ ಇರುವ ಭಕ್ತರ ಗೌರವ ಮತ್ತು ಹೆಮ್ಮೆಯ ಪ್ರತೀಕವಾಗಿದೆ ಎಂದು ಹೇಳಿದರು.
ಸ್ವಾಮಿನಾರಾಯಣ ಸಮುದಾಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ವಡ್ತಾಲ್ ಧಾಮ್ ನ ಶಿಕ್ಷಣ ಮತ್ತು ಸಮಾಜ ಕಲ್ಯಾಣದ ಚಾರಿಟೇಬಲ್ ಕಾರ್ಯಗಳು ಶ್ಲಾಘನೀಯ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.