ಹೊಸದಿಲ್ಲಿ : ಗುರುಗ್ರಾಮದ ರಯಾನ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಏಳು ವರ್ಷದ ಬಾಲಕ ಪ್ರದ್ಯುಮ್ನ ಠಾಕೂರ್ ಅಮಾನುಷವಾಗಿ ಕೊಲೆಗೀಡಾದ ಕೆಲವೇ ದಿನಗಳ ಬಳಿಕ ಇದೀಗ ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯ ಖಾಸಗಿ ಶಾಲೆಯ ಆವರಣದಲ್ಲಿ ಇನ್ನೋರ್ವ ವಿದ್ಯಾರ್ಥಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ.
ಮೃತ ವಿದ್ಯಾರ್ಥಿನಿಯನ್ನು 16ರ ಹರೆಯದ ನೀತೂ ಚೌಹಾಣ್ ಎಂದು ಗುರುತಿಸಲಾಗಿದೆ. ಮಾಡರ್ನ್ ಸಿಟಿ ಮಾಂಟೆಸಿರಿ ಶಾಲೆಯ ಆವರಣದಲ್ಲಿ ಆಕೆ ಗಂಭೀರ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ.
16ರ ಹರೆಯದ ಬಾಲಕಿಯು ಶಾಲಾ ಕಟ್ಟಡದ ಮೂರನೇ ಅಂತಸ್ತಿನಲ್ಲಿರುವ ಶೌಚಾಲಯಕ್ಕೆ ಹೋಗಿದ್ದಳು; ಆಕೆಯ ತರಗತಿ ಒಂದನೇ ಮಹಡಿಯಲ್ಲಿದೆ. ವರದಿಗಳ ಪ್ರಕಾರ ನೀತೂ ನಿನ್ನೆ ಸೋಮವಾರ ಶಾಲಾ ಕಟ್ಟಡದ ಮೂರನೇ ಮಹಡಿಯಿಂದ ಕೆಳ ಬಿದ್ದು ಮೃತಪಟ್ಟಿದ್ದಾಳೆ.
3ನೇ ಮಹಡಿಯಿಂದ ಬಿದ್ದು ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿದ್ದ ಹುಡುಗಿಯನ್ನು ಒಡನೆಯೇ ಸಮೀಪದ ಆಸ್ಪತ್ರೆಗೆ ಒಯ್ದು ಬಳಿಕ ಅಲ್ಲಿಂದ ಗೋರಖ್‌ಪುರದ ಬಾಬಾ ರಾಘವದಾಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟರೊಳಗೆ ಆಕೆ ಕೊನೆಯುಸಿರೆಳೆದಿದ್ದಳು.
ಹುಡುಗಿಯ ಹೆತ್ತವರು ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ “ಯಾರೋ ಅಪರಿಚಿತ ದುಷ್ಕರ್ಮಿಗಳು ನಮ್ಮ ಮಗಳನ್ನು ಶಾಲಾ ಕಟ್ಟಡದ 3ನೇ ಮಹಡಿಯಿಂದ ಕೆಳಕ್ಕೆ ಎಸೆದಿದ್ದಾರೆ’. ಬಾಲಕಿಯ ಮೃತ ದೇಹದ ಅಟಾಪ್ಸಿ ನಡೆಸಲಾದ ಬಳಿಕ ಶವವನ್ನು ಆಕೆಯ ಕುಟುಂಬದವರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಸುಪರಿಂಟೆಂಡೆಂಟ್ ರಾಜೀವ್ ಮಲ್ಹೋತ್ರಾ ತಿಳಿಸಿದ್ದಾರೆ.
ಪೊಲೀಸರು ಕೇಸು ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.