Advertisement

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

05:30 PM Nov 25, 2024 | Team Udayavani |

ಕೈಕಂಬ: ಕಂದಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರದ ಬಳಿ 18.84 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಗುರುಪುರ ನಾಡಕಚೇರಿಯ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದೆ.

Advertisement

ಕಂದಾವರ ಗ್ರಾಮ ಪಂಚಾಯತ್‌ನ ಕಟ್ಟಡದಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವ ಗುರುಪುರ ನಾಡಕಚೇರಿ ಹಲವಾರು ಸಮಸ್ಯೆಗಳನ್ನು ಕಂಡಿದ್ದು. ಹೆಂಚಿನ ಕಟ್ಟಡವಾದ ಕಾರಣ ಮಳೆ ನೀರು ಸೋರಿ ಕಂಪ್ಯೂಟರ್‌ಗಳ ಕಾರ್ಯನಿರ್ವಹಣೆಗೆ ತೊಂದರೆಯಾಗುತ್ತಿತ್ತು. ಸಮರ್ಪಕ ಸ್ಥಳಾವಕಾಶದ ತೊಂದರೆಯೂ ಇಲ್ಲಿತ್ತು.

ಕಂದಾಯ ಇಲಾಖೆಯೂ ಎಲ್ಲ ಇಲಾಖೆಯ ತಾಯಿ ಎಂದು ಹೇಳಲಾಗುತ್ತಿದ್ದರೂ ಸ್ವಂತ ಕಟ್ಟಡ ಇಲ್ಲದೇ ತೊಂದರೆಯನ್ನು ಅನುಭವಿಸಿತ್ತು ಹಾಗೂ ಗುರುಪುರ ಹೋಬಳಿಯ ಗ್ರಾಮಸ್ಥರಿಗೆ ಸಮಸ್ಯೆಯೂ ಎದುರಾಗುತ್ತಿತ್ತು. ಈ ಬಗ್ಗೆ ಉದಯವಾಣಿ ಸುದಿನ ಗಮನವೂ ಸೆಳೆದಿತ್ತು.

ವಿದ್ಯುತ್‌, ಕುಡಿಯುವ ನೀರಿನ ಸಂಪರ್ಕ, ಕಚೇರಿ ಪೀಠೊಪಕರಣ ಹಾಗೂ ಇತರ ಅವಶ್ಯಕತೆ ಸೌಕರ್ಯಗಳು ಬಾಕಿ ಉಳಿದಿವೆ. ಕಟ್ಟಡದ ನಿರ್ಮಾಣವಾಗಿ ಹಲವು ತಿಂಗಳು ಕಳೆದಿವೆ. ಎದುರು ಹುಲ್ಲುಗಳು ಬೆಳೆದಿವೆ. ಮೂಲ ಸೌಕರ್ಯವನ್ನು ಶೀಘ್ರ ಕಲ್ಪಿಸಿ, ಉದ್ಘಾಟನೆಗೊಂಡು ಜನರಿಗೆ ಒಳ್ಳೆಯ ಸೇವೆ ದೊರಕುವ ನಿರೀಕ್ಷೆಯಲ್ಲಿ ಜನರಿದ್ದಾರೆ.

ಹೆಚ್ಚುತ್ತಿರುವ ಸರಕಾರ ಯೋಜನೆಗಳಿಗೆ ಸಮರ್ಪಕವಾಗಿ ಗ್ರಾಮಸ್ಥರಿಗೆ ಸ್ಪಂದಿಸಲು ಕಂದಾಯ ಇಲಾಖೆಗೆ ತನ್ನ ಸ್ವಂತ ಕಟ್ಟಡದ ಅವಶ್ಯಕತೆ ಇದ್ದು ಮುಂದಿನ ದಿನಗಳಲ್ಲಿ ಜನರಿಗೆ ಹೆಚ್ಚು ಅನುಕೂಲಕರವಾಗಿ ಕಾರ್ಯನಿರ್ವಹಿಸಲು ಸಾಧ್ಯ.

Advertisement

24 ಗ್ರಾಮಗಳಿಗೆ 9 ಗ್ರಾಮಕರಣಿಕರು
24 ಗ್ರಾಮಗಳಲ್ಲಿ ಕೇವಲ 9 ಗ್ರಾಮಕರಣಿಕರು ಈಗ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮಸ್ಥರಿಗೆ ಅಲೆದಾಟಗಳಿಗೆ ಕಾರಣವಾಗಿದೆ. ಗ್ರಾಮಕರಣಿಕರನ್ನು ನೇಮಿಸುವ ಬಗ್ಗೆ ಗ್ರಾಮಸ್ಥರು ಬೇಡಿಕೆಯನ್ನು ಇಟ್ಟಿದ್ದಾರೆ. ಈ ತನಕ ಯಾವುದೇ ಸ್ಪಂದನೆ ದೊರಕಿಲ್ಲ.

24 ಗ್ರಾಮಗಳ ವ್ಯಾಪ್ತಿ
ಗುರುಪುರ ಹೋಬಳಿಯ 24 ಗ್ರಾಮಗಳು ಗುರುಪುರ ನಾಡಕಚೇರಿಯ ವ್ಯಾಪ್ತಿಗೆ ಬರುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಕುಡುಪು, ಪಚ್ಚನಾಡಿ, ತಿರುವೈಲು ಸಹಿತ 21 ಗ್ರಾಮಗಳಾದ ನೀರುಮಾರ್ಗ, ಅಡ್ಡೂರು, ಮೂಳೂರು, ಬೊಂಡಂತಿಲ, ಮಲ್ಲೂರು, ಉಳಾಯಿಬೆಟ್ಟು, ಬಡಗ ಎಡಪದವು, ಮೂಡುಪೆರಾರ, ಪಡುಪೆರಾರ, ತೆಂಕುಳಿಪಾಡಿ, ಬಡಗುಳಿಪಾಡಿ , ಮೊಗರು, ಅದ್ಯಪಾಡಿ, ಕೊಳಂಬೆ, ಕಂದಾವರ, ಕೊಂಪದವು, ಮುಚ್ಚಾರು, ತೆಂಕ ಎಡಪದವು, ಕಿಲೆಂಜಾರು, ಕೊಳವೂರು, ಮುತ್ತೂರು ಗುರುಪುರ ಹೋಬಳಿ ವ್ಯಾಪ್ತಿಗೆ ಬರುತ್ತದೆ. ಅಡ್ಯಾರು, ಅರ್ಕುಳ ಗ್ರಾಮಗಳು ಈಗ ಇದರಿಂದ ಬೇರ್ಪಟ್ಟಿವೆ.

ನಿರ್ಮಿತಿ ಕೇಂದ್ರದಿಂದ ಕಟ್ಟಡ ನಿರ್ಮಾಣ
ಒಟ್ಟು 18.84 ಲಕ್ಷ ರೂ.ಅನುದಾನದಲ್ಲಿ ನಿರ್ಮಿತಿ ಕೇಂದ್ರದಿಂದ ಕಟ್ಟಡ ನಿರ್ಮಾಣಗೊಂಡಿದೆ. ಒಟ್ಟು 700 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಉಪತಹಶೀಲ್ದಾರರ, ಕಂದಾಯ ನಿರೀಕ್ಷಕರ, ದಾಖಲೆ ಇಡುವ ಕೋಣೆಯನ್ನು ಹೊಂದಿದೆ. ಎದುರಿಗೆ ಕಚೇರಿ ಸಿಬಂದಿಗಳ ಹಾಗೂ ನೆಮ್ಮದಿ ಕೇಂದ್ರದ ಕಚೇರಿಯನ್ನು ಹೊಂದಿದೆ. ಈಗಾಗಲೇ ಈ ಕಟ್ಟಡವನ್ನು ನಿರ್ಮಿತಿ ಕೇಂದ್ರ ಮಂಗಳೂರು ತಹಶೀಲ್ದಾರರಿಗೆ ಹಸ್ತಾಂತರಿಸಿದೆ. ಕಂದಾವರ ಗ್ರಾಮ ಪಂಚಾಯತ್‌ನಿಂದ ಕಂದಾವರ ಪಡ್ಡಾಯಿ ಪದವು ರಸ್ತೆಯಲ್ಲಿ ಸುಮಾರು 500 ಮೀಟರ್‌ ದೂರದಲ್ಲಿ ನೂತನ ನಾಡಕಚೇರಿ ಕಟ್ಟಡ ನಿರ್ಮಾಣವಾಗಿದ್ದು ಒಟ್ಟು 10 ಸೆಂಟ್ಸು ಜಾಗವನ್ನು ಹೊಂದಿದೆ. ಇದರ ಸಮೀಪದಲ್ಲಿಯೇ ಗುರುಪುರ ರೈತ ಸಂಪರ್ಕ ಕೇಂದ್ರ, ಪ್ರಾಥಮಿಕ ಆರೋಗ್ಯ ಉಪಕೇಂದ್ರ, ಅಂಗನವಾಡಿ ಕೇಂದ್ರವೂ ಇದೆ. ಇದರಿಂದ ರೈತರಿಗೆ, ಗ್ರಾಮಸ್ಥರಿಗೆ ಹೆಚ್ಚು ಅನುಕೂಲವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next