Advertisement

Mangaluru: ಶಾಲಾ ವಾಹನ ಸುರಕ್ಷತೆ; ಪಾಲಕರಿಗೆ ಚಿಂತೆ

02:32 PM Nov 14, 2024 | Team Udayavani |

ಮಹಾನಗರ: ವಿಟ್ಲ ಸಮೀಪದ ಪೆರುವಾಯಿಯ ಮಿತ್ತಮೂಲೆ ಎಂಬಲ್ಲಿ ಬುಧವಾರ ಶಾಲಾ ಮಕ್ಕಳನ್ನು ಹೊತ್ತ ಕಾರು ಪಲ್ಟಿಯಾಗಿ ಹಲವರು ಗಾಯಗೊಂಡಿದ್ದಾರೆ. ಕಳೆದ ಸೋಮವಾರ ಮಣಿಪಾಲದ ಈಶ್ವರ ನಗರದಲ್ಲಿ ಆಟೋ ರಿಕ್ಷಾ ಪಲ್ಟಿಯಾಗಿ ಎಂಟು ಮಕ್ಕಳು ಗಾಯಗೊಂಡಿದ್ದಾರೆ. ಹೀಗೆ ಮಕ್ಕಳ ವಾಹನ ಅಪಘಾತಕ್ಕೀಡಾಗುವ ಘಟನೆಗಳು ನಡೆದಾಗಲೆಲ್ಲ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳ ಚಾಲಕರ ನಿರ್ಲಕ್ಷ್ಯ, ಇಂತಹ ವಾಹನಗಳಲ್ಲಿ ಸಂಚರಿಸುವ ವಿದ್ಯಾರ್ಥಿಗಳ ಸುರಕ್ಷೆ ಬಗ್ಗೆ ಆಗಾಗ್ಗೆ ಸಾರ್ವಜನಿಕ ವಲಯದಿಂದ ಆಕ್ಷೇಪ, ಆತಂಕಗಳು ವ್ಯಕ್ತವಾಗುತ್ತಿವೆ. ಆದರೆ, ಪರಿಣಾಮಕಾರಿಯಾದ ಪರಿಹಾರ ಕ್ರಮಗಳನ್ನು ಅನುಷ್ಠಾನಗೊಳಿಸಲು ಇನ್ನೂ ಕೂಡ ಸಾಧ್ಯವಾಗಿಲ್ಲ.

Advertisement

ಘಟನೆಗಳು ನಡೆದಾಗ ಮಾತ್ರ ಚರ್ಚೆ ನಡೆದು ಮತ್ತೆ ಯಥಾಸ್ಥಿತಿಯಲ್ಲಿ ನಿಯಮ ಉಲ್ಲಂಘನೆಗಳು ಮುಂದುವರಿಯುವುದು ಕಂಡುಬರುತ್ತಿವೆ. ಆಟೋರಿಕ್ಷಾಗಳಲ್ಲಿ ನಿಯಮ ಉಲ್ಲಂಘಿಸಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಕರೆದೊಯ್ಯುವುದು ಅಪಾಯಕಾರಿಯಾಗಿದ್ದರೂ ಅದು ಮುಂದುವರೆದಿದೆ.

ಆಟೋರಿಕ್ಷಾಗಳಲ್ಲಿ 12 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಒಟ್ಟು 5 ಮಂದಿ ಮಕ್ಕಳನ್ನು ಮಾತ್ರ ಕರೆದೊಯ್ಯಲು ಅನುಮತಿ ಇದ್ದರೂ ಕೆಲವು ಆಟೋರಿಕ್ಷಾಗಳಲ್ಲಿ 10ರಿಂದ 12 ಮಂದಿ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗುತ್ತಿದೆ. ಇದು ನಗರ, ಗ್ರಾಮಾಂತರವೆನ್ನದೆ ಬಹುತೇಕ ಎಲ್ಲ ಕಡೆ ಕಂಡುಬರುವ ದೃಶ್ಯ. ಈ ರೀತಿಯ ನಿಯಮ ಉಲ್ಲಂಘನೆ ಕಂಡುಬಂದರೆ ಪೊಲೀಸರು ದಂಡ ವಿಧಿಸಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಆದರೆ ಚಾಲಕರು ನಿಯಮ ಉಲ್ಲಂಘನೆ ನಿರಂತರ ವಾಗಿ ಮಾಡುತ್ತಿರುವುದು ಕಂಡಬರುತ್ತಿದೆ.

ಉಲ್ಲಂಘಿಸಿದರೆ ಕ್ರಮ
ಈಗಾಗಲೇ ವಾಹನಗಳು, ಬಸ್‌ಗಳ ಚಾಲರು, ಮಾಲಕರು, ಶಾಲಾ ಮುಖ್ಯಸ್ಥರ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಆಟೋರಿಕ್ಷಾಗಳು ಸೇರಿದಂತೆ ಶಾಲಾ ಮಕ್ಕಳನ್ನು ಕರೆದೊಯ್ಯುವ ಯಾವುದೇ ವಾಹನಗಳು ನಿಯಮ ಉಲ್ಲಂಘಿಸುವುದು ಕಂಡುಬಂದರೆ ದಂಡ ವಸೂಲಿ ಮಾಡಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದೇವೆ. ಮಕ್ಕಳನ್ನು ಅಪಾಯಕಾರಿಯಾಗಿ ಕರೆದೊಯ್ಯುವ ವಾಹನಗಳ ಬಗ್ಗೆ ಪೋಷಕರು ಕೂಡ ಎಚ್ಚೆತ್ತುಕೊಳ್ಳಬೇಕು. ಯಾವ ವಾಹನಗಳು ನಿರಂತರವಾಗಿ ನಿಯಮ ಉಲ್ಲಂಘನೆ ಮಾಡುತ್ತಿವೆ ಎಂಬ ಬಗ್ಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು ದೂರು ನೀಡಿದರೆ ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ.
– ನಜ್ಮಾ ಫಾರೂಕಿ, ಎಸಿಪಿ, ಸಂಚಾರ ವಿಭಾಗ ಮಂಗಳೂರು

ಕ್ರಮ ಕೈಗೊಳ್ಳಲಿ
ಶಾಲಾ ಮಕ್ಕಳನ್ನು ಕರೆದೊಯ್ಯುವ ಯಾವುದೇ ವಾಹನಗಳು ನಿಯಮ ಉಲ್ಲಂ ಸಿದರೆ ಪೊಲೀಸರು, ಆರ್‌ಟಿಒ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಟೂರಿಸ್ಟ್‌ ವಾಹನಗಳ ಹೆಚ್ಚಿನ ಚಾಲಕರು ನಿಯಮ ಪಾಲನೆ ಮಾಡುತ್ತಾರೆ. ಆದರೆ ಖಾಸಗಿಯಾಗಿ ಮಕ್ಕಳನ್ನು ಕರೆದೊಯ್ಯುವ ವಾಹನಗಳು(ವೈಟ್‌ಬೋರ್ಡ್‌) ನಿಯಮ ಉಲ್ಲಂಘಿಸುವುದು ಹೆಚ್ಚು.
– ಮೋಹನ್‌ ಕುಮಾರ್‌ ಅತ್ತಾವರ, ಶಾಲಾ ಮಕ್ಕಳ ವಾಹನ ಚಾಲಕರ ಸಂಘ, ದ.ಕ ಜಿಲ್ಲಾಧ್ಯಕ್ಷರು

Advertisement

ಇತರ ವಾಹನಗಳಿಂದಲೂ ಉಲ್ಲಂಘನೆ
ಆಟೋರಿಕ್ಷಾಗಳು ಮಾತ್ರವಲ್ಲದೆ, ಶಾಲೆಗಳಿಂದಲೇ ನಿರ್ವಹಿಸಲ್ಪಡುವ ಮಿನಿಬಸ್‌ ಮತ್ತಿತರ ವಾಹನಗಳು, ಇತರೇ ಬಾಡಿಗೆ ವಾಹನಗಳು, ಖಾಸಗಿ ವಾಹನಗಳು ಕೂಡ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿರುವ ಕುರಿತು ದೂರುಗಳು ಕೇಳಿಬರುತ್ತಿವೆ. ನಿಗದಿತ ಸಂಖ್ಯೆಗಿಂದ ಹೆಚ್ಚಿನ ಮಕ್ಕಳನ್ನು ಕರೆದೊಯ್ಯುವುದು, ವೇಗದ ಚಾಲನೆ, ಅಪಾಯಕಾರಿ ಸ್ಥಳಗಳಲ್ಲಿ ಪಾರ್ಕಿಂಗ್‌, ವಾಹನಗಳಲ್ಲಿ ಸುರಕ್ಷ ಕ್ರಮಗಳನ್ನು ಅಳವಡಿಸಿಕೊಳ್ಳದಿರುವುದು ಮೊದಲಾದ ಉಲ್ಲಂಘನೆಗಳು ಸಾಮಾನ್ಯ ಎಂಬಂತಾಗಿವೆ.

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next