Advertisement

ನಿರುಪಯುಕ್ತವಾದ ಓವರ್‌ಹೆಡ್‌ ಟ್ಯಾಂಕ್‌ಗಳು

09:21 PM Jul 23, 2019 | Lakshmi GovindaRaj |

ಸಂತೆಮರಹಳ್ಳಿ: ತಾಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಕುಡಿಯುವ ನೀರಿನ ಪೂರೈಕೆ ಮಾಡುವ ಉದ್ಧೇಶದಿಂದ ನಿರ್ಮಿಸಿರುವ ಎರಡು ಓವರ್‌ ಹೆಡ್‌ ಟ್ಯಾಂಕ್‌ಗಳು ನಿರುಪಯುಕ್ತವಾಗಿರುವುದರಿಂದ ಬೆಟ್ಟದ ವಿವಿಧ ಪೋಡುಗಳಲ್ಲಿ ಜನರಿಗೆ ಕುಡಿಯುವ ನೀರು ಸಮಸ್ಯೆ ಉಲ್ಬಣಗೊಂಡಿದೆ.

Advertisement

ನೀರಿಗೆ ಪರದಾಟ: ತಾಲೂಕಿನ ಬಿಳಿಗಿರಿರಂಗನಬೆಟ್ಟದ ಗ್ರಾಪಂ ವ್ಯಾಪ್ತಿಯಲ್ಲಿ ಪುರಾಣಿಪೋಡು, ಮಂಜಿಗಡ್ಡೆಪೋಡು, ಕಲ್ಯಾಣಿಪೋಡು, ಸೀಗೆಬೆಟ್ಟ, ಎರಕನಗದ್ದೆಪೋಡು, ಹೊಸಪೋಡು, ಮುತ್ತುಗನಗದ್ದೆಪೋಡು, ಬಂಗಲೆಪೋಡು, ಬಿಳಿಗಿರಿರಂಗನಬೆಟ್ಟ ಸೇರುತ್ತವೆ. ಪಂಚಾಯಿತಿ ವ್ಯಾಪ್ತಿಯಲ್ಲಿ 3500ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇದರಲ್ಲಿ 2 ಸಾವಿ ರಕ್ಕೂ ಹೆಚ್ಚು ಮಂದಿ ಸೋಲಿಗರೇ ಇದ್ದಾರೆ. ಅರಣ್ಯ ಪ್ರದೇಶದಲ್ಲಿ ಜನರಿಗೆ ಸರಿಯಾಗಿ ಕುಡಿಯುವ ನೀರಿನ ಪೂರೈಕೆ ಮಾಡುವ ಕಾಮಗಾರಿಗಳ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಪಂ ಸರಿ ಯಾಗಿ ಗಮನ ನೀಡದೆ ಇರುವುದರಿಂದ ಜನರು ಕುಡಿಯುವ ನೀರಿಗಾಗಿ ಪರದಾಟ ಮಾಡಬೇಕಾದ ಪರಿ ಸ್ಥಿತಿ ನಿರ್ಮಾಣವಾಗಿದೆ.

1 ಲಕ್ಷ ಸಾಮರ್ಥ್ಯದ ಓವರ್‌ ಹೆಡ್‌ ಟ್ಯಾಂಕ್‌: ಬಿಳಿಗಿರಿರಂಗನಬೆಟ್ಟಕ್ಕೆ ಕುಡಿಯುವ ನೀರು ಪೂರೈಕೆಯಾಗುವ ನಿಟ್ಟಿನಲ್ಲಿ ಬಂಗ್ಲೆಪೋಡಿನಲ್ಲಿ 2013-14ನೇ ಸಾಲಿನಲ್ಲಿ ಗ್ರಾಮಾಂತರ ಕುಡಿಯುವ ನೀರು ಸರಬರಾಜು ಯೋಜನೆ ಮೂಲಕ 20 ಲಕ್ಷ ರೂ. ವೆಚ್ಚದಲ್ಲಿ 1 ಲಕ್ಷ ಸಾಮರ್ಥ್ಯದ ಓವರ್‌ ಹೆಡ್‌ಟ್ಯಾಂಕ್‌ನ್ನು ಹಲವು ವರ್ಷದ ಹಿಂದೆ ನಿರ್ಮಿಸಲಾಗಿತ್ತು.

ಕಳಪೆ ಗುಣಮಟ್ಟದ ಟ್ಯಾಂಕ್‌: ಪ್ರತಿಯೊಬ್ಬರ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಸರ್ಕಾರ ಲಕ್ಷಾಂತರ ರೂ. ಹಣ ವ್ಯಯಿಸಿ ಓವರ್‌ ಹೆಡ್‌ ಟ್ಯಾಂಕ್‌ನ್ನು ನಿರ್ಮಾಣ ಮಾಡಿದೆ. ಆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರನ ಬೇಜವಾಬ್ದಾರಿತನದಿಂದ ಟ್ಯಾಂಕ್‌ ನಿರ್ಮಾಣವು ಕಳಪೆ ಗುಣಮಟ್ಟದಿಂದ ಕೂಡಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲಾಗಿತ್ತು. ಆದರೂ ಇದನ್ನು ಸರಿಪಡಿಸಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ಅಧಿಕಾರಿಗಳ ವಿರುದ್ಧ ಆರೋಪ: ಹಲವು ವರ್ಷಗಳ ಹಿಂದೆ ನಿರ್ಮಾಣವಾದ ಕುಡಿಯುವ ನೀರಿನ ಓವರ್‌ ಟ್ಯಾಂಕ್‌ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಹಣ ಮಾಡಿಕೊಟ್ಟಿದೆ ಹೊರತು ಜನರಿಗೆ ಕುಡಿಯುವ ನೀರಿನ ದಾಹವನ್ನು ನೀಗಿಸುವಲ್ಲಿ ಇವರು ಸೋತಿದ್ದಾರೆ ಎಂಬುದು ಸ್ಥಳೀಯ ಜಡೇಗೌಡ ದೂರುತ್ತಾರೆ.

Advertisement

ಉದುರುತ್ತಿದೆ ಗಾರೆ ಚಕ್ಕೆಗಳು: 2013-14 ಸಾಲಿನಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಿದ ಇಲ್ಲಿಂದ ಕೆಲವು ತಿಂಗಳು ನೀರನ್ನು ಪೂರೈಕೆ ಮಾಡಲಾಗಿತ್ತು. ನಂತರ ಒಂದು ವರ್ಷ ಬಳಕೆಗೆ ಬಾರದೇ ನೀರಿನ ಪೂರೈಕೆ ಸ್ಥಗಿತಗೊಂಡಿತು. ಇಷ್ಟಾದರೂ ಸಹ ಸಂಬಂಧಪಟ್ಟ ಮೇಲಧಿಕಾರಿಗಳು ಟ್ಯಾಂಕ್‌ ನಿರ್ಮಾಣ ಮಾಡಿರುವ ಗುತ್ತಿಗೆದಾರರು ಹಾಗೂ ಎಂಜಿನಿಯರ್‌ ವಿರುದ್ಧ ಕ್ರಮಕೈಗೊಳ್ಳದೇ ನಿರ್ಲಕ್ಷಿಸಿದ್ದು ಸರ್ಕಾರದ ಹಣ ದುರುಪಯೋಗವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಮತ್ತೊಂದು ಟ್ಯಾಂಕ್‌ಗೂ ಇದೆ ಗತಿ: ಬಿಳಿಗಿರಿರಂಗನಬೆಟ್ಟದ ದೇವಸ್ಥಾನದ ವಾಹನ ನಿಲ್ದಾಣದ ಬಳಿ 2014-15ನೇ ಸಾಲಿನಲ್ಲಿ ಎನ್‌ಎನ್‌ಡಿಡಬ್ಲೂಪಿ ಯೋಜನೆಯಲ್ಲಿ 25 ಲಕ್ಷ ರೂ.ವೆಚ್ಚದಲ್ಲಿ ಲಕ್ಷ ಲೀಟರ್‌ ಸಾಮರ್ಥ್ಯ ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಟ್ಯಾಂಕ್‌ ನಿರ್ಮಾಣಕ್ಕೆ ಜಾಗದ ಸಮಸ್ಯೆಯಿಂದ ಹಲವು ವರ್ಷಗಳ ಕಾಲ ಜಾಗಕ್ಕಾಗಿ ಹುಡುಕಾಟ ನಡೆಸಲಾಗಿತ್ತು.

ನಂತರ 2017ರಲ್ಲಿ ದೇವಸ್ಥಾನ ಸಮೀಪದಲ್ಲಿ ಮತ್ತೊಂದು ಓವರ್‌ ಟ್ಯಾಂಕ್‌ನ್ನು ಕಟ್ಟಡ ಜಾಗವನ್ನು ಗುರುತಿಸಲಾಗಿತ್ತು. ಇದಕ್ಕೆ ಮಾಜಿ ಶಾಸಕ ಎಸ್‌.ಜಯಣ್ಣ ಚಾಲನೆಯನ್ನು ನೀಡಿದ್ದರು. ಆದರೆ ಕಾಮಗಾರಿ ಪೂರ್ಣಗೊಂಡಿದ್ದರೂ ಇಲ್ಲಿ ಇನ್ನೂ ನೀರು ಶೇಖರಣೆಗೊಳ್ಳುತ್ತಿಲ್ಲ. ಇದರಿಂದ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ, ಇಲ್ಲಿ ವಾಸವಾಗಿರುವ ಸೋಲಿಗ ಜನಾಂಗಕ್ಕೆ ತೊಂದರೆಯಾಗುತ್ತಿದ್ದು ಆದಷ್ಟು ಬೇಗ ಇದು ಸಾರ್ವಜನಿಕರ ಅನುಕೂಲಕ್ಕೆ ಬರಲಿ ಎಂದು ಇಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ.

ಬಿಳಿಗಿರಿರಂಗನಬೆಟ್ಟದ ದೇಗುಲದ ನಿಲ್ದಾಣದ ಬಳಿ ಇರುವ ನೀರಿನ ಟ್ಯಾಂಕ್‌ ಕಾಮಗಾರಿ ಪೂರ್ಣಗೊಂಡಿದೆ. ಇದನ್ನು ಇನ್ನೊಂದು ತಿಂಗಳ ಒಳಗೆ ಬಳಕೆಗೆ ಬರಲು ಕ್ರಮ ವಹಿಸಲಾಗುವುದು. ಬಂಗ್ಲೆಪೋಡಿನ ಓವರ್‌ ಹೆಡ್‌ ಟ್ಯಾಂಕಿನ ಬಗ್ಗೆ ಮಾಹಿತಿ ಇಲ್ಲ. ಇಲ್ಲಿಗೆ ಭೇಟಿ ನೀರಿ ಪರಿಶೀಲಿಸಿ ಮುಂದಿನ ಕ್ರಮ ವಹಿಸಲಾಗುವುದು.
-ರಾಜು, ಜೆಇ ಪಂಚಾಯತ್‌ ರಾಜ್‌ ಇಲಾಖೆ

* ಫೈರೋಜ್‌ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next