Advertisement
ಆರೋಗ್ಯ ಸಮಸ್ಯೆಯಿಂದ ಬಳಲುವ ಬಡವರು, ದುಬಾರಿ ವೈದ್ಯಕೀಯ ವೆಚ್ಚ ಭರಿಸಲಾಗದೆ ಪರಿತಪಿಸುವವರಿಗೆ ಕಿಮ್ಸ್ ಮಹತ್ವದ ಆಸರೆಯಾಗಿದೆ. ನಿತ್ಯವೂ 1,000-1200 ಜನ ಹೊರರೋಗಿಗಳು ವೈದ್ಯಕೀಯ ಸೇವೆ ಪಡೆದರೆ, ನೂರಾರು ಜನ ಒಳ ರೋಗಿಗಳಿಗೆ ವಿವಿಧ ರೀತಿಯ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗುತ್ತಿದೆ. ಕಡು ಬಡವರಿಗೆ ಉಚಿತ ಹಾಗೂ ಆರ್ಥಿಕ ದುರ್ಬಲರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಸೌಲಭ್ಯ ದೊರೆಯುತ್ತಿದ್ದು, ಕಿಮ್ಸ್‌ಗೆ ಹೆಚ್ಚು ಹೆಚ್ಚು ಸೌಲಭ್ಯ ದೊರೆಯಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದ್ದರೂ ನಿರೀಕ್ಷಿತ ನೆರವು ದೊರೆತಿಲ್ಲ ಎನ್ನಬಹುದು.
Related Articles
Advertisement
ಕಿಮ್ಸ್‌ಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಯವರು ಕಿಮ್ಸ್ ಅಭಿವೃದ್ಧಿಗೆ ಸರಕಾರ ಗಮನ ನೀಡಲಿದ್ದು, ಈ ಕುರಿತು ಸಭೆ ನಡೆಸಿ ವಿಶೇಷ ನೆರವು ನೀಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಇದಕ್ಕೆ ಪೂರಕ ಎನ್ನುವಂತೆ ಕಿಮ್ಸ್‌ನಲ್ಲಿ ಕೈಗೊಳ್ಳಬಹುದಾದ ವಿಭಾಗ, ಹೆಚ್ಚಿನ ಸೌಲಭ್ಯಗಳ ನಿಟ್ಟಿನಲ್ಲಿ ಅಂದಾಜು 400-500 ಕೋಟಿ ರೂ. ಅಂದಾಜು ವೆಚ್ಚದ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಕೆ ಆಗಿದ್ದು, ಇದರಲ್ಲಿ ಕಿಮ್ಸ್‌ನಲ್ಲಿ ಕ್ಯಾನ್ಸರ್ ಚಿಕಿತ್ಸೆ ಪ್ರತ್ಯೇಕ ವಿಭಾಗ ಸ್ಥಾಪನೆ, ಚಿಕ್ಕಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ವಿಭಾಗ ಇನ್ನಿತರ ಸೌಲಭ್ಯಗಳ ಉದ್ದೇಶವನ್ನು ಪ್ರಸ್ತಾಪಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಕಿಮ್ಸ್‌ನಲ್ಲಿ ಹೆರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿದ್ದು, ಚಿಕ್ಕಮಕ್ಕಳ ಚಿಕಿತ್ಸೆಗೆ ಹೆಚ್ಚಿನ ಸೌಲಭ್ಯ ಹಾಗೂ ಪತ್ಯೇಕ ವಿಭಾಗದ ಅವಶ್ಯಕತೆ ಇದೆ. ಇದರಿಂದ ನವಜಾತ ಶಿಶುಗಳಲ್ಲಿ ಕಂಡು ಬರುವ ಅನಾರೋಗ್ಯ, ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ಸಹಕಾರಿ ಆಗಲಿದೆ. ಅದೇ ರೀತಿ ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ವಿಭಾಗದ ಚಿಂತನೆ ಇತ್ತಾದರೂ, ಕ್ಯಾನ್ಸರ್ ಚಿಕಿತ್ಸೆ ವಿಭಾಗವನ್ನು ಬೆಳಗಾವಿಗೆ ನೀಡಿರುವ ಸರಕಾರ ಕಿಮ್ಸ್‌ಅನ್ನು ಕಡೆಗಣಿಸಿದೆ ಎಂದೆನಿಸುತ್ತದೆ.
ಕಿಮ್ಸ್‌ನಿಂದ ಸಲ್ಲಿಕೆಯಾಗಿರುವ ಪ್ರಸ್ತಾವನೆಯಲ್ಲಿ ಜಯದೇವ ಆಸ್ಪತ್ರೆ ಶಾಖೆಯನ್ನು ಅಂದಾಜು 250 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆಗೆ ಮುಂದಾಗಿರುವುದು ಸರಕಾರದ ಉತ್ತಮ ನಡೆಯಾಗಿದೆ. ಇದರಿಂದ ಉತ್ತರ ಕರ್ನಾಟಕದ ಅನೇಕ ಹೃದ್ರೋಗಿಗಳಿಗೆ ಉತ್ತಮ ನೆರವು ದೊರೆತಂತಾಗಿದೆ. ಉತ್ತರ ಕರ್ನಾಟಕದ ಏಳೆಂಟು ಜಿಲ್ಲೆಗಳಿಗೆ ಪ್ರಮುಖ ಆರೋಗ್ಯ ಕೇಂದ್ರವಾಗಿರುವ ಕಿಮ್ಸ್‌ಗೆ ವಿಶೇಷ ಸೌಲಭ್ಯ ನೀಡಿಕೆ ನಿಟ್ಟಿನಲ್ಲಿ ಸರಕಾರ ಉದಾಸೀನ ತೋರದೆ ಸೂಕ್ತ ಸ್ಪಂದನೆ ತೋರಬೇಕಿದೆ.
ಅನುದಾನ ನೀಡಿಕೆಯಲ್ಲಿ ತೋರಬೇಕಿದೆ ಉದಾರತೆ: ಸರಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಿಗೆ ನೀಡುವ ಅನುದಾನದಲ್ಲಿ ತಾರತಮ್ಯ ತೋರದೆ ಕಿಮ್ಸ್ ವಿಚಾರದಲ್ಲಿ ಸರಕಾರ ಉದಾರತೆ ತೋರಬೇಕಾಗಿದೆ. ನೀಡುವ ಅನುದಾನದಲ್ಲಿ ಕಡಿಮೆ ಹಾಗೂ ವಿಳಂಬ ನೀತಿ ತೋರಿದರೆ ಸೌಲಭ್ಯ, ವೆಚ್ಚಗಳ ನಿರ್ವಹಣೆ ಸಮಸ್ಯೆ ಆಗಲಿದೆ. ಮೈಸೂರು, ಬೆಂಗಳೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಹಾಗೂ ಕಿಮ್ಸ್‌ಗೆ ನೀಡುವ ಅನುದಾನ ಗಮನಿಸಿದರೆ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ. ಆರ್ಥಿಕ ಸೌಲಭ್ಯ 103 ಅಡಿಯಲ್ಲಿ ಮೈಸೂರು, ಬೆಂಗಳೂರಿಗೆ ವಾರ್ಷಿಕ 30-40 ಕೋಟಿ ರೂ. ಅನುದಾನ ದೊರೆತರೆ ಕಿಮ್ಸ್‌ಗೆ ವಾರ್ಷಿಕ 23 ಕೋಟಿ ರೂ. ಅನುದಾನ ದೊರೆಯುತ್ತಿದೆ ಎಂದು ಹೇಳಲಾಗುತ್ತಿದೆ. ಉತ್ತರ ಕರ್ನಾಟಕದ ಸುಮಾರು ಏಳೆಂಟು ಜಿಲ್ಲೆಗಳ ಬಡವರು, ಮಧ್ಯಮ ವರ್ಗದವರಿಗೆ ಆರೋಗ್ಯ ಚಿಕಿತ್ಸೆ ಧಾಮವಾಗಿರುವ ಕಿಮ್ಸ್ ಬಗ್ಗೆ ಸರಕಾರ ಉದಾರತೆ ತೋರಬೇಕಾಗಿದೆ. ಕಾಲೇಜು, ಆಸ್ಪತ್ರೆ ನಿರ್ವಹಣೆಗೆ ಹೆಚ್ಚಿನ ಅಥವಾ ಸಮಾನ ಅನುದಾನ ನೀಡಿಕೆಗೆ ಮುಂದಾಗಬೇಕಾಗಿದೆ.
– ಅಮರೇಗೌಡ ಗೋನವಾರ