ವಿಟ್ಲ: ಪಡಿತರ ಮೂಲಕ ಉಚಿತವಾಗಿ ಸಿಗುವ ಅನ್ನಭಾಗ್ಯ ಅಕ್ಕಿ ಯನ್ನು ಫಲಾನುಭವಿಗಳಿಂದ ಹಣ ನೀಡಿ ಸಂಗ್ರಹಿಸಿ ಹೆಚ್ಚು ಕ್ರಯಕ್ಕೆ ಮಾರಾಟ ಮಾಡುವ ಜಾಲ ವ್ಯಾಪಕ ವಾಗಿದ್ದು, ಗುರುವಾರ ಬೋಳಂತೂರು ಗ್ರಾಮದ ಎನ್.ಸಿ. ರೋಡ್‌ನಲ್ಲಿ ಇಂತಹ ಇನೊಂದು ಪ್ರಕರಣವನ್ನು ವಿಟ್ಲ ಪೊಲೀಸರು ಪತ್ತೆಹಚ್ಚಿದ್ದಾರೆ.
ಸುಮಾರು 15 ಟನ್ ಅಕ್ಕಿಯನ್ನು ಲಾರಿಯಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧಾರದಲ್ಲಿ ದಾಳಿ ಮಾಡಿದ ಪೊಲೀಸರ ತಂಡ ಲಾರಿಯನ್ನು ತಡೆದು ಚಾಲಕ ಮಡಿಕೇರಿ ಮೂಲದ ಚಂದ್ರೇಶ್‌ನನ್ನು ಬಂಧಿಸಿ, ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದೆ.
ಆರೋಪಿಯು ಬೋಳಂತೂರು ಸಮೀಪದ ನಾರ್ಶದಿಂದ 313 ಗೋಣಿ ಚೀಲಗಳಲ್ಲಿ 15 ಟನ್ ಅಕ್ಕಿಯನ್ನು ತುಂಬಿ ಸಾಗಿಸುತ್ತಿದ್ದ. ಈ ಬಗ್ಗೆ ಪ್ರಭಾರ ಆಹಾರ ನಿರೀಕ್ಷಕ ಪ್ರಶಾಂತ್ ಶೆಟ್ಟಿ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.
ವಶಕ್ಕೆ ಪಡೆದ ಲಾರಿ ಮತ್ತು ಅಕ್ಕಿಯ ಮೌಲ್ಯ 23 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ನಿನ್ನೆ 2 ಪ್ರಕರಣ
ಬುಧವಾರ ನೀರೆ ಗ್ರಾ.ಪಂ. ವ್ಯಾಪ್ತಿಯ ಕಣಜಾರಿನಲ್ಲಿ 20 ಕ್ವಿಂಟಾಲ್ ಮತ್ತು ಬೆಳ್ತಂಗಡಿಯ ಗೇರುಕಟ್ಟೆಯಲ್ಲಿ 12 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು.