Advertisement

ವಿ.ವಿ. ಕಾಲೇಜು: ಒಟ್ಟು  ಏಳು ಕೇಂದ್ರಗಳಲ್ಲೂ ಮತದಾನ ಶಾಂತಿಯುತ

10:14 AM Jun 09, 2018 | Team Udayavani |

ಮಹಾನಗರ : ವಿಧಾನ ಪರಿಷತ್‌ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾನ ಪ್ರಕ್ರಿಯೆಯು ಶುಕ್ರವಾರ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಒಟ್ಟು 7 ಮತದಾನ ಕೇಂದ್ರಗಳಲ್ಲಿ ನಡೆಯಿತು. ಪದವೀಧರ ಕ್ಷೇತ್ರಕ್ಕೆ ಐದು ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಎರಡು ಮತದಾನ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿತ್ತು.

Advertisement

ಬೆಳಗ್ಗೆ ಮತದಾನ ಆರಂಭದ ಸಂದರ್ಭ ಮತದಾರರಿಂದ ನೀರಸ ಪ್ರಕ್ರಿಯೆ ವ್ಯಕ್ತವಾದರೂ ಬಳಿಕ ಮತದಾನ ಪ್ರಕ್ರಿಯೆ ವೇಗವನ್ನು ಪಡೆದುಕೊಂಡಿತ್ತು. ಎಲ್ಲಿ ಮತದಾನ ಮಾಡಬೇಕು ಎಂದು ಗೊಂದಲದಲ್ಲಿದ್ದ ಮತದಾರರಿಗೆ ಪೊಲೀಸರು ನಿರ್ದೇಶನ ನೀಡಿದರು. ಒಟ್ಟಿನಲ್ಲಿ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿತು.

ಟ್ರಾಫಿಕ್‌ ಜಾಮ್‌
ಕಾಲೇಜಿನ ಹೊರಭಾಗದಲ್ಲಿ ಪುಟ್‌ಪಾತ್‌ನಲ್ಲಿ ವಿವಿಧ ರಾಜಕೀಯ ಪಕ್ಷಗಳು ಪ್ರಚಾರ ಬೂತ್‌ಗಳನ್ನು ಹಾಕಿದ್ದರು. ಆದರೆ ಅದು ಕೇಂದ್ರದ ಪಕ್ಕದಲ್ಲೇ ಇರುವುದರಿಂದ ಮತದಾನಕ್ಕೆ ಆಗಮಿಸುವವರಿಗೆ ತೊಂದರೆಯಾಗುತ್ತದೆ ಎಂದು ಪೊಲೀಸರು ಅವುಗಳನ್ನು ಕೊಂಚ ದೂರದಲ್ಲಿ ಹಾಕುವಂತೆ ಮನವಿ ಮಾಡಿದರು. ಹೆಚ್ಚಿನ ವಾಹನದೊತ್ತಡ ಇರುವ ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ಮತದಾನ ಕೇಂದ್ರ ಇದ್ದುದರಿಂದ ಕೊಂಚ ಟ್ರಾಫಿಕ್‌ ಜಾಮ್‌ಗೂ ಕಾರಣವಾಯಿತು. ಮತದಾರರಿಗೆ ಕಾಲೇಜಿನ ಗೇಟಿನ ಒಳಗೆ ವಾಹನ ಪ್ರವೇಶ ನಿಷೇಧಿಸಿದ ಪರಿಣಾಮ ಗೊಂದಲಕ್ಕೊಳಗಾಗಿದ್ದರು.

ಇದು ಕೂಡ ಟ್ರಾಫಿಕ್‌ ಜಾಮ್‌ಗೆ ಕಾರಣವಾಯಿತು. ಆದರೆ ಪೊಲೀಸ್‌ ಅಧಿಕಾರಿಗಳು ಸಹಿತ ಸಿಬಂದಿ ಸ್ಥಳದಲ್ಲಿ ಬೀಡು ಬಿಟ್ಟು ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದರು. ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ಪ್ರಮುಖರು ಕೇಂದ್ರಕ್ಕೆ ಹಾಗೂ ತಮ್ಮ ಪಕ್ಷಗಳ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಮುಖರ ಮತದಾನ
ಮಂಗಳೂರು ವಿವಿ ಕಾಲೇಜಿನ ಮತದಾನ ಕೇಂದ್ರಗಳಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್‌, ವಿಧಾನ ಪರಿಷತ್‌ ಸದಸ್ಯರಾದ ಐವನ್‌ ಡಿ’ಸೋಜಾ, ಕ್ಯಾ| ಗಣೇಶ್‌ ಕಾರ್ಣಿಕ್‌, ವಿಧಾನಸಭೆಯ ಮಾಜಿ ಉಪಸ್ಪೀಕರ್‌ ಎನ್‌. ಯೋಗೀಶ್‌ ಭಟ್‌, ಮಾಜಿ ಶಾಸಕ ಜೆ.ಆರ್‌. ಲೋಬೋ, ಕೆಪಿಸಿಸಿ ಕಾರ್ಯದರ್ಶಿಗಳಾದ ಕಳ್ಳಿಗೆ ತಾರನಾಥ ಶೆಟ್ಟಿ, ಪಿ.ವಿ. ಮೋಹನ್‌, ಗೋವಿಂದದಾಸ ಕಾಲೇಜಿನಲ್ಲಿ ಶಾಸಕ ಭರತ್‌ ಶೆಟ್ಟಿ ಮೊದಲಾದ ಪ್ರಮುಖರು ಮತ ಚಲಾಯಿಸಿದರು.

Advertisement

ಮತದಾರರಲ್ಲಿ ಗೊಂದಲ
ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾರರು ವಿದ್ಯಾವಂತರೇ ಆಗಿದ್ದರೂ ಅವರಿಗೆ ಕೇಂದ್ರದೊಳಗೆ ಆಗಮಿಸುವವರೆಗೂ ಮತದಾನ ಕಾರ್ಯವನ್ನು ಹೇಗೆ ಮಾಡಬೇಕು ಎಂಬ ಗೊಂದಲವಿತ್ತು. ಹೆಚ್ಚಿನ ಮತದಾರರು ಅಧಿಕಾರಿಗಳ ಬಳಿ ವಿಚಾರಿಸಿ ಮತದಾನ ಮಾಡಿದರು. 

ಮತದಾನ ಪ್ರಕ್ರಿಯೆ 
ಪದವೀಧರ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮ.ಸಂಖ್ಯೆ 13ರಲ್ಲಿ ಒಟ್ಟು 562 ಮಂದಿ ಮತದಾನ ಮಾಡಿದ್ದು ಶೇ. 64.48 , 13ಎಯಲ್ಲಿ 516 ಮಂದಿ ಮತದಾನ ಮಾಡಿದ್ದು ಶೇ. 59.21, 13ಬಿಯಲ್ಲಿ 479 ಮಂದಿ ಮತದಾನ ಮಾಡಿದ್ದು ಶೇ. 58.06, 13ಸಿಯಲ್ಲಿ 512 ಮಂದಿ ಮತದಾನ ಮಾಡಿದ್ದು ಶೇ. 58.85, 13ಡಿಯಲ್ಲಿ 512 ಮಂದಿ ಮತದಾನ ಮಾಡಿದ್ದು ಶೇ. 58.51 ಮತದಾನವಾಗಿದೆ. ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮ.ಸಂ.13ರಲ್ಲಿ ಒಟ್ಟು 629 ಮಂದಿ ಮತದಾನ ಮಾಡಿದ್ದು ಶೇ. 74, 13ಬಿಯಲ್ಲಿ ಒಟ್ಟು 561 ಮಂದಿ ಮತದಾನ ಮಾಡಿದ್ದು ಶೇ. 67.84 ಮತದಾನವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next