ಬೆಂಗಳೂರು: ಕಾದಂಬರಿ ಬರೆಯುವ ಮತ್ತು ಓದುವ ವ್ಯವದಾನ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಅಮರೇಂದ್ರ ಹೊಲ್ಲಂಬಳ್ಳಿ ಅವರ “ಕಾಯ’ ಕಾದಂಬರಿ ವಿಶಿಷ್ಟ ಓದಿನ ಅನುಭವ ನೀಡುತ್ತದೆ ಎಂದು ಲೇಖಕ ಡಾ.ನಟರಾಜ ಹುಳಿಯಾರ್ ಬಣ್ಣಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಸದ್ಭಾವನಾ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಅಮರೇಂದ್ರ ಹೊಲ್ಲಂಬಳ್ಳಿ ಅವರ “ಕಾಯ’ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಾದಂಬರಿ ಸಮಾಜಶಾಸ್ತ್ರವು ಅಲ್ಲ, ಆತ್ಮರಿಚರಿತ್ರೆಯೂ ಅಲ್ಲ. ಹೀಗಾಗಿ, ಕಾದಂಬರಿಕಾರ ನಂಬಿಕಸ್ಥನಾಗಿ ಪಾತ್ರಗಳನ್ನು ಹೆಣೆಯಬೇಕು ಎಂದು ಹೇಳಿದರು.
ತೃತೀಯಲಿಂಗಿಗಳ ಸಂಬಂಧ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ ವೇಳೆಯೇ ಆ ಜೀವಗಳ ಸುತ್ತ ಹೆಣೆದ ಕಾದಂಬರಿ ಈಗ ಬಿಡುಗಡೆಯಾಗಿರುವುದು ಸಂತೋಷ ಪಡುವಂತಹ ವಿಚಾರ. ತಂರಗ ಪತ್ರಿಕೆಯಲ್ಲಿ ಪ್ರಕಟವಾದ ನಂತರ ಇದು ಪುಸ್ತಕ ರೂಪದಲ್ಲಿ ಓದುಗರ ಕೈಸೇರುತ್ತಿದೆ.ಲಿಂಗಾತೀತರ ಬಗ್ಗೆ ಉತ್ತಮವಾದ ಚರ್ಚೆಯನ್ನು ಈ ಕಾದಂಬರಿ ಹುಟ್ಟು ಹಾಕುತ್ತದೆ ಎಂದು ಪ್ರಶಂಸಿಸಿದರು.
ಅಧ್ಯಾಪಕ ವರ್ಗ ಕೂಡ ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಕಟ್ಟುವಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಖುಷಿ ಪಡುವ ಸಂಗತಿಯಾಗಿದೆ.ಇದರ ಜತೆಗೆ ವಿದ್ಯಾರ್ಥಿ ಸಮುದಾಯವನ್ನು ಸಾಹಿತ್ಯ ರಚನೆಯತ್ತ ಸೆಳೆಯುತ್ತಿರುವುದು ಕೂಡ ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಚಿತ್ರ ನಿರ್ದೇಶಕ ಬಿ.ಎಂ.ಗಿರಿರಾಜ್ ಮಾತನಾಡಿ, ತೃತೀಯಲಿಂಗಿಗಳ ವಿಚಾರದಲ್ಲಿ ಈ ಕಾದಂಬರಿ ಅದ್ಭುತ ಪ್ರಯೋಗವಾಗಿದೆ.ಕಾದಂಬರಿಕಾರರು ಕೂಡ ಅತ್ಯಂತ ಸರಳ ಭಾಷೆಯಲ್ಲಿ ಸಂಭಾಷಣೆಯನ್ನು ಕಟ್ಟಿಕೊಟ್ಟಿದ್ದಾರೆ. ಹೀಗಾಗಿ ಕೊನೆಯ ಹಂತದವರೆಗೂ ಓದುಗರನ್ನು ಹಿಡಿದಿಡುತ್ತದೆ ಎಂದು ಶ್ಲಾ ಸಿದರು.
ಲೇಖಕ ಡಾ.ಬಿ.ಸಿ.ನಾಗೇಂದ್ರ ಮಾತನಾಡಿ, ಮೊಬೈಲ್ ಸಂಸ್ಕೃತಿಯಲ್ಲಿ ಮುಳಗಿರುವ ಇತ್ತೀಚಿನ ದಿನಗಳಲ್ಲಿ ಓದುವ ಸಂಪ್ರದಾಯ ಕಡಿಮೆಯಾಗುತ್ತಿದೆ.ಕಾಯ ದಂತಹ ಕಾದಂಬರಿಗಳು ಮತ್ತಷ್ಟು ರಚನೆಯಾಗುವ ಮೂಲಕ ಓದುಗರನ್ನು ಸೃಷ್ಟಿಸಲಿ ಎಂದು ಆಶಿಸಿದರು.
ಲೇಖಕ ಬೇಲೂರು ರಘುನಂದನ್, ಜಾನಪದ ವಿದ್ವಾಂಸ ಡಾ.ಸಣ್ಣರಾಮ,ಸದ್ಭವನಾ ಪ್ರತಿಷ್ಠಾನದ ಎಂ.ಪ್ರಕಾಶಮೂರ್ತಿ, ಆರ್.ರಾಮಲಿಂಗಪ್ಪ ಶೆಟ್ಟಿ, ಅಮರೇಂದ್ರ ಹೊಲ್ಲಂಬಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.