ಕೌಮಾರ್ಯ, ಯೌವ್ವನ, ವಾರ್ಧಕ್ಯ ಇವೆಲ್ಲವೂ ಸ್ಥಿತ್ಯಂತರ. ಅವಸ್ಥಾಬೇಧವಷ್ಟೆ. ದೇಹಾಂತರಪ್ರಾಪ್ತಿ ಅವಸ್ಥಾಂತರವಲ್ಲ, ಸ್ಥಿತ್ಯಂತರ. ಕೌಮಾರ್ಯ, ಯೌವ್ವನದಲ್ಲಿ ಬದಲಾವಣೆಯಾಗುವಾಗ ದೇಹಕ್ಕೂ ಆತ್ಮಕ್ಕೂ ಇರುವ ಸಂಬಂಧದಲ್ಲಿ ವ್ಯತ್ಯಾಸವಾಗುವುದಿಲ್ಲ. ಯೌವ್ವನದಲ್ಲಿ ದೇಹಕ್ಕೂ ಆತ್ಮಕ್ಕೂ ಇರುವ ಸಂಬಂಧವೇ ವೃದ್ಧಾಪ್ಯದಲ್ಲಿಯೂ ದೇಹಕ್ಕೂ ಆತ್ಮಕ್ಕೂ ಇರುತ್ತದೆ. ದೇಹ ನಾಶವಾದಾಗ ನಷ್ಟವಾದಂತಾಗುತ್ತದೆಯಲ್ಲ? ಈಗ ಒಂದು ದೇಹ ಇಲ್ಲವೆಂದಾದರೆ ಇನ್ನೊಂದು ದಿನ ಇನ್ನೊಂದು ದೇಹದಲ್ಲಿರುತ್ತಾರೆ. ಕೌಮಾರ್ಯ, ವಾರ್ಧಕ್ಯದಲ್ಲಿ ಸಾಯುವುದಿಲ್ಲ. ಆದರೆ ದೇಹಾಂತರದಲ್ಲಿ (ಸಾಯುವಾಗ) “ಇಲ್ಲ’ ಎಂದಾಗುತ್ತಾರಲ್ಲ? ಆತ್ಮವೆಂಬುದನ್ನು ಒಪ್ಪದೆ ಇದ್ದರೆ ಈ ಉತ್ತರ ಲಾಗುವಾಗದು. ಕೌಮಾರ್ಯದಿಂದ ಯೌವ್ವನಕ್ಕೆ ಬಂದಾಗಿದೆ. ಇಲ್ಲಿ “ನಾನು’ ಎಂಬ ಅನುಭವ ಏಕರೂಪವಾಗಿದೆ. ಆಗ ಆತ್ಮನ ಅಸ್ತಿತ್ವವನ್ನು ಒಪ್ಪಿದಂತಾಗುತ್ತದೆ. ಯೌವ್ವನದಲ್ಲಿ, ದೇಹಾಂತರದಲ್ಲಿಯೂ ಈಕ್ಷಿತನು (ಸಾಕ್ಷಿ) ಇವನೇ. ದೇಹಕ್ಕೆ ಕೌಮಾರ್ಯ ಬಂದರೂ ಆತ್ಮನ ಅನುಭವಕ್ಕೆ ಬರುತ್ತದೆ. ಮೃತ ಶರೀರದಲ್ಲಿ ಈ ಅನುಭವವಿಲ್ಲ. ಮರಣಾದಿಗಳ ಅನುಭವ ಶವಕ್ಕೆ ಬರುವುದಿಲ್ಲ. ಇಂದ್ರಿಯಗಳು ಹೋದದ್ದರಿಂದ ಮರಣಾನುಭವ ಶರೀರಕ್ಕೆ ಬರಲಿಲ್ಲ. “ಅಹಂ ಮನುಷ್ಯಃ’ ಎಂಬ ಉಕ್ತಿ ಇದೆ. ಇಂದ್ರಿಯಗಳನ್ನೇ ಆತ್ಮ ಎನ್ನುವುದಾದರೆ ಇಂದ್ರಿಯಗಳಿಗೆ ಯಾವುದೇ ಅನುಭವವಾಗುವುದಿಲ್ಲ. ಆದ್ದರಿಂದ ಅನುಭವವಾಗುವುದು ಆತ್ಮನಿಗೇ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811