Advertisement

Belagavi; ಸುವರ್ಣಸೌಧದಲ್ಲಿನ ಅನುಭವ ಮಂಟಪ ತೈಲಚಿತ್ರ ಕೃತಿಚೌರ್ಯ?

03:32 PM Dec 11, 2024 | Team Udayavani |

ಕಲಬುರಗಿ: ಬೆಳಗಾವಿ ಸುವರ್ಣ ಸೌಧದಲ್ಲಿ ಎರಡು ದಿನಗಳ ಹಿಂದೆ ಅಳವಡಿಕೆ ಮಾಡಲಾಗಿರುವ ಅನುಭವ ಮಂಟಪದ ತೈಲವರ್ಣ ಕಲಾಕೃತಿ ನಕಲಿಯಾಗಿದ್ದು ( ಕೃತಿಚೌರ್ಯ) ಅದನ್ನು ತೆರವುಗೊಳಿಸುವಂತೆ ಹಿರಿಯ ಚಿತ್ರಕಲಾವಿದರು ಆಗ್ರಹಿಸಿದ್ದಾರೆ.

Advertisement

ಅನುಭವ ಮಂಟಪದ ಮೂಲ ಕೃತಿ ನಾಡಿನ ಶ್ರೇಷ್ಠ ಕಲಾವಿದ, ನಾಡೋಜ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತ ಡಾ. ಜೆ.ಎಸ್. ಖಂಡೇರಾವ್ ಅವರದ್ದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಿದ್ದ ಮೇಲೂ ಕೃತಿಚೌರ್ಯ ಮಾಡಿ ಅಳವಡಿಸಿರುವುದು ಕಕ ಭಾಗದ ಕಲಾವಿದರಿಗೆ ಅದರಲ್ಲೂ ಡಾ. ಜೆ.ಎಸ್. ಖಂಡೇರಾವ್ ಅವರಿಗೆ ದೊಡ್ಡ ಅನ್ಯಾಯ ಮಾಡಿದಂತಾಗಿದೆ ಎಂದು ಹಿರಿಯ ಕಲಾವಿದರಾದ ಮೋಹನ್ ಸೀತನೂರ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ಬಸವರಾಜ ಎಲ್ ಜಾನೆ, ಹಿರಿಯ ಚಿತ್ರಕಲಾವಿದರಾದ ಮಾನಯ್ಯ ಬಡಿಗೇರ, ವಿ.ಬಿ. ಬಿರಾದಾರ ಹಾಗೂ ಖ್ಯಾತ ವಾಸ್ತುಶಿಲ್ಪಿ ಬಸವರಾಜ ಖಂಡೇರಾವ್ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾಕೃತಿ ಅಳವಡಿಕೆಗೆ ವಿರೋಧವಿಲ್ಲ. ಆದರೆ ಮೂಲಕೃತಿಗಾರರ ಗಮನಕ್ಕೆ ತರದೇ ನಕಲು ಕಲಾಕೃತಿ ಅಳವಡಿಕೆ ಮಾಡಿರುವುದು ಯಾವ ನ್ಯಾಯ? ಹೀಗಾಗಿ ಕಾನೂನು ಹೋರಾಟ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ತಿಳಿಸಿದರು.

ಖಂಡೇರಾವ್ ಅವರ ಜೀವ ಮಾನದ ಶ್ರೇಷ್ಠ ಕಲಾಕೃತಿ ಇದಾಗಿದ್ದು, ಎರಡುವರೆ ವರ್ಷ ಸಮಯ ತೆಗೆದುಕೊಂಡು ಪ್ರತಿಯೊಂದು ಪಾತ್ರಕ್ಕೆ ಜೀವ ತುಂಬಿದ್ದಾರೆ. ಕಲಾಕೃತಿ ಅಳವಡಿಕೆ ‌ಮುನ್ನ ಕೊನೆ ಪಕ್ಷ ಒಪ್ಪಿಗೆ ಇಲ್ಲವೇ ಅಭಿಪ್ರಾಯ ಪಡೆಯಬೇಕಿತ್ತು. ಪ್ರಮುಖವಾಗಿ ಕಲಾಕೃತಿ ಅಳವಡಿಕೆ ಮುನ್ನ ಹಿರಿಯ ಚಿತ್ರ ಕಲಾವಿದರ ಸಮಿತಿ ರಚಿಸಲಾಗಿ ಚರ್ಚಿಸಿ ಕಲಾಕ್ಷೇತ್ರದ ಒಮ್ಮತದ ಮೇರೆಗೆ ಅಳವಡಿಸಬೇಕಿತ್ತು. ಹೀಗಾಗಿ ಸಭಾಧ್ಯಕ್ಷರಿಗೆ ದೂರು ಸಹ ಸಲ್ಲಿಸಲಾಗುವುದು ಎಂದರು.

Advertisement

ಸಂಸತ್ತಿನಲ್ಲಿ ಅಳವಡಿಕೆ ಯತ್ನ
ಈ ಹಿಂದೆ ಸಂಸತ್ತಿನಲ್ಲಿ ಬಸವಣ್ಣನವರ ಪುತ್ಥಳಿ ಅನಾವರಣ ಸಂದರ್ಭದಲ್ಲಿ ಡಾ. ಜೆ.ಎಸ್.‌ಖಂಡೇರಾವ್ ಅವರ ರಚಿತ ಅನುಭವ ಮಂಟಪದ ಚಿಕ್ಕದಾದ ಕಲಾಕೃತಿ ಪ್ರದರ್ಶನಕ್ಕೆ ಇಡಲಾಗಿತ್ತು.‌ಇದನ್ನು ಕಂಡ ಅಂದಿನ ರಾಷ್ಟ್ರಪತಿ ಡಾ.‌ಎ.ಪಿ.ಜೆ ಅಬ್ದುಲ್ ಕಲಾಂ‌ ತದೇಕಚಿತ್ತದಿಂದ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.‌ ತದನಂತರ ಶರಣಬಸವೇಶ್ವರರ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಡಾ. ಶರಣ ಬಸವಪ್ಪ ಅಪ್ಪ ಅವರು ಇದೇ ತೆರನಾಗಿ ದೊಡ್ಡದಾದ ಕಲಾಕೃತಿ ರಚಿಸುವಂತೆ ಹೇಳಿದ್ದರು.‌ ಅದರಂತೆ ಕಲಾಕೃತಿ ರಚಿಸಲಾಗಿದೆ. ಆದರೆ ಅಪರೂಪದ ಕಲಾಕೃತಿ ಸಂಸತ್ತಿನಲ್ಲಿ ಅಳವಡಿಸಲು ಸಭಾಧ್ಯಕ್ಷರಿಗೆ ಮನವಿ ಸಲಿಸಲಾಗಿತ್ತು. ಆಗ ಸಚಿವರಾಗಿದ್ದ ಸುರೇಶ ಅಂಗಡಿ ಹಾಗೂ ಸಂಸದರಾಗಿದ್ದ ಭಗವಂತ ಖೂಬಾ, ಡಾ. ಉಮೇಶ ಜಾಧವ್ ಹಾಜರಿದ್ದು, ಪ್ರಯತ್ನಿಸಿದ್ದರು. ತದನಂತರ ಕೋವಿಡ್ ಬಂದ ಮೇಲೆ ಆಳವಡಿಕೆ ಕಾರ್ಯ ಸ್ಥಗಿತಗೊಂಡಿತು ಎಂದು ಖ್ಯಾತ ವಾಸ್ತುಶಿಲ್ಪಿ ಬಸವರಾಜ ಖಂಡೇರಾವ್ ಈ ಸಂದರ್ಭದಲ್ಲಿ ವಿವರಣೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next