Advertisement

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

07:08 PM Nov 29, 2024 | Team Udayavani |

ಕಲಬುರಗಿ: ವಿಶ್ವದ ಮೊದಲ ಸಂಸತ್ತು ಆಗಿರುವ ಬೀದರ್ ಜಿಲ್ಲೆಯ ಬಸವ ಕಲ್ಯಾಣದ ಅನುಭವ ಮಂಟಪದ ಜಾಗ ಅತಿಕ್ರಮಣವಾಗಿರುವುದನ್ನು ಮರಳಿ ಪಡೆಯಲು ಕಲ್ಯಾಣ ಕರ್ನಾಟಕ ಭಾಗದ ಮಠಾಧೀಶರು ಹೋರಾಟಕ್ಕೆ ಮುಂದಾಗಿದ್ದಾರೆ.

Advertisement

ಬಸವಕಲ್ಯಾಣದ ಈಗಿನ ಆಕ್ರಮಿತ ಪೀರ ಪಾಷಾ ಬಂಗ್ಲಾ ಅಂದಿನ ಬಸವಣ್ಣನವರ 12ನೇ ಶತಮಾನದ ಅನುಭವ ಮಂಟಪ ಆಗಿದೆ. ಹೀಗಾಗಿ ಅತಿಕ್ರಮಣ ಆಗಿರುವುದನ್ನು ಮರಳಿ ಪಡೆಯಲು ಡಿಸೆಂಬರ್ 10 ರಂದು ನಾಡಿನ ವಿವಿಧ ಮಠಾಧೀಶರ ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ, ರಾಜೇಶ್ವರ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹಾಗೂ ಇತರ ಸ್ವಾಮೀಜಿಯವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಗತ್ತಿನ ಮೊದಲ ಸಂಸತ್ತು, ಜಾತಿ, ಮತ, ಪಂಥ ಹಾಗೂ ಹೆಣ್ಣು-ಗಂಡು ಎಂಬ ಬೇಧ ಭಾವಗಳೆಲ್ಲವನ್ನು ತೊಡೆದಿದ್ದ 12 ನೇ ಶತಮಾನದಲ್ಲಿ ಅಣ್ಣ ಬಸವಣ್ಣವರು ಮತ್ತು 770 ಅಮರಗಣಂಗಳ ಕೂಡಿ ಪ್ರಾರಂಭ ಮಾಡಿದ ಕ್ಷೇತ್ರವೇ ಅನುಭವ ಮಂಟಪ ಈಗಿನ ಪೀರ ಪಾಷಾ ಬಂಗ್ಲಾ ಆಗಿ ಅತಿಕ್ರಮಣವಾಗಿದೆ. ಮೂಲ ಅನುಭವ ಮಂಟಪ ಪ್ರತಿಯೊಬ್ಬ ಭಾರತೀಯನ ಸ್ವತ್ತಾಗಿದೆ. ಅದನ್ನು ಮರಳಿ ಪಡೆದು ಬಸವಣ್ಣನವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಲು ಮುಂದಿನ ಪೀಳಿಗೆಗೆ ಅದನ್ನು ಸಂರಕ್ಷಿಸಿ ಕಾಪಾಡುವುದು ನಮ್ಮೇಲ್ಲರ ಆಧ್ಯ ಕರ್ತವ್ಯವಾಗಬೇಕು ಎಂದು ವಿವರಣೆ ನೀಡಿದರು.

ಭಾರತದ ದೇಶದಲ್ಲಿ ಮೊಘಲರ ಆಳ್ವಿಕೆ ಯಾವಾಗ ಪ್ರಾರಂಭವಾಯಿತೋ ಅವತ್ತಿನಿಂದ ದೇಶದಲ್ಲಿ ಹಿಂದೂ ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಲಾಗಿದೆ. ಅದೇ ತೆರನಾಗಿ ಅನುಭಾವ ಮಂಟಪ ಸಹ ಬಿಟ್ಟಿಲ್ಲ. ಪ್ರಸಾದ ಕಟ್ಟೆ, ಪರುಷಕಟ್ಟೆ ಜಾಗ ಅತಿಕ್ರಮಣವಾಗಿ ಪೀರ ಪಾಷಾ ಬಂಗ್ಲಾ ನಿರ್ಮಿಸಲಾಗಿದೆ. ಈ ಜಾಗ ಈಗ ವಕ್ಫ ಎಂಬುದಾಗಿ ದಾಖಲಿಸಲಾಗಿದೆ. ಈ ಕುರಿತು ಮಠಾಧೀಶರು ಹಾಗೂ ಹಿಂದೂಗಳು ಈ ಹಿಂದೆ ಜಾಗ ಮರಳಿಸುವಂತೆ ಆಗ್ರಹಿಸಿದ್ದರೂ ಸರ್ಕಾರ ಕಿವಿಗೆ ಹಾಕಿಕೊಳ್ಳದ ಹಿನ್ನೆಲೆಯಲ್ಲಿ ಈಗ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಲಾಗಿದೆ. ದೆಹಲಿ ಚಲೋದಲ್ಲಿ ೧೦೦ ಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸುವರು ಎಂದು ಸ್ವಾಮೀಜಿಯವರು ಸ್ಪಷ್ಠಪಡಿಸಿದರು.

ಹೈದ್ರಾಬಾದ್ ನಿಜಾಮರ ಆಳ್ವಿಕೆಯಲ್ಲಿ ನಿಜಾಮರ ವಶವಾದ ನಮ್ಮ ಅನುಭವ ಮಂಟಪ ಇವತ್ತಿನ ಪೀರ ಪಾಷಾ ಬಂಗ್ಲಾ ಜಾಗ ಮರಳಿ ಪಡೆಯಲು ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ವಹಿಸಿ ಮೂಲ ಅನುಭವ ಮಂಟಪ ಪುನ: ಸ್ಥಾಪಿಸಬೇಕು. ದೆಹಲಿ ಚಲೋ ಸಂದರ್ಭದಲ್ಲಿ ಪ್ರಧಾನಮಂತ್ರಿ ಹಾಗೂ ಕೇಂದ್ರದ ಸಚಿವರು ಜತೆಗೆ ಜಗದಾಂಬಿಕಾ ಪಾಲ್ ನೇತೃತ್ವದ ಸಂಸತ್ತಿನ ಜಂಟಿ ಸಮಿತಿಗೂ ಇದನ್ನು ಗಮನಕ್ಕೆ ತರಲಾಗುವುದು ಎಂದು ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

Advertisement

ಅತಿಕ್ರಮಣವಾಗಿರುವ ಬಸವಕಲ್ಯಾಣದ ಅನುಭವ ಮಂಟಪದ ಜಾಗವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಬಸವಾಭಿಮಾನಿಗಳು ಅದರಲ್ಲೂ ಬಸವಣ್ಣನವರ ಬಗ್ಗೆ ಉದ್ದುದ್ಧ ಭಾಷಣ ಮಾಡುವರು ಧ್ವನಿ ಎತ್ತಲಿ ಜತೆಗೆ ಹೋರಾಟಕ್ಕೆ ಕೈ ಜೋಡಿಸಲಿ. ಜನಪ್ರತಿನಿಧಿಗಳು ಸಹ ಬಾಯಿ ತೆರೆದು ಈ ಬಗ್ಗೆ ಮಾತನಾಡಲಿ ಎಂದರು.
500 ವರ್ಷಗಳ ಕಾಲ ಹೋರಾಟ ಮಾಡಿ ರಾಮಮಂದಿರ ನಿರ್ಮಾಣ ಮಾಡಲಾಗಿರುವುದು ನಮ್ಮ ಕಣ್ಮುಂದೆವಿದೆ. ಒಂದು ವೇಳೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡು ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. ಸರ್ಕಾರಗಳು ಕಾನೂನು ಸಂಘರ್ಷಕ್ಕೆ ಅವಕಾಶ ಕೊಡದೇ ಅತಿಕ್ರಮಣವಾಗಿರುವ ಅನುಭವ ಮಂಟಪದ ಜಾಗ ಮರಳಿಸಬೇಕೆಂದರು.

ಪಾಳಾ ಗುರುಮೂರ್ತಿ ಶಿವಾಚಾರ್ಯರು, ಬೇಮಳಖೇಡ ಚಂದ್ರಶೇಖರ ಶಿವಾಚಾರ್ಯರು, ಬಸವಕಲ್ಯಾಣ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಸದಲಾಪುರ ಸಿದ್ಧಲಿಂಗ ಶಿವಾಚಾರ್ಯರು, ಸಿಂಧನಕೇರಾ ಹೊನ್ನಲಿಂಗ ಮಹಾಸ್ವಾಮಿಗಳು, ಕಮಠಾಣ ರಾಚೋಟೇಶ್ವರ ಶಿವಾಚಾರ್ಯರು, ಖಟಕಚಿಂಚೋಳಿಯ ಬಸವಲಿಂಗ ಶಿವಾಚಾರ್ಯರು, ಹೋರಾಟಗಾರ ಎಂ.ಎಸ್.‌ಪಾಟೀಲ್ ಉಪಸ್ಥಿತರಿದ್ದರು.

ಇದನ್ನೂ ಓದಿ: Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Advertisement

Udayavani is now on Telegram. Click here to join our channel and stay updated with the latest news.

Next