Advertisement
ಕಾಟಿಪಳ್ಳ ಸರಕಾರಿ ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಜೀವನ್, ಜಯೇಶ್ ಮತ್ತು ಜಿತೇಶ್ ಈ ಸಾಧಕ ವಿದ್ಯಾರ್ಥಿಗಳು. ಮೂವರೂ ಕಾಟಿಪಳ್ಳ ಐದನೇ ಬ್ಲಾಕ್ ನಿವಾಸಿಗಳು. ಜೀವನ್ ಮತ್ತು ಜಯೇಶ್ ತಲಾ 541 ಅಂಕ ಪಡೆದಿದ್ದರೆ ಜಿತೇಶ್ 518 ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಮೂವರಿಗೂ ಭಾಗಶಃ ಅಂಧತ್ವ ಇದೆ, ಆದರೆ ಸಾಧನೆಗೆ ದೃಷ್ಟಿ ಸಮಸ್ಯೆ ಅಡ್ಡಿಯಲ್ಲ ಎಂಬುದನ್ನು ಶ್ರುತಪಡಿಸಿದ್ದಾರೆ. ಈ ಮಕ್ಕಳ ತಾಯಿ ಊರ್ಮಿಳಾ (ದೂರವಾಣಿ: 8904810474) ಮನೆಯಲ್ಲಿ ಬೀಡಿ ಕಟ್ಟುತ್ತಾರೆ, ತಂದೆ ವಿಶ್ವನಾಥ ಶೆಟ್ಟಿಗಾರ್ ಕೂಲಿ ಕೆಲಸ ಮಾಡುತ್ತಾರೆ.
ಇವರೊಂದಿಗೆ ಇದೇ ಶಾಲೆಯ ಇನ್ನೋರ್ವ ವಿದ್ಯಾರ್ಥಿನಿ, ಬಡ ಕುಟುಂಬದ ಹಿನ್ನೆಲೆಯ ಸುಶ್ಮಿತಾ 591 ಅಂಕ ಗಳಿಸಿದ್ದಾಳೆ. ನಾಲ್ವರು ವಿದ್ಯಾರ್ಥಿಗಳೂ ಪ್ರತಿಭಾವಂತರು. ಮನೆಯಲ್ಲಿ ತೀವ್ರ ಆರ್ಥಿಕ ಸಮಸ್ಯೆಯಿಂದಾಗಿ ವಿದ್ಯಾಭ್ಯಾಸ ಮುಂದುವರಿಸಲಾಗದೆ ಶಿಕ್ಷಣ ಮೊಟಕುಗೊಳಿಸುವ ನಿರ್ಧಾರಕ್ಕೆ ಬಂದಿದ್ದರು. ಆದರೆ ವಿದ್ಯಾರ್ಥಿಗಳ ಪ್ರತಿಭೆ ಗಮನಿಸಿದ ಸ್ಥಳೀಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯು ಕಳೆದ ಸುಮಾರು ನಾಲ್ಕು ವರ್ಷದಿಂದ ಈ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಬೇಕಾಗುವ ಎಲ್ಲ ವ್ಯವಸ್ಥೆಗಳನ್ನು ಉಚಿತವಾಗಿ ನೀಡಿತ್ತು. ವಿದ್ಯಾರ್ಥಿಗಳ ಸಾಧನೆಯಿಂದ ಖುಷಿಯಾಗಿದೆ, ಮುಂದೆಯೂ ಅವರಿಗೆ ಉಚಿತ ವಿದ್ಯಾಭ್ಯಾಸಕ್ಕೆ ವ್ಯವಸ್ಥೆಗೊಳಿಸುವುದಾಗಿ ಸಮಿತಿ ಅಧ್ಯಕ್ಷ ದುರ್ಗಾಪ್ರಸಾದ್ ಹೊಳ್ಳ ತಿಳಿಸಿದ್ದಾರೆ.
Related Articles
ಇನ್ನೂ ಹೆಚ್ಚು ಅಂಕ ಬರುವ ನಿರೀಕ್ಷೆ ಇತ್ತು, ಈಗ ಲಭಿಸಿರುವ ಅಂಕಗಳಿಂದ ಸಮಾಧಾನ ಆಗಿಲ್ಲ. ಸಹಾಯ ಪಡೆದು ಪರೀಕ್ಷೆ ಬರೆಯುವ ಅವಕಾಶ ಇದ್ದರೂ ಸ್ವತಃ ಉತ್ತರಿಸಬೇಕು ಎಂದು ಬಯಸಿ ಹಾಗೆಯೇ ಮಾಡಿದೆವು. ಮುಂದೆ ಮೂವರೂ ವಾಣಿಜ್ಯ ವಿಷಯದಲ್ಲಿ ವಿದ್ಯಾಭ್ಯಾಸ ಮುಂದುವರಿಸುತ್ತೇವೆ.
– ಜೀವನ್
Advertisement