ಬೆಂಗಳೂರು:ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಹೆಚ್.ಎನ್. ಅನಂತಕುಮಾರ್(59ವರ್ಷ) ಸೋಮವಾರ ವಿಧಿವಶರಾಗಿದ್ದು, ಇಂದು ಮನೆಯಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಬೆಳಗ್ಗೆ 7ಗಂಟೆಯಿಂದ ಬಿಜೆಪಿ ಕಚೇರಿಯಲ್ಲಿ, ನಂತರ 10ಗಂಟೆಗೆ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
1959 ಜುಲೈ 22ರಂದು ಬೆಂಗಳೂರಿನಲ್ಲಿ ಅನಂತಕುಮಾರ್ ಜನನ. ತಂದೆ ನಾರಾಯಣ ಶಾಸ್ತ್ರಿ, ತಾಯಿ ಗಿರಿಜಾ ಶಾಸ್ತ್ರಿ. ಹುಬ್ಬಳ್ಳಿಯ ಕೆಎಸ್ ಕಲಾ ಕಾಲೇಜಿನಲ್ಲಿ ಬಿಎ ಪದವಿ ಪಡೆದಿದ್ದರು.ಜೆಎಸ್ ಎಸ್ ವಿವಿಯಲ್ಲಿ ಕಾನೂನು ಪದವಿ ಪಡೆದಿದ್ದ ಅನಂತ್ ಕುಮಾರ್ ಅವರು ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.
ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ಅನಂತಕುಮಾರ್ ಬಿಜೆಪಿಯ ಅಗ್ರಗಣ್ಯ ನಾಯಕರಲ್ಲಿ ಒಬ್ಬರಾಗಿದ್ದರು. 1996ರಲ್ಲಿ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ 1996ರಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು. ಬಳಿಕ ವಾಜಪೇಯಿ ಸರ್ಕಾರದಲ್ಲಿ ವಿಮಾನಯಾನ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ನಾಳೆ ಚಾಮರಾಜಪೇಟೆಯ ಹಿಂದೂರುದ್ರಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅನಂತಕುಮಾರ್ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ವರದಿ ಹೇಳಿದೆ. ಅನಂತಕುಮಾರ್, ಡಾ.ತೇಜಸ್ವಿನಿ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ಐಶ್ವರ್ಯ ಮತ್ತು ವಿಜೇತ.
ಸಂಜೆ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನ:ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಬೆಂಗಳೂರಿಗೆ ಆಗಮಿಸಲಿದ್ದು, ಅನಂತಕುಮಾರ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಾಲಾ ಕಾಲೇಜುಗಳಿಗೆ ರಜೆ :
ಸಚಿವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸರಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಿಗೆ ಜೊತೆಗೆ ಸರಕಾರಿ ಕಚೇರಿಗಳಿಗೂ ಒಂದು ದಿನಗಳ ರಜೆಯನ್ನು ಘೋಷಿಸಿದ್ದು ಮೂರು ದಿನಗಳ ಕಾಲ ಶೋಕಾಚರಣೆಯನ್ನು ನಡೆಸಲಿದೆ.