Advertisement

ಅನುದಾನ ಕುರಿತು ಅಸಮಾಧಾನ

11:57 AM Mar 04, 2018 | Team Udayavani |

ಬೆಂಗಳೂರು: ಬಿಬಿಎಂಪಿ 20108-19ನೇ ಸಾಲಿನ ಬಜೆಟ್‌ನಲ್ಲಿ ವಾರ್ಡ್‌ಗಳಿಗೆ ಮೀಸಲಿರಿಸಿದ ಅನುದಾನದಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಪಾಲಿಕೆಯ ವಿರೋಧ ಪಕ್ಷ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದರು. 

Advertisement

ಬಿಬಿಎಂಪಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೂರದೃಷ್ಟಿಯಿಲ್ಲದ ಕಳಪೆ ಬಜೆಟ್‌ ಅನ್ನು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಂಡಿಸಿದೆ. ಜತೆಗೆ ಬಜೆಟ್‌ನಲ್ಲಿ ಮೀಸಲಿರಿಸಿರುವ ವಿಶೇಷ ಅನುದಾನದಲ್ಲಿಯೂ ಅತಿ ಹೆಚ್ಚು ಸದಸ್ಯರಿರುವ ಬಿಜೆಪಿಗೆ ತಾರತಮ್ಯ ಮಾಡಿದ್ದಾರೆ ಎಂದು ದೂರಿದರು. 

ವಿಶೇಷ ಅನುದಾನದಡಿಯಲ್ಲಿ ಒಟ್ಟು 76 ಕಾಂಗ್ರೆಸ್‌ ಸದಸ್ಯರಿಗೆ 271.40 ಕೋಟಿ ರೂ. ಮೀಸಲಿಡಲಾಗಿದೆ. ಅದೇ ರೀತಿ ಮೈತ್ರಿ ಪಕ್ಷ ಜೆಡಿಎಸ್‌ನ 14 ಸದಸ್ಯರಿಗೆ 158 ಕೋಟಿ ರೂ. ಹಾಗೂ ಕಾಂಗ್ರೆಸ್‌ ಬೆಂಬಲಿಸಿದ 7 ಜನ ಪಕ್ಷೇತರರಿಗೆ 83 ಕೋಟಿ ರೂ. ಮೀಸಲಿಡಲಾಗಿದೆ. ಆದರೆ, ಪಾಲಿಕೆಯಲ್ಲಿ 101 ಸದಸ್ಯರಿರುವ ಬಿಜೆಪಿಗೆ ಮಾತ್ರ 173.94 ಕೋಟಿ ರೂ. ಮೀಸಲಿಟ್ಟಿರುವುದು ಸಾಮಾಜಿಕ ನ್ಯಾಯವೇ? ಎಂದು ಟೀಕಿಸಿದರು. 

ಬಜೆಟ್‌ ಹೊರಗೆ ಥಳಕು, ಒಳಗೆ ಹುಳುಕು ಎಂಬಂತಿದೆ. ಪಾಲಿಕೆಗೆ ಬರುವ ಆದಾಯ 3,300 ಕೋಟಿ ರೂ. ಇದ್ದರೆ, 9325 ಕೋಟಿ ರೂ. ಮೊತ್ತದ ಬಜೆಟ್‌ ಮಂಡನೆ ಮಾಡಿರುವುದು ವಾಸ್ತವಿಕ ಬಜೆಟ್‌ ಆಗುವುದೇ?  ಈ ಹಿಂದೆ ಘೋಷಣೆ ಮಾಡಿದ್ದ ಅನುದಾನವನ್ನೇ ರಾಜ್ಯ ಸರ್ಕಾರ ಬಿಡುಗಡೆ ಮಾಡಿಲ್ಲ. ಆದರೂ ಸರ್ಕಾರದಿಂದ ಅನುದಾನ ನಿರೀಕ್ಷಿಸಿ ಬಜೆಟ್‌ ಮಂಡಿಸಲಾಗಿದೆ ಎಂದು ಟೀಕಿಸಿದರು. 

ಈ ಹಿಂದೆ ಸರ್ಕಾರ 7,300 ಕೋಟಿ ರೂ. ಕೊಡುವುದಾಗಿ ಘೋಷಿಸಿದ್ದು, ಆರ್ಥಿಕ ವರ್ಷ ಮುಗಿಯಲು ಒಂದು ತಿಂಗಳು ಬಾಕಿಯಿದ್ದರೂ 4 ಸಾವಿರ ಕೋಟಿಗೂ ಅಧಿಕ ಅನುದಾನ ಬಂದಿಲ್ಲ. ಜತೆಗೆ ಕಳೆದ ವರ್ಷ ಘೋಷಣೆ ಮಾಡಿದ 2,441 ಕೋಟಿ ಸೇರಿ ಒಟ್ಟು 6,350 ಕೋಟಿ ರೂ. ಬಾಕಿ ಬರಬೇಕಿದೆ.

Advertisement

ಆದರೆ, ಮುಖ್ಯಮಂತ್ರಿಗಳು ರಾಜ್ಯ ಬಜೆಟ್‌ನಲ್ಲಿ ಮಾರ್ಚ್‌ ವೇಳೆಗೆ 7,300 ಕೋಟಿ ವೆಚ್ಚ ಮಾಡುವುದಾಗಿ ಸುಳ್ಳು ಮಾಹಿತಿ ನೀಡಿದ್ದು, ಇದು ವಚನ ಭಷ್ಟ್ರ ಸರ್ಕಾರ ಎಂದು ಟೀಕಿಸಿದರು. ಮೇಯರ್‌ ಸಂಪತ್‌ರಾಜ್‌ ಪ್ರತಿಕ್ರಿಯಿಸಿ, ಆರ್ಥಿಕ ವರ್ಷ ಮುಗಿಯಲು ಒಂದು ತಿಂಗಳು ಬಾಕಿಯಿರುವಾಗಲೇ, ಪೂರ್ಣ ಅನುದಾನ ನೀಡಿಲ್ಲ ಎಂದು ಹೇಳುವುದು ಸರಿಯಲ್ಲ ಎಂದರು.

ಭಿತ್ತಿಪತ್ರ ತೆಗೆಯಿರಿ: “ಬಿಜೆಪಿಯವರು ಬೆಂಗಳೂರು ರಕ್ಷಿಸಿ ಎಂದು ಪಾದಯಾತ್ರೆ ಯಾಕೆ ಮಾಡುತ್ತಿದ್ದಾರೂ ಗೊತ್ತಿಲ್ಲ. ಪಾದಯಾತ್ರೆ ಸಂದರ್ಭದಲ್ಲಿ ಗೋಡೆಗಳ ಮೇಲೆ ಅಂಟಿಸಿದ್ದ ಭಿತ್ತಿಪತ್ರಗಳನ್ನಾದರೂ ತೆರವುಗೊಳಿಸಿದ್ದರೆ ಬೆಂಗಳೂರು ಸುಂದವಾಗುತ್ತಿತ್ತು,’ ಎಂದು ಆಡಳಿತ ಪಕ್ಷ ನಾಯಕ ಎಂ.ಶಿವರಾಜು ವ್ಯಂಗ್ಯವಾಡಿದರು.

ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ನಗರವನ್ನು ಸ್ವತ್ಛ ಹಾಗೂ ಸುಂದರಗೊಳಿಸಲು ಕ್ಲೀನ್‌ ಬೆಂಗಳೂರು ಅಭಿಯಾನ ನಡೆಸುತ್ತಿದ್ದೇವೆ. ಈಗಾಗಲೇ ಹಲವು ಪ್ರದೇಶಗಳನ್ನು ಸುಂದರವಾಗಿಸಿದ್ದೇವೆ. ಅದರಂತೆ ಬಿಜೆಪಿಯವರು ಪಾದಯಾತ್ರೆ ಬದಲಿಗೆ, ಗೋಡೆಗಳ ಮೇಲಿನ ಪೋಸ್ಟರ್‌ಗಳನ್ನು ತೆರವುಗೊಳಿಸಿದ್ದರೆ ನಗರ ಇನ್ನಷ್ಟು ಸುಂದರವಾಗಿ ಕಾಣುತ್ತಿತ್ತು.

ಬಿಜೆಪಿಯವರು ಬಿಡುಗಡೆ ಮಾಡಿದ ಚಾರ್ಜ್‌ಶೀಟ್‌ನಲ್ಲಿ ನೇಪಾಳ ಹಾಗೂ ಮಿಜೋರಾಂನ ರಸ್ತೆ ಗುಂಡಿಗಳು ಹಾಗೂ ಕಸದ ರಾಶಿಯ ಫೋಟೋಗಳನ್ನು ಬಳಸಿ, ಬೆಂಗಳೂರಿನ ಹೆಸರನ್ನು ಹಾಳು ಮಾಡಲು ಮುಂದಾಗಿದ್ದಾರೆ. ಮಂಡೂರಿನಲ್ಲಿ ಕಸದ ಬೆಟ್ಟವನ್ನು ನಿರ್ಮಿಸಿದವರು ಬಿಜೆಪಿಯವರಲ್ಲವೇ? ಇದನ್ನೆಲ್ಲ ಜನರು ಮರೆಯುತ್ತಾರಾ ಎಂದು ಟೀಕಿಸಿದರು.

ಅಪ್ಪನ ಆಣೆ ಮತ್ತು ಅಮ್ಮನ ಆಣೆ: ಈಶಾನ್ಯ ರಾಜ್ಯಗಳು ಕಾಂಗ್ರೆಸ್‌ ಮುಕ್ತವಾಗಿದ್ದು, ಎರಡು ತಿಂಗಳಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಬದಲಿದೆ ಎಂದು ಬಿಜೆಪಿ ಸದಸ್ಯರ ಮಾತಿಗೆ ಉತ್ತರಿಸಿದ ಆಡಳಿತ ಪಕ್ಷ ನಾಯಕ ಎಂ.ಶಿವರಾಜು, “ನಿಮ್ಮಪ್ಪನಾಣೆಗೂ ನೀವು ಅಧಿಕಾರಕ್ಕೆ ಬರುವುದಿಲ್ಲ. ರಾಜ್ಯದಲ್ಲಿ ಮತ್ತೂಮ್ಮೆ ನಾವೇ ಅಧಿಕಾರಕ್ಕೆ ಬರುತ್ತೇವೆ,’ ಎಂದು ಖಾರವಾಗಿ ಹೇಳಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಉಮೇಶ್‌ ಶೆಟ್ಟಿ, “ನಿಮ್ಮ ತಾಯಾಣೆಗೂ ನೀವೂ ಅಧಿಕಾರಕ್ಕೆ ಬರುವುದಿಲ್ಲ’ ಎಂದು ತಿರುಗೇಟು ನೀಡಿದರು. ಈ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಕೂಡಲೇ ಮಧ್ಯ ಪ್ರವೇಶಿಸಿದ ಮೇಯರ್‌, ಇಲ್ಲಿ ಬೆಂಗಳೂರು ಅಭಿವೃದ್ಧಿ ವಿಚಾರಗಳನ್ನು ಮಾತಾಡೋಣ, ಬೇರೆ ವಿಚಾರಗಳು ಬೇಡ ಎಂದು ಎಲ್ಲ ಸದಸ್ಯರನ್ನು ಸಮಾಧಾನಪಡಿಸಿದರು. 

ಜೂನಿಯರ್‌ ಸಿದ್ಧರಾಮಯ್ಯ: ಬಜೆಟ್‌ ಮೇಲಿನ ಚರ್ಚೆ ಆರಂಭಿಸಿದ ವಿಪಕ್ಷ ನಾಯಕ ಪದ್ಮನಾಭರೆಡ್ಡಿ, “ಆಡಳಿತ ಪಕ್ಷದ ನಾಯಕ ಶಿವರಾಜು, “ಜೂನಿಯರ್‌ ಸಿದ್ಧರಾಮಯ್ಯ’ ರೀತಿಯಲ್ಲಿ ವರ್ತಿಸುತ್ತಿದ್ದು, ಸಂಪೂರ್ಣವಾಗಿ ಸಿದ್ದರಾಮಯ್ಯರನ್ನು ಅನುಕರಣೆ ಮಾಡುತ್ತಿದ್ದಾರೆ. ಆದರೆ, ವೈಯಕ್ತಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ನನಗೆ ತುಂಬಾ ಗೌರವ ಇದೆ. ಆದರೆ, ವೈಯಕ್ತಿಕ ಬೇರೆ, ರಾಜಕೀಯ ಬೇರೆ,’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next