Advertisement

ಯುಪಿಎ ಸೋಲಿಗೆ ನಿರುದ್ಯೋಗವೇ ಕಾರಣ

09:27 AM Sep 21, 2017 | |

ಪ್ರಿನ್ಸ್‌ಟನ್‌ (ನ್ಯೂಜೆರ್ಸಿ): “”ನರೇಂದ್ರ ಮೋದಿ ಮತ್ತು ಡೊನಾಲ್ಡ್‌ ಟ್ರಂಪ್‌ ಗೆಲ್ಲಲು ಹಿಂದಿನ ಸರಕಾರಗಳು ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗಾವಕಾಶ ಸೃಷ್ಟಿಸದಿದ್ದುದೇ ಕಾರಣ,” ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. 

Advertisement

ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಪ್ರಿನ್ಸ್‌ಟನ್‌ ವಿಶ್ವವಿದ್ಯಾನಿಲಯದಲ್ಲಿ ಬುಧವಾರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, 2014ರಲ್ಲಿ ಕಾಂಗ್ರೆಸ್‌ ಸೋತದ್ದು ಏಕೆ ಎಂಬುದನ್ನು ವಿಶ್ಲೇಷಣೆ ಮೂಲಕ ವಿವರಣೆ ಕೊಟ್ಟರು. ಆದರೆ, ಇಂದು ಭಾರತದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಕೂಡ ಹೆಚ್ಚಿನ ಉದ್ಯೋಗ ಸೃಷ್ಟಿಸುತ್ತಿಲ್ಲ ಎಂದು ಆರೋಪಿಸಿದರು. 

ಇದೇ ಮೊದಲ ಬಾರಿಗೆ 2014ರಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲಿನ ಹಿಂದಿನ ಕಾರಣಗಳನ್ನು ಬಹಿರಂಗ ಪಡಿಸಿದ ಅವರು, ಆಗ ನಾವು ಮತ್ತು ಇಲ್ಲಿ ಹಿಂದಿನ ಸರಕಾರ ಮಾಡಿದ ತಪ್ಪಿನಿಂದಲೇ ನರೇಂದ್ರ ಮೋದಿ ಮತ್ತು ಡೊನಾಲ್ಡ್‌ ಟ್ರಂಪ್‌ನಂಥವರು ಗೆದ್ದು ಬರಲು ಸಾಧ್ಯವಾಯಿತು ಎಂದು ಪ್ರತಿಪಾದಿಸಿದರು. 

ಯುಪಿಎ ಸರಕಾರ ಉದ್ಯೋಗ ಸೃಷ್ಟಿ ಮಾಡುವಲ್ಲಿ ಎಡವಿದ್ದು ನಿಜ. ಇಂದು ಭಾರತದಲ್ಲಿ ಪ್ರತಿ ದಿನ ಉದ್ಯೋಗಕ್ಕಾಗಿ 30 ಸಾವಿರ ಮಂದಿ ಸಿದ್ಧವಾಗುತ್ತಾರೆ. ಆದರೆ ಪ್ರತಿದಿನ ಸೃಷ್ಟಿಯಾಗುತ್ತಿರುವುದು ಕೇವಲ 500 ಉದ್ಯೋಗಗಳಷ್ಟೇ. ಹೀಗಾಗಿ ಉಳಿದ 29,500 ಮಂದಿ ಉದ್ಯೋಗವಿಲ್ಲದೇ ಅಲೆಯುವಂತಾಗಿದೆ.  ಆದರೆ ಹಿಂದೆ ಇದ್ದ ಯುಪಿಎ ಸರಕಾರವೇ ಪರವಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಾದರೂ ಉದ್ಯೋಗ ಸೃಷ್ಟಿ ಮಾಡಿತ್ತು. ಈಗ ಇಂಥ ಉದ್ಯೋಗಗಳೂ ಸೃಷ್ಟಿಯಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಯಾರ ಮಾತನ್ನೂ ಕೇಳುತ್ತಿಲ್ಲ. ಒಂದು ವೇಳೆ ನೀವು ಉದ್ಯೋಗ ಸೃಷ್ಟಿಸುವಲ್ಲಿ ವಿಫ‌ಲರಾಗಿದ್ದೀರಿ ಎಂದು ಹೇಳಿದರೆ, ಸಿಟ್ಟು ಮಾಡಿಕೊಳ್ಳುತ್ತಾರೆ. ಹೀಗಾಗಿಯೇ ದೇಶದ ಜನ ನರೇಂದ್ರ ಮೋದಿ ಆಡಳಿತದಲ್ಲಿ ನೆಮ್ಮದಿಯಿಂದ ಬಾಳಲು ಸಾಧ್ಯವಾಗುತ್ತಿಲ್ಲ ಎಂದು ಭಾವಿಸುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ ಟೀಕಿಸಿದರು. 

ಇಂಥ ವರ್ತನೆ ಕೇವಲ ಬಿಜೆಪಿಯ ಲ್ಲಷ್ಟೇ ಅಲ್ಲ, ಕಾಂಗ್ರೆಸ್‌ನಲ್ಲೂ ಇದೆ. ಹಿಂದೆ ನಾವು ಜನರ ಸಮಸ್ಯೆಗಳನ್ನು ಕಿವಿಗೊಟ್ಟು ಕೇಳಲೇ ಇಲ್ಲ. ಈಗ ಇದೇ ತಪ್ಪನ್ನು ಬಿಜೆಪಿ ಕೂಡ ಮಾಡುತ್ತಿದೆ. ಮೊದಲು ಆಡಳಿತ ದಲ್ಲಿರುವ ನಾವು ಜನರ ಸಮಸ್ಯೆಗಳನ್ನು ಕೇಳಬೇಕು. ಸಮಸ್ಯೆಗಳನ್ನು ಕೇಳದೇ ಪರಿ ಹಾರ ಮಾಡುತ್ತೇವೆ ಎಂದು ಹೊರಟರೆ ಹೇಗೆ ಎಂದು ಅವರು ಪ್ರಶ್ನಿಸಿದರು.

Advertisement

ಮೇಕ್‌ ಇನ್‌ ಇಂಡಿಯಾ ಇಷ್ಟ
ಈಗಿನ ಸರಕಾರ ಮೇಕ್‌ ಇನ್‌ ಇಂಡಿಯಾ ಘೋಷಣೆ ನನಗೆ ಇಷ್ಟವಾಯ್ತು. ನಿಜವಾಗಿ ಹೇಳಬೇಕೆಂದರೆ ಇದು ಉತ್ತಮ ಯೋಜನೆ. ಇಂದು ನಾನು ಅಧಿಕಾರದಲ್ಲಿದ್ದರೂ ಈ ಯೋಜನೆಯನ್ನು ಜಾರಿಗೆ ತರುತ್ತಿದ್ದೆ. ಆದರೆ ಈ ಯೋಜನೆ ಯಾರಿಗೆ ತಲುಪಬೇಕೋ ಅವರಿಗೆ ತಲುಪುತ್ತಿಲ್ಲ. ಇದು ಕೇವಲ ದೊಡ್ಡ ಉದ್ಯಮಿಗಳ ಪಾಲಾಗುತ್ತಿದೆ. ಇದಕ್ಕೆ ಬದಲಾಗಿ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಸಿಗುವಂತಾಗಬೇಕು  ಎಂದು ರಾಹುಲ್‌ ಗಾಂಧಿ ಅಭಿಪ್ರಾಯಪಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next