Advertisement

ಹೇರಿಕುದ್ರು: ಅಪಾಯಕ್ಕೆ ಆಹ್ವಾನ ನೀಡುವ ಅಂಡರ್‌ಪಾಸ್‌ ರಸ್ತೆ

01:35 AM Dec 26, 2018 | Karthik A |

ಕುಂದಾಪುರ: ಕುಂದಾಪುರದ ಮುಖ್ಯ ಸೇತುವೆ ಅನಂತರ ಸಿಗುವ ಹೇರಿಕುದ್ರು ಅಂಡರ್‌ಪಾಸ್‌ನ ಕಾಮಗಾರಿ ಮುಗಿದಿದ್ದು ವಾಹನಗಳ ಓಡಾಟ ಆರಂಭವಾಗಿದೆ. ಆದರೆ ಹೇರಿಕುದ್ರು ಅಂಡರ್‌ಪಾಸ್‌ಗೆ ಬಿಟ್ಟುಕೊಟ್ಟ ರಸ್ತೆಯ ಬದಿ ಅಪಾಯಕಾರಿಯಂತಿದೆ. ರಸ್ತೆಯೂ ಇಳಿಜಾರಿನಲ್ಲಿ ಆತಂಕ ಮೂಡಿಸುತ್ತಿದೆ.

Advertisement

ಅಂಡರ್‌ಪಾಸ್‌
ಜನರ ಬಹುಕಾಲದ ಬೇಡಿಕೆ ನಂತರ ಈ ಸೇತುವೆಯ ಬಳಿಕ ಅಂಡರ್‌ಪಾಸ್‌ ಒಂದನ್ನು ನಿರ್ಮಿಸಲಾಗಿದೆ. ಕೆಲವು ಸಮಯದ ಹಿಂದೆ ಇದನ್ನು ಜನತೆಗೆ ಉಪಯೋಗಕ್ಕೆ ಬಿಟ್ಟುಕೊಡಲಾಗಿದೆ. ಕಾಮಗಾರಿ ನಿರ್ಮಾಣದ ವೇಳೆ ಬೇಸಗೆಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ನ ಸಮಸ್ಯೆಉಂಟಾಗಿ ಜನತೆ ಪ್ರತಿಭಟನೆ ನಡೆಸಿದ ಬಳಿಕ ಸರಿಪಡಿಸಿಕೊಡಲಾಗಿತ್ತು.

ಕೂಡು ರಸ್ತೆಗೆ ಅಪಾಯ
ಅಂಡರ್‌ ಪಾಸ್‌ ಆರಂಭವಾಗುವಲ್ಲಿಂದ ಹೇರಿ ಕುದ್ರುವಿಗೆ ಹೋಗುವ 20 ಅಡಿ ಆಳದ ರಸ್ತೆ ಕಾಮಗಾರಿ ಮುಗಿದಿದ್ದು ಯಾವಾಗ ಮಣ್ಣಿನಿಂದ ಆವೃತವಾಗಲಿದೆ ಎಂಬ ಪ್ರಶ್ನೆ ಎದ್ದಿದೆ. ಹಾಗೊಂದು ವೇಳೆಯಾದರೆ ಅದು ರಾಷ್ಟ್ರೀಯ ಹೆದ್ದಾರಿಗೂ ಅಪಾಯಕಾರಿಯಾಗಲಿದೆ. ಹಾಗಾಗಿ ಈ ಪ್ರದೇಶದಲ್ಲಿ ಸಂಚರಿಸುವ ವಾಹನ ಸವಾರರು, ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ರಸ್ತೆ ತಿರುಗಿದಲ್ಲಿ ಮಳೆಯಿಂದಾಗಿ ಅಂಡರ್‌ಪಾಸ್‌ಗೆ ಕಟ್ಟಿದ ಗೋಡೆಯಿಂದ ಜಲ್ಲಿ, ಮಣ್ಣು ಹೊರಗೆ ಸುರಿಯಲಾರಂಭಿಸಿದಾಗ ಪತ್ರಿಕೆ ವರದಿ ಮಾಡಿತ್ತು. ಅದನ್ನೇನೋ ಸರಿಪಡಿಸಲಾಗಿತ್ತು. ಕಾಮಗಾರಿಗಾಗಿ ಕಬ್ಬಿಣದ ಬಲೆ ಅಳವಡಿಸಿ ಅದರ ಮೇಲೆ ಜಲ್ಲಿಯನ್ನು ಪದರಗಳಂತೆ ಹಾಕಲಾಗಿದೆ. ಅದರ ಮೇಲೆ ಮಣ್ಣು ಹಾಕಲಾಗಿದೆ. ಮಳೆಗೆ ಮಣ್ಣು ಅಥವಾ ಜಲ್ಲಿ ಹೋದಲ್ಲಿ ಅಂಡರ್‌ಪಾಸ್‌ ಕಾಮಗಾರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ತತ್‌ಕ್ಷಣ ಈ ಕುರಿತು ಗಮನ ಹರಿಸಿ ಪರ್ಯಾಯ ಪರಿಹಾರ ಹುಡುಕಬೇಕಿದೆ. ಇಲ್ಲದಿದ್ದರೆ ಕಾಮಗಾರಿಗೆ ಅಪಾಯ ಮಾತ್ರವಲ್ಲ ಈ ಭಾಗದ ರಸ್ತೆಗೂ ಸಂಚಕಾರ. ವಾಹನಗಳೇ ಓಡಾಡದಂತೆ ರಸ್ತೆ ಸಂಚಾರ ಬಂದ್‌ ಆಗುವ ಸಾಧ್ಯತೆಯೂ ಇದೆ.

ತಡೆ ಮಾಡಲಿ
ಹೆದ್ದಾರಿಯ ಡಾಮರಿನ ಅಡಿ ಇರುವ ಮಣ್ಣು ಹೇರಿಕುದ್ರುವಿಗೆ ಹೋದ ಇಳಿಜಾರಿನ ರಸ್ತೆಗೆ ಬೀಳದಂತೆ ಕ್ರಮ ವಹಿಸಬೇಕಿದೆ. ಈಗಾಗಲೇ ಕೆಲವೆಡೆ ಸಿಮೆಂಟ್‌ ಹಾಕಿದಂತೆ ಇಲ್ಲಿಯೂ ಹೆದ್ದಾರಿಯ ಅಡಿಗೆ ಸಿಮೆಂಟ್‌ ಹಾಕಬೇಕಿದೆ.

ರಸ್ತೆಯನ್ನೇ ಎತ್ತರಿಸಲಿ
ತಿರುವನ್ನೊಳಗೊಂಡ ಇಳಿಜಾರಿನ ರಸ್ತೆಯೂ ಅಪಾಯಕಾರಿಯಾಗಿದೆ. ವಾಹನಗಳೇ ಪಲ್ಟಿಯಾಗುವ ಮಾದರಿಯಲ್ಲಿ ರಸ್ತೆ ನಿರ್ಮಿಸಲಾಗಿದೆ. ರಸ್ತೆಯನ್ನು ಎತ್ತರ ಮಾಡಿ ಅಪಾಯವನ್ನು ತಪ್ಪಿಸಬೇಕು ಎಂಬ ಬೇಡಿಕೆ ಕೂಡಾ ಸ್ಥಳೀಯರದ್ದಾಗಿದೆ.

Advertisement

ಶೀಘ್ರ ಪೂರೈಸಿ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಎಷ್ಟು ವರ್ಷಗಳಿಂದ ಮಾಡುತ್ತಿದ್ದರೂ ಇನ್ನೂ ಮುಗಿಸಿಲ್ಲ ಎನ್ನುತ್ತಾರೆ ಸ್ಥಳೀಯರು. ವಿಳಂಬ ಗತಿಯ ಕಾಮಗಾರಿಯಿಂದಾಗಿ ಅದೆಷ್ಟೋ ತೊಂದರೆಗಳಾಗುತ್ತಿವೆ. ಇಲ್ಲೇ ಪಕ್ಕದಲ್ಲಿ ಶ್ರದ್ಧಾ ಕೇಂದ್ರವೂ ಒಂದು ಇದ್ದು ಭಕ್ತರು ಕಾಣಿಕೆ ಸಂದಾಯ ಮಾಡಲು ವಾಹನಗಳನ್ನು ನಿಲ್ಲಿಸುತ್ತಾರೆ. ಆದರೆ ಆಚೆ ಬದಿಯ ರಸ್ತೆ ಈಗ ಸಂಚಾರ ನಿರ್ಬಂಧ ಇರುವ ಕಾರಣ ಒಂದೇ ರಸ್ತೆಯಲ್ಲಿ ದ್ವಿಪಥ ಸಂಚಾರ ಆಗುತ್ತಿದ್ದು ಒಟ್ಟು ಗೊಂದಲ ಮುಂದುವರಿದಿದೆ. ಅಪೂರ್ಣ ಕಾಮಗಾರಿಯಿಂದಾಗಿ ವಾಹನಗಳ ಸರಾಗ ಓಡಾಟಕ್ಕೆ ತೊಂದರೆಯಾಗುತ್ತಿದೆ. 

ಗಮನಿಸುವುದಿಲ್ಲ
ಕಾಮಗಾರಿ ಮಾಡುವವರ ಬಳಿ ಎಷ್ಟೇ ಮನವಿ ಮಾಡಿದರೂ ಅವರು ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಪ್ರತಿಯೊಂದಕ್ಕೂ ಹೋರಾಟ ಮಾಡುತ್ತಾ ಕೂರಲಾಗುತ್ತಾ. ಸಂಬಂಧಪಟ್ಟ ಜನಪ್ರತಿನಿಧಿಗಳಾದರೂ ಗುತ್ತಿಗೆದಾರರಿಗೆ ಎಚ್ಚರಿಕೆ ಕೊಟ್ಟರೆ ಆಗುತ್ತದೆ.
– ಸುಧೀರ್‌ ಶೆಟ್ಟಿ, ಸ್ಥಳೀಯರು

— ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next