Advertisement

Under-19 World Cup: ಬಾಂಗ್ಲಾ ವಿರುದ್ಧ ಭಾರತ ಜಯಭೇರಿ

11:00 PM Jan 20, 2024 | Team Udayavani |

ಬ್ಲೋಮ್‌ಫಾಂಟೇನ್‌: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ತಮ ನಿರ್ವಹಣೆ ನೀಡಿದ ಭಾರತ ತಂಡವು ಬಾಂಗ್ಲಾದೇಶವನ್ನು 84 ರನ್ನುಗಳಿಂದ ಸೋಲಿಸಿ ಅಂಡರ್‌ -19 ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಗೆಲುವಿನ ಶುಭಾರಂಭ ಮಾಡಿದೆ.

Advertisement

ಗೆಲ್ಲಲು 252 ರನ್‌ ಗಳಿಸುವ ಸವಾಲು ಪಡೆದ ಬಾಂಗ್ಲಾದೇಶ ತಂಡವು ಒಂದು ಹಂತದಲ್ಲಿ 50 ರನ್ನಿಗೆ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಬಿದ್ದರೂ ಆಬಳಿಕ ಚೇತರಿಸಿಕೊಂಡಿತು. ಆದರೆ ಮತ್ತೆ ಕುಸಿತ ಕಾರಣ ಅಂತಿಮವಾಗಿ 45.5 ಓವರ್‌ಗಳಲ್ಲಿ 167 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು. ಈ ಮೊದಲು ಆದರ್ಶ್‌ ಸಿಂಗ್‌ ಮತ್ತು ನಾಯಕ ಉದಯ ಸಹರನ್‌ ಅವರ ತಾಳ್ಮೆಯ ಅರ್ಧಶತಕದಿಂದಾಗಿ ಭಾರತ “ಎ’ ತಂಡವು 7 ವಿಕೆಟಿಗೆ 251 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು. ಇದು ಈ ನೆಲದಲ್ಲಿ ದಾಖಲಾದ ಮೂರನೇ ಗರಿಷ್ಠ ಮೊತ್ತವಾಗಿದೆ.

ಆರಂಭಿಕ ಕುಸಿತ
ಬಾಂಗ್ಲಾದ ಆರಂಭ ಉತ್ತಮ ವಾಗಿರಲಿಲ್ಲ. ಭಾರತೀಯರ ದಾಳಿಗೆ ಕುಸಿದ ಬಾಂಗ್ಲಾ 50 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಆದರೆ ಆರನೇ ವಿಕೆಟಿಗೆ ಅರಿಫ‌ುಲ್‌ ಇಸ್ಲಾಂ ಮತ್ತು ಮೊಹಮ್ಮದ್‌ ಶಿಹಾಬ್‌ ಜೇಮ್ಸ್‌ ಅವರು 77 ರನ್ನುಗಳ ಜತೆಯಾಟ ನಡೆಸಿದ್ದರಿಂದ ಬಾಂಗ್ಲಾ ತಿರುಗೇಟು ನೀಡುವ ಸೂಚನೆ ನೀಡಿತ್ತು. ಆದರೆ ಈ ಜೋಡಿ ಮುರಿದ ಬಳಿಕ ಮತ್ತೆ ಕುಸಿತ ಕಂಡ ಬಾಂಗ್ಲಾದೇಶ 167 ರನ್ನಿಗೆ ಆಲೌಟಾಯಿತು. 54 ರನ್‌ ಗಳಿಸಿದ ಜೇಮ್ಸ್‌ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರೆ ಅರಿಫ‌ುಲ್‌ ಇಸ್ಲಾಂ 41 ರನ್‌ ಹೊಡೆದರು.
ಮಾರಕ ದಾಳಿ ಸಂಘಟಿಸಿದ ಸೌಮಿ ಪಾಂಡೆ ತನ್ನ 9.5 ಓವರ್‌ಗಳ ದಾಳಿಯಲ್ಲಿ ಕೇವಲ 24 ರನ್‌ ನೀಡಿ ನಾಲ್ಕು ವಿಕೆಟ್‌ ಉರುಳಿಸಿ ತಂಡದ ಗೆಲುವಿಗೆ ಕೊಡುಗೆ ಸಲ್ಲಿಸಿದರು. ಮುಶೀರ್‌ ಖಾನ್‌ 35 ರನ್ನಿಗೆ 2 ವಿಕೆ‌ಟ್‌ ಪಡೆದರು.

ಆದರ್ಶ್‌, ಸಹರನ್‌ ಆಸರೆ
ತಂಡದ 31 ರನ್‌ ಗಳಿಸುವಷ್ಟರಲ್ಲಿ ಎರಡು ವಿಕೆಟ್‌ ಕಳೆದುಕೊಂಡಿದ್ದರೂ ಆಬಳಿಕ ಆದರ್ಶ್‌ ಮತ್ತು ಸಹರನ್‌ ಅಮೋಘವಾಗಿ ಆಡಿ ತಂಡವನ್ನು ಆಧರಿಸಿದ್ದರು. ಅವರಿಬ್ಬರು ಮೂರನೇ ವಿಕೆಟಿಗೆ 116 ರನ್ನುಗಳ ಜತೆಯಾಟ ನಡೆಸಿ ತಂಡವನ್ನು ಪಾರು ಮಾಡಿದರು. ಆದರ್ಶ್‌ 76 ರನ್‌ ಗಳಿಸಿದ್ದರೆ ಸಹರನ್‌ 64 ರನ್‌ ಗಳಿಸಿದರು.
ಬಿಗು ದಾಳಿ ಸಂಘಟಿಸಿದ ಮರುಫ್ ಮೃಧ 43 ರನ್ನಿಗೆ 5 ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರು
ಭಾರತ 7 ವಿಕೆಟಿಗೆ 251 (ಆದರ್ಶ್‌ ಸಿಂಗ್‌ 76, ಉದಯ್‌ ಸಹರನ್‌ 64, ಮರುಫ್ ಮೃಧ 43ಕ್ಕೆ 5); ಬಾಂಗ್ಲಾದೇಶ 45.5 ಓವರ್‌ಗಳಲ್ಲಿ 157 (ಅರಿಫ‌ುಲ್‌ ಇಸ್ಲಾಂ 41, ಮೊಹಮ್ಮದ್‌ ಜೇಮ್ಸ್‌ 54, ಸೌಮಿ ಪಾಂಡೆ 24ಕ್ಕೆ 4, ಮುಶೀರ್‌ ಖಾನ್‌ 35ಕ್ಕೆ 2).

Advertisement
Advertisement

Udayavani is now on Telegram. Click here to join our channel and stay updated with the latest news.

Next