Advertisement

WTC; 2ನೇ ಸ್ಥಾನಕ್ಕೆ ಕುಸಿದ ಭಾರತ: ಆಸ್ಟ್ರೇಲಿಯ ವಿರುದ್ಧ 5 ಟೆಸ್ಟ್‌ಗಳಲ್ಲಿ 4 ಗೆಲ್ಲಬೇಕು!

12:02 AM Nov 04, 2024 | Team Udayavani |

ದುಬಾೖ: ನ್ಯೂಜಿಲ್ಯಾಂಡ್‌ ವಿರುದ್ಧ ವೈಟ್‌ವಾಶ್‌ ಅನುಭವಿಸಿದ ಭಾರತ, ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಯಾದಿಯಲ್ಲಿ ಅಗ್ರಸ್ಥಾನದಿಂದ ಜಾರಿ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಈ ಅವಧಿಯ 14 ಟೆಸ್ಟ್‌ಗಳಲ್ಲಿ ಭಾರತದ ಗೆಲುವಿನ ಪ್ರತಿಶತ ಸಾಧನೆ 58.33ಕ್ಕೆ ಇಳಿದಿದೆ. ದ್ವಿತೀಯ ಸ್ಥಾನಿಯಾಗಿದ್ದ ಆಸ್ಟ್ರೇಲಿಯ ಅಗ್ರಸ್ಥಾನಕ್ಕೆ ನೆಗೆದಿದೆ (62.50). ಶ್ರೀಲಂಕಾ 3ನೇ ಸ್ಥಾನದಲ್ಲಿದೆ (55.56). ಇದೇ ವೇಳೆ ನ್ಯೂಜಿಲ್ಯಾಂಡ್‌ 4ನೇ ಸ್ಥಾನಕ್ಕೆ ಏರಿದೆ (54.54).

Advertisement

ಭಾರತ ಬೇರೆ ತಂಡಗಳ ಹಂಗಿ ಲ್ಲದೆ ಫೈನಲ್‌ ಪ್ರವೇಶಿಸಬೇಕಾದರೆ ಮುಂಬರುವ ಆಸ್ಟ್ರೇಲಿಯ ಪ್ರವಾಸದ 5 ಟೆಸ್ಟ್‌ಗಳಲ್ಲಿ ನಾಲ್ಕನ್ನು ಗೆಲ್ಲಬೇಕು. ಇಲ್ಲವಾದರೆ ಶ್ರೀಲಂಕಾದ ಟೆಸ್ಟ್‌ ಫಲಿತಾಂಶವನ್ನು ಅವಲಂಬಿಸಬೇಕು. ಅದು ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಡಲಿದೆ.

ಪಂತ್‌ ಡಿಆರ್‌ಎಸ್‌ ಔಟ್‌ ವಿವಾದ
ಎರಡೂ ಇನ್ನಿಂಗ್ಸ್‌ಗಳಲ್ಲಿ (60, 64) ರಿಷಭ್‌ ಪಂತ್‌ ಹೋರಾಟಕಾರಿ ಬ್ಯಾಟಿಂಗ್‌ ಮಾಡಿ ಇನ್ನಿಂಗ್ಸ್‌ ಅನ್ನು ಕಟ್ಟಿದ್ದರು. 2ನೇ ಇನ್ನಿಂಗ್ಸ್‌ನಲ್ಲಿ ಅವರು 7ನೇಯವರಾಗಿ ಔಟಾಗುವಾಗ ಭಾರತದ ಮೊತ್ತ 106 ಆಗಿತ್ತು. ಆ ಹೊತ್ತಿನಲ್ಲಿ ಅಜಾಜ್‌ ಎಸೆತದಲ್ಲಿ ಪಂತ್‌ ಬಾರಿಸಿದ ಚೆಂಡು ವಿಕೆಟ್‌ ಕೀಪರ್‌ ಕೈಸೇರಿತು. ಆನ್‌ಫೀಲ್ಡ್‌ ಅಂಪಾಯರ್‌ ನಾಟೌಟ್‌ ಕೊಟ್ಟರು. ಡಿಆರ್‌ಎಸ್‌ನಲ್ಲೂ ಔಟ್‌ ಸ್ಪಷ್ಟವಾಗಲಿಲ್ಲ. ಕಡೆಗೆ ತೃತೀಯ ಅಂಪಾಯರ್‌ ಇಲ್ಲಿಂಗ್‌ವರ್ತ್‌ ಚೆಂಡು ಬ್ಯಾಟ್‌ಗೆ ತಾಕಿರುವ ಸಣ್ಣ ಸುಳಿವಿನ ಆಧಾರದಲ್ಲಿ ಔಟ್‌ ನೀಡಿದರು. ಇದನ್ನು ಪಂತ್‌ ಬಲವಾಗಿ ಪ್ರತಿಭಟಿಸಿದರು.

ಮೂರೇ ದಿನಕ್ಕೆ ಮುಗಿದ ಮೂರೂ ಟೆಸ್ಟ್‌ !
ಮುಂಬಯಿಯ ವಾಂಖೇಡೆ ಟೆಸ್ಟ್‌ ಕೇವಲ ಎರಡೂವರೆ ದಿನಗಳಲ್ಲಿ ಮುಗಿದು ಹೋಯಿತು. ವಿಚಿತ್ರವೆಂದರೆ ಬೆಂಗಳೂರು ಹಾಗೂ ಪುಣೆ ಪಂದ್ಯಗಳು ಕೂಡ 3 ದಿನಗಳಲ್ಲೇ ಮುಗಿದು ಹೋಗಿದ್ದವು. ಬೆಂಗಳೂರು ಪಂದ್ಯದ ವೇಳೆ ಮಳೆ ಸುರಿದಿದ್ದರಿಂದ 2 ದಿನಕ್ಕೂ ಹೆಚ್ಚು ಕಾಲ ಪಂದ್ಯ ನಡೆದಿರಲೇ ಇಲ್ಲ.

6 ಇನ್ನಿಂಗ್ಸ್‌ : ಕೊಹ್ಲಿ 93, ರೋಹಿತ್‌ 91 ರನ್‌!
ಭಾರತೀಯ ತಂಡದ ಸೋಲಿಗೆ ಬ್ಯಾಟಿಂಗ್‌ ಕೈಕೊಟ್ಟಿದ್ದು ಪ್ರಧಾನ ಕಾರಣ. ಅದರಲ್ಲೂ ಹಿರಿಯ ಬ್ಯಾಟರ್‌ಗಳಾದ ವಿರಾಟ್‌ ಕೊಹ್ಲಿ, ನಾಯಕ ರೋಹಿತ್‌ ಶರ್ಮ ಸಂಪೂರ್ಣ ವೈಫ‌ಲ್ಯ ಅನುಭವಿಸಿದರು. ಇಬ್ಬರೂ 3 ಟೆಸ್ಟ್‌ಗಳ 6 ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 93, 91 ರನ್‌ ಗಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next