Advertisement

ಅಶುಚಿತ್ವ: ನಿರ್ಮಲ ಗ್ರಾಮ ಪ್ರಶಸ್ತಿಯನ್ನು ಹಿಂದಿರುಗಿಸಲು ಆಗ್ರಹ

03:01 PM Apr 07, 2017 | Team Udayavani |

ಮಡಿಕೇರಿ: ನೆಲ್ಯಹುದಿಕೆೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಡಾವಣೆೆಗಳು ಗಬ್ಬೆದ್ದು ನಾರುತ್ತಿದ್ದು, ಅಶುಚಿತ್ವದ ವಾತಾವರಣದಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆಯೆಂದು ಆತಂಕ ವ್ಯಕ್ತಪಡಿಸಿರುವ ಸ್ವತ್ಛತೆ, ಪರಿಸರ ಹಾಗೂ ನೈರ್ಮಲ್ಯ ಜಾಗೃತಿ ಸಮಿತಿ, ಗ್ರಾಮ ಪಂಚಾಯ್ತಿಗೆ ನೀಡಲಾಗಿರುವ ನಿರ್ಮಲ ಗ್ರಾಮ ಪ್ರಶಸ್ತಿಯನ್ನು ಸರಕಾರಕ್ಕೆ ಹಿಂದಿರುಗಿಸಬೇಕೆಂದು ಒತ್ತಾಯಿಸಿದೆ.

Advertisement

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಹೊಸಮನೆ ವಸಂತ ಕುಮಾರ್‌, ಕಸ ವಿಲೇವಾರಿ ಬಗ್ಗೆ ಕಾಳಜಿ ತೋರದ ಗ್ರಾಮ ಪಂಚಾಯ್ತಿ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರು. ಗ್ರಾಮದಲ್ಲಿ ಪ್ಲಾಸ್ಟಿಕ್‌ ನಿಷೇಧವಿದ್ದರೂ ಎಲ್ಲಾ ಅಂಗಡಿ ಮಳಿಗೆಗಳಲ್ಲಿ ಪ್ಲಾಸ್ಟಿಕ್‌ಗಳನ್ನು ಬಳಸಲಾಗುತ್ತಿದೆ. ಚರಂಡಿಯಲ್ಲಿ ಶೌಚಾಲಯದ ನೀರು ಹರಿಯುತ್ತಿದ್ದು, ಈ ನೀರು ಕಾವೇರಿ ನದಿಯನ್ನು ಸೇರುತ್ತಿರುವುದರಿಂದ ರೋಗ ಭೀತಿ ಎದುರಾಗಿದೆ. 

 ಕಳೆೆದ ವರ್ಷ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಮಲೇರಿಯ ರೋಗ ಕಾಣಿಸಿಕೊಂಡಿತ್ತು. ಈ ವರ್ಷವೂ ಕಾವೇರಿ ನದಿ ಕಲುಷಿತಗೊಂಡು ಕಪ್ಪು ಬಣ್ಣಕ್ಕೆ ಪರಿವರ್ತನೆಯಾಗಿದ್ದು, ಈ ನೀರನ್ನು ಬಳಸುವವರಿಗೆ ಚರ್ಮದ ಕಾಯಿಲೆ ಕಾಡಿದೆ. ನೆಲ್ಯಹುದಿಕೇರಿ ಒಂದು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದ್ದು, ಅಕ್ಕಪಕ್ಕದ ಗ್ರಾಮಗಳ ನಿವಾಸಿಗಳು ಕೂಡ ಕಸದ ರಾಶಿಯನ್ನು ತಂದು ಹಾಕುತ್ತಿದ್ದಾರೆ. ಎಲ್ಲೆಂದರಲ್ಲಿ ಮೀನು ಮಾಂಸದ ತ್ಯಾಜ್ಯ ಬಿದ್ದಿದ್ದು, ನೊಣಗಳ ಹಾವಳಿ ಹೆಚ್ಚಾಗಿದೆ ಎಂದರು.

    ಇದರಿಂದ ಹೊಟೇಲ್‌ಗ‌ಳ ವ್ಯಾಪಾರ ವಹಿವಾಟಿಗೂ ಅಡ್ಡಿಯಾಗುತ್ತಿದ್ದು, ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆಗಳಿದೆ ಎಂದು ವಸಂತ ಕುಮಾರ್‌ ತಿಳಿಸಿದರು.

    ಇತ್ತೀಚೆಗೆ ನೆಲ್ಯಹುದಿಕೇರಿ ಗ್ರಾಮ ಪಂಚಾಯ್ತಿಗೆ ನಿರ್ಮಲ ಗ್ರಾಮ ಪ್ರಶಸ್ತಿ ಲಭ್ಯವಾಗಿದ್ದು, ಗ್ರಾಮದಲ್ಲಿ ಅಶುಚಿತ್ವದ ವಾತಾವರಣ ಇರುವುದರಿಂದ ಈ ಪ್ರಶಸ್ತಿಯನ್ನು ಹಿಂದಿರುಗಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟರು. 
ಕಂದಾಯ ಅಧಿಕಾರಿಗಳು ಕಸ ವಿಲೇವಾರಿಗೆ ಸೂಕ್ತ ಜಾಗವನ್ನು ಗುರುತಿಸಿ ನೀಡಬೇಕೆಂದು ಒತ್ತಾಯಿಸಿದ ಅವರು, ಜಿಲ್ಲಾ ಪಂಚಾಯ್ತಿ ಹಾಗೂ ಜಿಲ್ಲಾಡಳಿತ ಶುಚಿತ್ವಕ್ಕೆ ಆದ್ಯತೆ ನೀಡದಿದ್ದಲ್ಲಿ ಪಕ್ಷಾತೀತವಾಗಿ ತೀವ್ರ ರೀತಿಯ ಹೋರಾಟವನ್ನು ರೂಪಿಸುವುದಾಗಿ ಎಚ್ಚರಿಕೆ ನೀಡಿದರು.

Advertisement

    ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎ.ಕೆ.ಅಬ್ದುಲ್ಲ, ಉಪಾಧ್ಯಕ್ಷರಾದ ಗ್ರೇಸಿ ಮಣಿ, ಪ್ರಮುಖರಾದ ಮಣಿ ಮೊಹಮ್ಮದ್‌, ಟಿ.ಸಿ. ಅಶೋಕ್‌ ಹಾಗೂ ಫ್ರಾನ್ಸಿಸ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next