ಬೀಳಗಿ: ಪಟ್ಟಣದ ವಾರ್ಡ್ ನಂ. 6ರ ಮಂಕಣಿಯವರ ಮನೆಯ ಹತ್ತಿರ ಇರುವ ಮಹಿಳೆಯರ ತಡೆಗೋಡೆಯ ಮರ್ಯಾದಾ ಬಯಲು ಶೌಚಾಲಯದ ದುಸ್ಥಿತಿಗೆ ಸ್ಥಳೀಯ ಮಹಿಳೆಯರು ಹಿಡಿಶಾಪ ಹಾಕುವಂತಾಗಿದೆ.
ಗೋಳು ದೇವರೇ ಬಲ್ಲ: ಈ ಮಹಿಳಾ ಶೌಚಾಲಯಕ್ಕೆ ಹೋಗುವ ದಾರಿಯಗುಂಟ ಮುಳ್ಳುಕಂಟಿಗಳೇ ಆವರಿಸಿವೆ. ಶೌಚಾಲಯಕ್ಕೆ ಹೋಗುವ ರಸ್ತೆ ಮತ್ತು ಶೌಚಾಲಯ ಆವರಣ ಕೆಸರು ಗದ್ದೆಯಿಂದ ಗಲೀಜಾಗಿದೆ. ಶೌಚಾಲಯದ ಪ್ರವೇಶ ದ್ವಾರದಲ್ಲಿಯೇ ಮುಳ್ಳುಕಂಟಿ ಗಿಡಗಳು ಮೆತ್ತಿಕೊಂಡಿರುವ ಪರಿಣಾಮ, ಶೌಚಾಲಯಕ್ಕೆ ತೆರಳಬೇಕಿದ್ದ ಮಹಿಳೆಯರಿಗೆ ಕಾಡಿನ ಗುಹೆಯನ್ನು ಪ್ರವೇಶಿಸಿದಂತಹ ಅನುಭವವಾಗುತ್ತಿದೆ. ವಯೋವೃದ್ಧರ ಸ್ಥಿತಿಯಂತು ದೇವರೇ ಬಲ್ಲ. ರಾತ್ರಿ ವೇಳೆ ಇಲ್ಲಿ ಬೆಳಕಿನ ಸಂಪರ್ಕವೂ ಇಲ್ಲ. ಪರಿಣಾಮ, ಮಹಿಳೆಯರು ಶೌಚಕ್ಕೆ ಹೋಗಬೇಕಾದರೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಕ್ಯಾರೆ ಎನ್ನದ ಅಧಿಕಾರಿಗಳು: ಸ್ಥಳೀಯ ನಾಗರಿಕರು ಹಲವು ಬಾರಿ ಮನವಿ ಮಾಡಿದರೂ ಕೂಡ ಪಪಂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ವರ್ಷಾನುಗಟ್ಟಲೆ ಶೌಚಾಲಯದ ದಾರಿ ಹಾಗೂ ದ್ವಾರದ ಬಳಿ ಮುಳ್ಳುಕಂಟಿಯ ಗಿಡಗಳು ಆವರಿಸಿದ್ದರೂ ಕೂಡ ಈ ಕಡೆಗೆ ತಿರುಗಿಯೂ ಕೂಡ ನೋಡದ ಪಪಂ ಅಧಿಕಾರಿಗಳ ಮನಸ್ಥಿತಿಗೆ ಸ್ಥಳೀಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಶೌಚಾಲಯ ದಾರಿಗೆ ಅಂಟಿಕೊಂಡಿರುವ ಮುಳ್ಳುಕಂಟಿ ತೆರವುಗೊಳಿಸಬೇಕು.. ಶೌಚಾಲಯಕ್ಕೆ ಸುಸಜ್ಜಿತ ರಸ್ತೆ ನಿರ್ಮಿಸಬೇಕು, ಇಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಶೌಚಾಲಯ ಆವರಣ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಹಲವು ಬಾರಿ ಮನವಿ ಮಾಡಿಕೊಂಡರೂ ಕೂಡ ಪಪಂ ಗಮನಹರಿಸುತ್ತಿಲ್ಲ. ಶೌಚಾಲಯ ಅವ್ಯವಸ್ಥೆಯಿಂದಾಗಿ ಮಹಿಳೆಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಪಪಂ ಕ್ರಮ ಕೈಗೊಳ್ಳಬೇಕು. –
ಗುರಪ್ಪ ಮೋದಿ, ಪಪಂ ಮಾಜಿ ಸದಸ್ಯರು
ಶೌಚಾಲಯ ಅವ್ಯವಸ್ಥೆ ಕುರಿತು ಸಾರ್ವಜನಿಕರು ಗಮನ ಸೆಳೆದಿದ್ದಾರೆ. ಶೀಘ್ರ ಶೌಚಾಲಯ ಬಳಿಯಿರುವ ಮುಳ್ಳುಕಂಟಿ ತೆರವುಗೊಳಿಸಲು ಹಾಗೂ ಅಲ್ಲಿನ ಶುಚಿತ್ವದ ಕುರಿತು ಕ್ರಮ ಕೈಗೊಳ್ಳುವೆ –
ಪಿ.ಬಿ.ಜಂಬಗಿ, ಕಿರಿಯ ಆರೋಗ್ಯ ನಿರೀಕ್ಷಕರು, ಪಪಂ
–ರವೀಂದ್ರ ಕಣವಿ