Advertisement

ಬಯಲು ಸೀಮೆಗೆ ವಿದೇಶ ಅತಿಥಿ ಬಂಟಿಂಗ್‌: ಬೈರಾಪುರ ಬೆಟ್ಟದಲ್ಲಿ ಬಾನಾಡಿಗಳ ಕಲರವ

06:13 PM Dec 06, 2024 | Team Udayavani |

ಉದಯವಾಣಿ ಸಮಾಚಾರ
ಗಜೇಂದ್ರಗಡ: ಚಳಿಗಾಲದ ಅತಿಥಿ ಕಪ್ಪು ತಲೆಯ ಬಂಟಿಂಗ್‌ ವಿದೇಶಿ ಪಕ್ಷಿ ಇದೀಗ ಬಯಲು ಸೀಮೆ ನಾಡಿಗೆ ಲಗ್ಗೆ ಇಟ್ಟಿದೆ. ಸಮೀಪದ ಬೈರಾಪೂರ ಬೆಟ್ಟದಲ್ಲಿ ಕಂಡು ಬಂದಿವೆ. ಕಪ್ಪು ತಲೆಯ ಬಂಟಿಂಗ್‌ ಎಂಬೆರಿಜಿಡೇ ಕುಟುಂಬಕ್ಕೆ ಸೇರಿದ ಈ ವಲಸೆ ಹಕ್ಕಿಯ ವೈಜ್ಞಾನಿಕ ಹೆಸರು ಎಂಬೆರಿಜಾ ಮೆಲನೋಸೆಫಾಲಾ. ಈ ಬಂಟಿಂಗ್‌ ಹಕ್ಕಿಗಳು ಯುರೋಪ್‌, ಏಷ್ಯಾದ ಭಾಗಗಳಲ್ಲಿ ಕಂಡು ಬರುವ ಪುಟ್ಟ ಆಕರ್ಷಕ ವರ್ಣರಂಜಿತ ಪಕ್ಷಿಯಾಗಿದೆ. ಇದರು ಹೆಸರು ಸೂಚಿಸುವಂತೆ ಕಪ್ಪು ತಲೆ, ಕಣ್ಣುಗಳ ಮೇಲೆ ಮತ್ತು ಹೊಟ್ಟೆ ಭಾಗ ರೋಮಾಂಚಕ ಹಳದಿ, ಬೆನ್ನು ಸ್ವಲ್ಪ ಕಂದು ವರ್ಣದಿಂದ ಕೂಡಿ ಆಕರ್ಷಕವಾಗಿದೆ.

Advertisement

ಇವು ಸರಾಸರಿ 13-14 ಸೆಂ.ಮೀ ಎತ್ತರ, 15-16 ಸೆಂ.ಮೀ. ದಪ್ಪ ಇದ್ದು, ಭಾರತಕ್ಕೆ ಅಕ್ಟೋಬರ್‌ದಿಂದ ನವೆಂಬರ್‌ ತಿಂಗಳಿನಲ್ಲಿ ವಲಸೆ ಬರುತ್ತವೆ. ತುಂಬಾ ವೇಗವಾಗಿ ಹಾರಬಲ್ಲ ಸಾಮರ್ಥ್ಯ ಹೊಂದಿವೆ. ಬಂಟಿಂಗ್‌ಗಳು ಕುರುಚಲು ಹುಲ್ಲುಗಾವಲಿನ ಕಾಡು ಪ್ರದೇಶದಲ್ಲಿ ಎತ್ತರದ ಹುಲ್ಲು, ಪೊದೆಗಳು, ಚದುರಿದ ಮರಗಳಂತಹ ಸಸ್ಯವರ್ಗದ ಆವಾಸ ಸ್ಥಾನಗಳಲ್ಲಿ ಕಾಣ ಸಿಗುತ್ತವೆ. ಇವು ಸರ್ವಭಕ್ಷಕವಾಗಿದ್ದು ವ್ಯಾಪಕ ಶ್ರೇಣಿಯ ಆಹಾರ ಪದಾರ್ಥಗಳನ್ನು ತಿನ್ನುತ್ತವೆ. ಸಂತಾನೋತ್ಪತ್ತಿ ಅವ ಧಿಯಲ್ಲಿ ಇದು ಪ್ರಮುಖವಾಗಿ ಮಿಡತೆಳು, ಜೀರುಂಡೆ, ಜೇಡ ಮತ್ತು ಇನ್ನಿತರೆ ಕೀಟಗಳನ್ನು ಸೇವಿಸುತ್ತದೆ. ಹಣ್ಣು-ಬೀಜಗಳನ್ನು ಸಹ ವಿರಳವಾಗಿ ಸೇವಿಸುತ್ತದೆ.

ಕಪ್ಪು ತಲೆಯ ಬಂಟಿಂಗ್‌ ಚಳಿಗಾಲದಲ್ಲಿ ಇಲ್ಲಿಗೆ ವಲಸೆ ಬರುತ್ತವೆ. ಇವು ಆಗಸ್ಟ್‌ನಿಂದ ಸೆಪ್ಟೆಂಬರ್‌ನಲ್ಲಿ ತಮ್ಮ ಮೂಲಸ್ಥಾನದಿಂದ ವಲಸೆ ಆರಂಭಿಸಿ ದೊಡ್ಡ ಹಿಂಡುಗಳಲ್ಲಿ ಟರ್ಕಿ, ಇರಾನ್‌, ಪಾಕಿಸ್ತಾನ ಮೂಲಕ ಬರುತ್ತವೆ. ಭಾರತದಲ್ಲಿ ರಾಜಸ್ಥಾನ, ಗುಜರಾತ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯ ಮತ್ತು ದಕ್ಷಿಣ ಭಾರತದ ಇತರ ಭಾಗಗಳಲ್ಲಿ ವಲಸೆ ಬರುತ್ತವೆ. ಕಪ್ಪು ತಲೆಯ ಬಂಟಿಂಗ್‌ಗಳು ಸುಮಧುರ ಕಂಠ ಹೊಂದಿದ್ದು, ಕೇಳಲು ತುಂಬಾ ಇಂಪಾಗಿರುತ್ತದೆ.

ಇವು ಪ್ರಮುಖವಾಗಿ ಕೀಟಗಳನ್ನು ಭಕ್ಷಿಸುವ ಮೂಲಕ ರೈತರಿಗೆ ಕೀಟ ನಿಯಂತ್ರಕಗಳಾಗಿ, ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಾರ್ಚ್‌, ಏಪ್ರಿಲ್‌ ಮೊದಲ ವಾರದವರೆಗೂ ಇದ್ದು ಉಷ್ಣತೆ ಹೆಚ್ಚಿದಂತೆ ಸ್ವಸ್ಥಾನಕ್ಕೆ ಮರಳುತ್ತವೆ. ವಿದೇಶದಿಂದ ಬರುವ ಕಪ್ಪು ತಲೆಯ ಬಂಟಿಂಗ್‌ ಪಕ್ಷಿಗಳನ್ನು ವನ್ಯಜೀವಿ ಛಾಯಗ್ರಾಹಕರಾದ ಸಂಗಮೇಶ ಕಡಗದ, ಅಮೀನ ಅತ್ತರ ಅವರು ಬೈರಾಪೂರ ಬೆಟ್ಟದಲ್ಲಿ ದಾಖಲಿಸಿದ್ದಾರೆ.

ಕಪ್ಪು ತಲೆಯ ಬಂಟಿಂಗ್‌ಗಳು ಗಜೇಂದ್ರಗಡ ತಾಲೂಕಿನ ಬೈರಾಪೂರ ಬೆಟ್ಟದಲ್ಲಿ ಬಹು ಸಂಖ್ಯೆಯಲ್ಲಿ ವಲಸೆ ಬಂದಿರುವುದು ಪಕ್ಷಿ ಪ್ರಿಯರಲ್ಲಿ ಸಂತಸ ತಂದಿದೆ. ಇದರೊಂದಿಗೆ ಈ ಬೆಟ್ಟಗಳ ಪ್ರದೇಶದಲ್ಲಿ ಹಲವಾರ ವಿಭಿನ್ನ ಜಾತಿಯ ರ್ಯಾಪ್ಟರ್‌ ಗಳು ಬಂಟಿಂಗ್‌ಗಳು, ಸಿಪಿಲೆಗಳು ವಲಸೆ ಬರುತ್ತವೆ. ಅಲ್ಲದೆ ಸ್ಥಳೀಯ ಜಾತಿಯ ಪಕ್ಷಿಗಳಿಗೆ ಬೆಟ್ಟ ಆಶ್ರಯ ನೀಡಿದೆ. ಪ್ರತಿ ವರ್ಷ ಚಳಿಗಾಲದಲ್ಲಿ ನಾನು ಇಲ್ಲಿನ ಬೆಟ್ಟಗಳಿಗೆ ಭೇಟಿ ನೀಡುತ್ತೇನೆ.
●ಅಮೀನ್‌ ಅತ್ತರ, ವನ್ಯಜೀವಿ ಛಾಯಾಗ್ರಾಹಕ

Advertisement

*ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next