Advertisement

Koyyur: ಗ್ರಾಮದ ಶಾಲೆಯ ದುಃಸ್ಥಿತಿ; ಕುಸಿಯುವ ಭೀತಿಯಲ್ಲಿ ಬಜಿಲ ಶಾಲೆ

12:57 PM Sep 26, 2024 | Team Udayavani |

ಮಡಂತ್ಯಾರು: ಕೊಯ್ಯೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಬಜಿಲ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕೊಠಡಿ ಕುಸಿಯುವ ಭೀತಿಯಲ್ಲಿದೆ.

Advertisement

ಐದಾರು ವರ್ಷಗಳಿಂದಲೇ ಶಾಲೆ ಕಟ್ಟಡ ಶಿಥಿಲ ಸ್ಥಿತಿಯಲ್ಲಿದೆ. ಗೋಡೆಗಳು ಬಿರುಕು ಬಿಟ್ಟಿವೆ, ಮೇಲ್ಛಾವಣಿಯ ಮರ ಮಟ್ಟುಗಳು ಗೆದ್ದಲು ಹಿಡಿದು ನೇತಾಡುವ ಸ್ಥಿತಿಯಲ್ಲಿವೆ. ಈ ಬಾರಿಯ ಗಾಳಿ ಮಳೆಗೆ ಈ ಕಟ್ಟಡ ಕುಸಿದು ಬೀಳದೆ ಉಳಿದದ್ದೇ ಪುಣ್ಯ. ಹಾಗಂತ, ಯಾವುದೇ ಕ್ಷಣ ಅದು ಅಪಾಯಕ್ಕೆ ಸಿಲುಕಬಹುದು ಎಂಬಂತಿದೆ.

1982ರಲ್ಲಿ ಸ್ಥಳೀಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರಾರಂಭವಾದ ಈ ಶಾಲೆಯಲ್ಲಿ ವರ್ಷಕ್ಕೆ 75ರಿಂದ 80 ಮಕ್ಕಳು ಕಲಿಯುತ್ತಿದ್ದರು. ಇತಿಹಾಸವನ್ನು ನೋಡಿದರೆ ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳಿಗೆ ಶಕ್ತಿ ತುಂಬಿದ ಶಾಲೆ ಇದು. ಆದರೆ, ಈಗ ಕಟ್ಟಡ ಶಿಥಿಲವಾಗಿರುವುದರಿಂದ ಹೆತ್ತವರು ಮಕ್ಕಳನ್ನು ಕಳುಹಿಸುತ್ತಿಲ್ಲ. ಹೀಗಾಗಿ ಈಗಿನ ವಿದ್ಯಾರ್ಥಿಗಳ ಸಂಖ್ಯೆ 30ರಿಂದ 40ಕ್ಕೆ ಇಳಿದಿದೆ.

ಈಗ ಹೊಸದಾಗಿ ನಿರ್ಮಿಸಿರುವ ರಂಗಮಂದಿರದಲ್ಲಿ ಪಾಠಗಳು ನಡೆಯುತ್ತಿವೆ. ಇಲ್ಲಿ ಮಳೆ ಬಂದರೆ ಒದ್ದೆ, ಬೇಸಗೆಯಲ್ಲಿ ಸುಡುಬಿಸಿಲು ಎಂಬ ಪರಿಸ್ಥಿತಿ ಇದೆ. ಅದುದರಿಂದ ಕಟ್ಟಡ ತೆರವು ಗೊಳಿಸಿ, ಕನಿಷ್ಠ 2 ತರಗತಿ ಕೋಣೆಗಳನ್ನು ರಚಿಸಿ ಕೊಡುವಂತೆ ಹೆತ್ತವರು ಮತ್ತು ಎಸ್‌ಡಿಎಂಸಿ ವತಿಯಿಂದ ಇಲಾಖೆಗೆ ಮನವಿ ಮಾಡಲಾಗಿದೆ.

ಶಾಲೆಯ ಪರಿಸ್ಥಿತಿ ಹೇಗಿದೆ?

  • ಇಡೀ ಶಾಲೆಯ ಅಷ್ಟೂ ದೊಡ್ಡ ಕಟ್ಟಡ ಬಳಕೆಗೆ ಯೋಗ್ಯವಾಗಿಲ್ಲ. ಈಗ ಆ ಕಟ್ಟಡದ ಬಳಿ ಯಾರೂ ಹೋಗದಂತೆ ಸಾಂಕೇತಿಕವಾಗಿ ಹಗ್ಗ ಕಟ್ಟಲಾಗಿದೆ.
  • ಈ ಕಟ್ಟಡ ಹಿಂದೆಯೇ ಜೀರ್ಣಾವಸ್ಥೆಯಲ್ಲಿತ್ತು. ಕೊರೊನಾ ಕಾಲದಲ್ಲಿ ಎರಡು ವರ್ಷ ಬಳಕೆಯೇ ಆಗದೆ ಇನ್ನಷ್ಟು ಜೀರ್ಣಗೊಂಡಿತು.
  • ಕಟ್ಟಡದ ಒಂದು ಭಾಗದ ಛಾವಣಿ ತಗ್ಗಿದೆ. ಯಾವುದೇ ಕ್ಷಣ ಬೀಳಬಹುದು.
  • ಗೋಡೆಗಳು ಬಿರುಕುಬಿಟ್ಟಿವೆ, ನೆಲವೂ ಸಂಪೂರ್ಣ ಹಾಳಾಗಿದೆ.
Advertisement

ಶಾಲೆಯ ಆಕ್ಕಪಕ್ಕದಲ್ಲಿ ಮಕ್ಕಳು, ಸಾರ್ವಜನಿಕರು ಓಡಾಡದಂತೆ ಹಗ್ಗವನ್ನು ಕಟ್ಟಿ ಬಂದೋಬಸ್ತ್ ಮಾಡಲಾಗಿದೆ. ಕಳೆದ ಗ್ರಾಮ ಸಭೆಯಲ್ಲಿ ಸಾರ್ವಜನಿಕವಾಗಿ ನಿರ್ಣಯ ಮಾಡಿ ಸಂಬಂಧಿಸಿದ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಮನವಿಯನ್ನು ಕಳುಹಿಸಿ ಕೊಡಲಾಗಿದೆ.
-ಡಾ|ಪ್ರಕಾಶ್‌ ಎಸ್‌., ಪಿಡಿಒ, ಕೊಯ್ಯೂರು ಗ್ರಾ.ಪಂ.

ಮನವಿ ನೀಡಲಾಗಿದೆ
ಕೊಯ್ಯೂರು ಬಜಿಲ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಸರಕಾರದ ಅನುದಾನ ಬರುವುದಿಲ್ಲ. ಪಂಚಾಯತ್‌ನಲ್ಲಿ ಆರ್ಥಿಕ ಸಮಸ್ಯೆಯಿದೆ. ನೂತನ ಕಟ್ಟಡ ರಚನೆಗೆ ಶಾಸಕರಲ್ಲಿ, ಶಿಕ್ಷಣ ಇಲಾಖೆ ಹಾಗೂ ಸಂಘ, ಸಂಸ್ಥೆಗಳಿಗೆ ಮನವಿ ನೀಡಲಾಗಿದೆ.
-ಹರೀಶ್‌ ಗೌಡ ಬಜಿಲ,ಕೊಯ್ಯೂರು ಗ್ರಾಪಂ ಉಪಾಧ್ಯಕ್ಷರು.

ಐದಾರು ವರ್ಷಗಳಿಂದ ಬಾಗಿಲು; ತಾತ್ಕಾಲಿಕ ರಂಗ ಮಂದಿರ ಸ್ಥಾಪನೆ
ಶಿಥಿಲವಾದ ಹಿನ್ನೆಲೆಯಲ್ಲಿ ಕಟ್ಟಡಕ್ಕೆ ಕಳೆದ ಐದು ವರ್ಷಗಳಿಂದ ಬಾಗಿಲು ಹಾಕಲಾಗಿದೆ. ಕುಸಿಯುವ ಭೀತಿಯಲ್ಲಿರುವ ಕಟ್ಟಡವನ್ನು ರಿಪೇರಿ ಮಾಡಲು ಮಳೆ ಹಾನಿ ಅನುದಾನದಲ್ಲಿ ಶಾಸಕರ ನಿಧಿಯಿಂದ 2 ಲಕ್ಷ ಮಂಜೂರು ಆಗಿತ್ತು. ಆದರೆ, ಹಳೆಯ ಕಟ್ಟಡ ರಿಪೇರಿಗೆ ಇಷ್ಟು ಹಣ ಸಾಲುತ್ತಿರಲಿಲ್ಲ. ಹಣಕಾಸು ಕೊರತೆಯಾದ ಹಿನ್ನೆಲೆಯಲ್ಲಿ ಕಟ್ಟಡದ ಬದಲು ರಂಗ ಮಂದಿರ ನಿರ್ಮಾಣ ಮಾಡಲಾಗಿದೆ. ಈಗ ಆ ರಂಗ ಮಂದಿರವೇ ಮಕ್ಕಳಿಗೆ ಆಸರೆಯಾಗಿದೆ. ಕಳೆದ ಮೂರು ವರ್ಷಗಳಿಂದ ಮಕ್ಕಳ ಸಂಖ್ಯೆ ಇಳಿಯುತ್ತಿದ್ದು, 30ರಿಂದ 40ಕ್ಕೆ ಬಂದಿದೆ.

ಕಟ್ಟಡ ತೆರವಿಗೆ ಒತ್ತಾಯ
ಅಡಿಪಾಯದಿಂದ ಮೇಲ್ಚಾವಣಿವರೆಗೂ ಸಂಪೂರ್ಣವಾಗಿ ಶಿಥಿಲ ವ್ಯವಸ್ಥೆಯಲ್ಲಿರುವ ಕಟ್ಟಡವನ್ನು ತಕ್ಷಣ ತೆರವು ಮಾಡಬೇಕು ಎಂಬ ಬೇಡಿಕೆ ಇದೆ. ಶಿಥಿಲವಾದ ಕಟ್ಟಡದ ಬಳಿಯಲ್ಲೇ 1ರಿಂದ 5 ನೇ ತರಗತಿಯ ಸಣ್ಣ, ಪುಟ್ಟ ಮಕ್ಕಳು ಓಡಾಡುವಾಗ ಕಟ್ಟಡ ಉರುಳಿದರೆ ಅಪಾಯ ಸಂಭವಿಸಬಹುದು ಎನ್ನುವುದು ಆತಂಕ. ಜತೆಗೆ ಆ ಕಟ್ಟಡದ ಬಳಿ ಹೋಗದಂತೆ ಸಂಪೂರ್ಣ ನಿರ್ಬಂಧವನ್ನೇನೂ ವಿಧಿಸಲಾಗಿಲ್ಲ.

ಶಿಕ್ಷಕರು, ಕೊಠಡಿಗಳ ಕೊರತೆ
ಶಾಲೆಯಲ್ಲಿ ಓರ್ವ ಮುಖ್ಯ ಶಿಕ್ಷಕಿ, ಒಬ್ಬರು ಆತಿಥಿ ಶಿಕ್ಷಕಿ ಹಾಗೂ ಒಬ್ಬರು ಗೌರವ ಶಿಕ್ಷಕಿಯರಿದ್ದಾರೆ. ನಲಿ, ಕಲಿ, ಕಚೇರಿ ನಿರ್ವಹಣೆ ಮತ್ತು ರಂಗ ಮಂದಿರದಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಮಾಡಲು ಬಹಳ ಕಷ್ಟವಾಗುತ್ತಿದೆ. ಶಾಲೆಯಲ್ಲಿ ಮೂಲ ಮೂಭೂತ ಸೌಕರ್ಯಗಳ ಕೊರತೆ ಇರುವುದರಿಂದ, ಕೆಲವೊಂದು ಪೋಷಕರು ತಮ್ಮಮಕ್ಕಳನ್ನು ದೂರದ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ.

-ಕೆ.ಎನ್‌. ಗೌಡ, ಗೇರುಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next