Advertisement

Udupi: ಬಾಲಕಿಯರ ಬಾಲಮಂದಿರ ಶಿಥಿಲ;ಸೋರುವ ಕಟ್ಟಡ; ಶೌಚಾಲಯ ವ್ಯವಸ್ಥೆಯೂ ಸರಿ ಇಲ್ಲದೆ ಪರದಾಟ

02:27 PM Sep 15, 2024 | Team Udayavani |

ಉಡುಪಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಯಾಚರಿಸುವ ನಿಟ್ಟೂರಿನ ಬಾಲಕಿಯರ ಬಾಲ ಮಂದಿರ ಕಟ್ಟಡ ಶಿಥಿಲವಾಗಿದೆ. ಈ ಕಟ್ಟಡದ ಪರಿಸ್ಥಿತಿ ಹೇಗಿದೆ ಎಂದರೆ, ಮಳೆಗಾಲದಲ್ಲಿ ನೀರು ಸೋರಿಕೆ, ಶೌಚಾಲಯ ವ್ಯವಸ್ಥೆ ಸರಿ ಇಲ್ಲದೆ ಇರುವುದರಿಂದ ಬಾಲಕಿಯರು ರಾತ್ರಿ ಮಗಲು ಬೇರೆ ಕಟ್ಟಡವನ್ನು ಆಶ್ರಯಿಸಬೇಕಾಗಿದೆ. ದೊಡ್ಡಣಗುಡ್ಡೆಯಲ್ಲಿರುವ ಬಾಲಕರ ಬಾಲಮಂದಿರಕ್ಕೂ ಸ್ವಂತ ಕಟ್ಟಡದ ವ್ಯವಸ್ಥೆ ಇಲ್ಲ.

Advertisement

19 ಬಾಲಕಿಯರಿದ್ದಾರೆ…
ತಂದೆ-ತಾಯಿ ಇಲ್ಲದ ಮಕ್ಕಳು, ಭಿಕ್ಷಾಟನೆ ವೇಳೆ ಸಿಕ್ಕಿಬಿದ್ದ‌ ಮಕ್ಕಳು ಸಹಿತ ವಿವಿಧ ಕಾರಣಗಳಿಂದ ಸಾಮಾಜಿಕ, ಕೌಟುಂಬಿಕ ಜೀವನದಲ್ಲಿ ಹೊರಗುಳಿದ 18 ವರ್ಷದೊಳಗಿನ ಮಕ್ಕಳಿಗೆ ಸರಕಾರದ ಬಾಲ ಮಂದಿರದಲ್ಲಿ  ಆಶ್ರಯ ನೀಡಲಾಗುತ್ತದೆ. ಪ್ರಸ್ತುತ  ನಿಟ್ಟೂರಿನ ಬಾಲಕಿಯರ ಬಾಲ ಮಂದಿರದಲ್ಲಿ ವಿವಿಧ ವಯೋಮಾನದ 19 ಮಕ್ಕಳಿದ್ದಾರೆ. ಬಾಲಕರ ಬಾಲ ಮಂದಿರದಲ್ಲಿ 8 ಮಕ್ಕಳಿದ್ದಾರೆ. ಇಲ್ಲಿ ಅವರಿಗೆ ವಸತಿ ಜತೆಗೆ ಶಿಕ್ಷಣ, ಊಟ, ಉಪಾಹಾರ, ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುತ್ತದೆ.

ರಾತ್ರಿ ಮಲಗಲು ಪರ್ಯಾಯ ವ್ಯವಸ್ಥೆ
ನಿಟ್ಟೂರಿನ ಕಟ್ಟಡ  ಮಳೆಗಾಲದಲ್ಲಿ ಸೋರುತ್ತಿತ್ತು. ಶೌಚಾಲಯ ವ್ಯವಸ್ಥೆಯು ಸಮರ್ಪಕವಾಗಿರದ ಹಿನ್ನೆಲೆಯಲ್ಲಿ ಮಕ್ಕಳ ವಾಸ್ತವ್ಯಕ್ಕೆ ಕಟ್ಟಡ ಯೋಗ್ಯವಾಗಿಲ್ಲ ಎಂಬುದನ್ನು ಅರಿತ ಮಕ್ಕಳ ರಕ್ಷಣಾಧಿಕಾರಿಗಳು, ನಿಲಯ ಅಧೀಕ್ಷಕರು ಪಕ್ಕದಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ   ರಾತ್ರಿ ಮಲಗಲು ಮತ್ತು ಶೌಚಾಲಯ ವ್ಯವಸ್ಥೆ ಮಾಡಿದ್ದರು.

ಹೊಸ ಕಟ್ಟಡಕ್ಕೆ ಯೋಜನ ವರದಿ ಸಲ್ಲಿಕೆ
ಬಾಲಕರು ಮತ್ತು ಬಾಲಕಿಯರ ಬಾಲ ಮಂದಿರ ನಿರ್ಮಿಸಲು ಹೊಸ ಪ್ಲಾನ್‌ ತಯಾರಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಒಂದೇ ಜಾಗದಲ್ಲಿ 6 ಕೋ. ರೂ. ವೆಚ್ಚದಲ್ಲಿ ಎರಡು ಪ್ರತ್ಯೇಕ ಕಟ್ಟಡ ನಿರ್ಮಾಣ. ಇದರಲ್ಲಿ ಗ್ರಂಥಾಲಯ, ಸಭಾಂಗಣ, ಅಡುಗೆ ಕೋಣೆ, ಸ್ಟಡಿ ರೂಂ, ಶೌಚಾಲಯ ಮೊದಲಾದ ಮೂಲ ಸೌಕರ್ಯ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ತಯಾರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಕ್ಯಾನಿಂಗ್‌ ವರದಿ ಸಲ್ಲಿಕೆ
ಕಟ್ಟಡ ನಿರ್ಮಾಣಕ್ಕೆ ಪ್ಲ್ರಾನಿಂಗ್‌ ವರದಿಯನ್ನು ಇಲಾಖೆ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಶೀಘ್ರ ಅನುದಾನ ಮಂಜೂರಾಗುವ ಸಾಧ್ಯತೆಯಿದೆ. ಸದ್ಯಕ್ಕೆ ನಿಟ್ಟೂರು ಬಾಲಕಿಯರ ಬಾಲ ಮಂದಿರದ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ.
– ನಾಗರತ್ನಾ ನಾಯ್ಕ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಉಡುಪಿ ಜಿಲ್ಲೆ

Advertisement

-ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next