ನ್ಯೂಯಾರ್ಕ್ : ಅಣ್ವಸ್ತ್ರಗಳನ್ನು ನಿಷೇಧಿಸುವ ಮೊತ್ತ ಮೊದಲ ಜಾಗತಿಕ ಒಪ್ಪಂದವನ್ನು ವಿಶ್ವಸಂಸ್ಥೆ ಅಂಗೀಕರಿಸಿದೆ. 120ಕ್ಕೂ ದೇಶಗಳು ಈ ಒಪ್ಪಂದದ ಪರವಾಗಿ ಮತ ಹಾಕಿವೆ.
ಆದರೆ ಭಾರತ ಮಾತ್ರವಲ್ಲದೆ ಇತರ ಅಣ್ವಸ್ತ್ರ ದೇಶಗಳಾಗಿರುವ ಅಮೆರಿಕ, ಚೀನ ಪಾಕಿಸ್ಥಾನ ಮತ್ತು ಇನ್ನೂ ಹಲವಾರು ರಾಷ್ಟ್ರಗಳು ಈ ಒಪ್ಪಂದದ ಮೇಲಿನ ಚರ್ಚೆಯನ್ನು ಬಹಿಷ್ಕರಿಸಿವೆ.
ಕಳೆದ ಇಪ್ಪತ್ತು ವರ್ಷಗಳಿಂದಲೂ ಅಣ್ವಸ್ತ್ರ ನಿಷೇಧದ ಜಾಗತಿಕ ಒಪ್ಪಂದವನ್ನು ಜಾರಿಗೆ ತರುವ ಪ್ರಯತ್ನಗಳು ನಡೆಯುತ್ತಲೇ ಇದ್ದವು. ಈ ಒಪ್ಪಂದವು ವಿಶ್ವದ ಎಲ್ಲ ದೇಶಗಳನ್ನು ಕಾನೂನು ಬದ್ಧತೆಗೆ ಒಳಪಡಿಸುತ್ತದೆ. ಇದು ವಿಶ್ವದ ಮೊತ್ತ ಮೊದಲ ಬಹುಪಕ್ಷೀಯ ಜಾಗತಿಕ ಒಪ್ಪಂದವಾಗಿದೆ.
ಈ ಒಪ್ಪಂದವನ್ನು ನಿನ್ನೆ ಶುಕ್ರವಾರ ವಿಶ್ವಸಂಸ್ಥೆಯಲ್ಲಿ 122 ದೇಶಗಳು ಪರವಾಗಿ ಮತ ಹಾಕುವುದರೊಂದಿಗೆ ಕರತಾಡನದೊಂದಿಗೆ ಅನುಮೋದಿಸಲಾಯಿತು. ನೆದರ್ಲಂಡ್ ವಿರುದ್ಧ ಮತ ಹಾಕಿದರೆ ಸಿಂಗಾಪುರ ಮತದಾನದಿಂದ ಹೊರಗುಳಿಯಿತು.
ಒಪ್ಪಂದ ಕುರಿತಾದ ಚರ್ಚೆಯಲ್ಲಿ ಭಾರತ ಮತು ಇತರ ಅಣ್ವಸ್ತ್ರ ಸಜ್ಜಿತ ದೇಶಗಳಾಗಿರುವ ಅಮೆರಿಕ, ರಶ್ಯ, ಬ್ರಿಟನ್, ಚೀನ, ಫ್ರಾನ್ಸ್, ಪಾಕಿಸ್ಥಾನ ಮತ್ತು ಉತ್ತರ ಕೊರಿಯ ಹಾಗೂ ಇಸ್ರೇಲ್ ಪಾಲ್ಗೊಳ್ಳಲಿಲ್ಲ. ಈ ಜಾಗತಿಕ ಒಪ್ಪಂದದ ಮೇಲೆ ಈ ವರ್ಷ ಮಾರ್ಚ್‌ನಲ್ಲಿ ವಿಶ್ವಸಂಸ್ಥೆಯಲ್ಲಿ ವಿಸ್ತೃತ ಚರ್ಚೆಯ ಅಧಿವೇಶನ ನಡೆಸಲಾಗಿತ್ತು.