ಮಂಗಳೂರು: ಉಳ್ಳಾಲ ಟಾರ್ಗೆಟ್ ಗ್ರೂಪ್‌ನ ಮುಖಂಡ ಹಾಗೂ ಸಹಚರನನ್ನು ಮಂಗಳೂರು ದಕ್ಷಿಣ ರೌಡಿ ನಿಗ್ರಹದ ದಳದ ಪೊಲೀಸರು ಬಂಧಿಸಿದ್ದಾರೆ. ಟಾರ್ಗೆಟ್ ಗ್ರೂಪ್‌ನ ಮುಖಂಡ ಉಳ್ಳಾಲ ಸುಂದರಿಬಾಗ್ ನಿವಾಸಿ ಇಲ್ಯಾಸ್ ಹಾಗೂ ಸಹಚರ ಉಳ್ಳಾಲದ ಮೇಲಂಗಡಿ ದರ್ಗಾ ನಿವಾಸಿ ಇಮ್ರಾನ್ ಬಂಧಿತರು.
ಇಲ್ಯಾಸ್‌ನನ್ನು ನಗರದ ಜಪ್ಪು ಕುಡುಪಾಡಿ ಮಸೀದಿ ಬಳಿಯ ಫ್ಲಾಟ್ ಒಂದರಲ್ಲಿ ವಾಸವಾಗಿರುವ ಬಗ್ಗೆ ದೊರೆತ ಮಾಹಿತಿಯಂತೆ ರೌಡಿ ನಿಗ್ರಹದಳದ ಸಿಬಂದಿ ದಾಳಿ ಮಾಡಿ ವಶಕ್ಕೆ ಪಡೆದರು. ಈತ ಉಳ್ಳಾಲದಲ್ಲಿ ಸಹಚರರ ಜತೆ ಸೇರಿ ದಾವುದ್ ಕೊಲೆಗೆ ಯತ್ನಿಸಿದ ಆರೋಪಿಯಾಗಿದ್ದು ಬಳಿಕ ತಲೆ ಮರೆಸಿಕೊಂಡಿದ್ದ. ಈತನ ವಿರುದ್ಧ ಬಜಪೆ ಹಾಗೂ ಉತ್ತರ ಕನ್ನಡದ ಯಲ್ಲಾಪುರ, ಕೊಣಾಜೆ ಪೋಲಿಸ್ ಠಾಣೆಗಳಲ್ಲಿ ಒಟ್ಟು 4 ವಾರಂಟ್‌ಗಳಿದ್ದು ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದನು.
ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಉಡುಪಿ ಜಿಲ್ಲೆಯ ಪಡುಬಿದ್ರಿ, ಉತ್ತರ ಕನ್ನಡದ ಯಲ್ಲಾಪುರ ಠಾಣೆಗಳಲ್ಲಿ ಕೊಲೆಯತ್ನ, ದರೋಡೆ, ದರೋಡೆಗೆ ಯತ್ನ ಮೊದಲಾದ ಸುಮಾರು 25 ಪ್ರಕರಣಗಳು ದಾಖಲಾಗಿವೆ. ಸಹಚರ ಇಮ್ರಾನ್‌ನನ್ನು ಮುಂಬಯಿ ನಗರದ ದಾದರ್ ರೈಲು ನಿಲ್ದಾಣದ ಬಳಿ ಇರುವ ವುಡ್‌ಲ್ಯಾಂಡ್ ಗೆಸ್ಟ್ ಹೌಸ್ ಲಾಡ್ಜ್ನಲ್ಲಿ ವಾಸವಾಗಿರುವ ಬಗ್ಗೆ ದೊರೆತ ಮಾಹಿತಿಯಂತೆ ರೌಡಿ ನಿಗ್ರಹದಳದ ಸಿಬಂದಿ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.
ಆತನು ಉಳ್ಳಾಲದಲ್ಲಿ ದಾವೂದ್‌ನನ್ನು ತನ್ನ ಸಹಚರರೊಂದಿಗೆ ಕೊಲೆಗೆ ಯತ್ನಿಸಿದ ಆರೋಪಿಯಾಗಿದ್ದಾನೆ. ಕೃತ್ಯದ ಬಳಿಕ ತಲೆ ಮರೆಸಿಕೊಂಡಿದ್ದನು. ಆತನ ವಿರುದ್ಧ ಬಜಪೆ, ಉಳ್ಳಾಲ ಮತ್ತು ಯಲ್ಲಾಪುರ ಪೊಲೀಸ್ ಠಾಣೆಗಳಲ್ಲಿ ಒಟ್ಟು 3 ವಾರಂಟ್ ಗಳಿದ್ದು ನ್ಯಾಯಲಯಾಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಅಲ್ಲದೆ ಉಳ್ಳಾಲ, ಬಜಪೆ ಮತ್ತು ಯಲ್ಲಾಪುರ ಠಾಣೆಗಳಲ್ಲಿ ಕೊಲೆ ಯತ್ನ, ದರೋಡೆ, ದರೋಡೆಗೆ ಯತ್ನ ಮೊದಲಾದ ಸುಮಾರು 9 ಪ್ರಕರಣಗಳು ದಾಖಲಾಗಿವೆ.
ಆರೋಪಿಗಳಿಬ್ಬರನ್ನೂ ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಂತರಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತ ರಾಯ, ಉಮಾ ಪ್ರಶಾಂತ್ ಅವರ ಮಾರ್ಗ ದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ರೌಡಿ ನಿಗ್ರಹ ದಳದ ಎಸಿಪಿ ರಾಮ ರಾವ್ ಮತ್ತು ಸಿಬಂದಿ ಭಾಗವಹಿಸಿದ್ದರು.