ಹೊಸದಿಲ್ಲಿ: ಪರೀಕ್ಷೆಗಳು ಮತ್ತು ಶೈಕ್ಷಣಿಕ ವರ್ಷದ ಕ್ಯಾಲೆಂಡರ್‌ಗೆ ಸಂಬಂಧಿಸಿದಂತೆ ಈ ಹಿಂದೆ ನೀಡಿದ್ದ ಮಾರ್ಗಸೂಚಿಗಳನ್ನು ಪರಿಷ್ಕರಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗಕ್ಕೆ (ಯುಜಿಸಿ) ಸಲಹೆ ನೀಡಿದ್ದಾರೆ. ಬುಧವಾರ ಅವರು ಈ ಕುರಿತಂತೆ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಪರೀಕ್ಷೆಗಳು ಮತ್ತು ಶೈಕ್ಷಣಿಕ ವರ್ಷದ ಕ್ಯಾಲೆಂಡರ್‌ಗೆ ಸಂಬಂಧಿಸಿದಂತೆ ಯುಜಿಸಿ ಕಳೆದ ತಿಂಗಳು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಅದರಂತೆ ಆಗಸ್ಟ್ 1-31ರೊಳಗೆ ಪ್ರವೇಶ ಪ್ರಕ್ರಿಯೆ ಆರಂಭಿಸಲು ವಿಶ್ವವಿದ್ಯಾಲಯಗಳಿಗೆ ಶಿಫಾರಸ್ಸು ಮಾಡಿತ್ತು. ಅಲ್ಲದೆ, ಕೊರೊನಾ ಹಿನ್ನೆಲೆಯಲ್ಲಿ ತನ್ನ ಅಂತಿಮ ವರ್ಷದ ಸ್ನಾತಕೋತ್ತರ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಓಪನ್ ಬುಕ್ ಎಕ್ಸಾಮಿನೇಷನ್ ಕ್ರಮದಲ್ಲಿ ಜುಲೈ 1ರಿಂದ ಪರೀಕ್ಷೆ ನಡೆಸಲು ದಿಲ್ಲಿ ವಿಶ್ವವಿದ್ಯಾಲಯಕ್ಕೆ ಅನುಮತಿ ನೀಡಿತ್ತು. ದಿಲ್ಲಿ ವಿಶ್ವವಿದ್ಯಾಲಯ ಶಿಕ್ಷಕರ ಸಂಘ ಇದನ್ನು ಆಕ್ಷೇಪಿಸಿತ್ತು.