ವಾಷಿಂಗ್ಟನ್: ನಿಜವಾಗಿಯೂ ವಿಶ್ವದಲ್ಲಿ ಏಲಿಯನ್ಸ್‌ಗಳು ಇವೆಯೇ? ಈ ಪ್ರಶ್ನೆ ಬಹುದಿನಗಳಿಂದ ಪ್ರಶ್ನೆಯಾಗಿಯೇ ಉಳಿದಿದೆ. ಇದಕ್ಕೆ ಉತ್ತರ ಹುಡುಕುವ ನಿಟ್ಟಿನಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೊರಟಿದೆ.
ಏಲಿಯನ್ಸ್‌ಗಳ ಅಧ್ಯಯನಕ್ಕಾಗಿ ಅಮೆರಿಕದ ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತ(ನಾಸಾ) ಸಂಸ್ಥೆ 16 ಸದಸ್ಯರ ತಂಡವೊಂದನ್ನು ರಚಿಸಿದೆ.
“ಅ.24ರಂದು 16 ಸದಸ್ಯರ ತಂಡ ಅಧ್ಯಯನ ಆರಂಭಿಸಲಿದ್ದು, ಒಟ್ಟು ಒಂಬತ್ತು ತಿಂಗಳು ಏಲಿಯನ್ಸ್‌ಗಳ ಬಗ್ಗೆ ಸ್ವತಂತ್ರ ಅಧ್ಯಯನ ನಡೆಸಲಿದೆ,’ ಎಂದು ನಾಸಾ ಟ್ವೀಟ್ ಮಾಡಿದೆ.
“ಕಳೆದ 20 ವರ್ಷಗಳಲ್ಲಿ ಆಕಾಶದಲ್ಲಿ ಗುರುತಿಗೆ ಸಿಗದ ಅಥವಾ ಇದುವರೆಗೂ ಕಾಣಿಸಿಕೊಳ್ಳದ ವಸ್ತುಗಳು ಹೆಚ್ಚಾಗಿ ಕಾಣಿಸಿಕೊಂಡಿವೆ,’ ಎಂದು ಈ ವರ್ಷದ ಆರಂಭದಲ್ಲಿ ಅಮೆರಿಕ ನೌಕಾ ಪಡೆಯ ಗುಪ್ತಚರ ವಿಭಾಗದ ಉಪನಿರ್ದೇಶಕ ಸ್ಕಾಟ್ ಬ್ರೇ ಅಲ್ಲಿನ ಸಂಸತ್‌ಗೆ ಮಾಹಿತಿ ನೀಡಿದ್ದರು.
ಇದು ಏಲಿಯನ್ಸ್‌ಗಳ ಬಗ್ಗೆ ಮೊದಲ ಬಾರಿ ನೀಡಿದ ಅಧಿಕೃತ ಹೇಳಿಕೆಯಾಗಿದೆ. ಕೆಲ ದಿನಗಳ ಹಿಂದೆ ಗಗನಯಾತ್ರಿಗಳಿಗೆ ಅಪರಿಚಿತ ವಸ್ತುಗಳು ಅಡ್ಡ ಬಂದಿದ್ದವು ಎಂದು ವರದಿಯಾಗಿದ್ದವು.